Advertisement
ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉದ್ಯಾನದ ಅಧಿಕಾರಿಗಳು, ಉದ್ಯಾನಕ್ಕೆ ನಿತ್ಯ ಎರಡು ಲಕ್ಷ ಲೀ. ನೀರಿನ ಬೇಡಿಕೆ ಇಟ್ಟು ಕಳೆದ ತಿಂಗಳು ಜಲಮಂಡಳಿಗೆ ಪತ್ರ ಬರೆದಿದ್ದರು. ಉದ್ಯಾನಕ್ಕೆ ನೀರು ಹರಿಸುವ ಕುರಿತು ಜಲಮಂಡಳಿ ಅಧಿಕಾರಿಗಳು ಆಂತರಿಕ ಸಮೀಕ್ಷೆ, ಸಭೆ ನಡೆಸಿದ್ದು, ನೀರು ಹರಿಸಲು ಸಾಧ್ಯವಿದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಕ್ಕೂ ಮೊದಲು ಜಲಮಂಡಳಿ ಆಂತರಿಕ ಸಭೆ ನಡೆಸಿದೆ. ಈ ಸಭೆಯಲ್ಲಿ ನೀರಿನ ಲಭ್ಯತೆ, ಯೋಜನೆಯ ಸಮಸ್ಯೆ, ಪ್ರಯೋಜನಗಳು ಸೇರಿದಂತೆ ತಾಂತ್ರಿಕ ಅಂಶಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಜಲಮಂಡಳಿಯ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಸಿ.ಗಂಗಾಧರ್ “ಉದಯವಾಣಿ’ಗೆ ಮಾಹಿತಿ ನೀಡಿದರು.
ಸದ್ಯ ಆನೇಕಲ್ ಹಾಗೂ ಸೂರ್ಯನಗರಕ್ಕೆ ನೀರು ಪೂರೈಸಲು ಜಲಮಂಡಳಿು ಕೊಳವೆ ಅಳವಡಿಸಿದೆ. ಇಲ್ಲಿಂದ ಕೇವಲ ಒಂದೂವರೆ ಕಿ.ಮೀ ದೂರದಲ್ಲಿ ಬನ್ನೇರುಘಟ್ಟ ಉದ್ಯಾನವಿದ್ದು, ಆ ಕೊಳವೆಗಳಿಂದ ಸಂಪರ್ಕ ಪಡೆದು ಹೊಸ ಕೊಳವೆಗಳನ್ನು ಜೋಡಿಸಿದರೆ ಉದ್ಯಾನಕ್ಕೆ ಸುಲಭವಾಗಿ ನೀರು ಹರಿಸಬಹುದು. ಆದರೆ, ಉದ್ಯಾನ ಬಿಬಿಎಂಪಿ ವ್ಯಾಪ್ತಿಗೆ ಬಾರದಿರುವ ಕಾರಣ, ನೀರು ಹರಿಸಲು ಸರ್ಕಾರದ ಒಪ್ಪಿಗೆ ಬೇಕಿದ್ದು, ಮುಂದಿನ ವಾರ ಪ್ರಸ್ತಾವನೆ ಸಲ್ಲಿಸಲಾಗುವುದು. ಬೇಡಿಕೆ ಹೆಚ್ಚಿರುವುದರಿಂದ ಸರ್ಕಾರ ಶೀಘ್ರ ಒಪ್ಪಿಗೆ ನೀಡಿದರೆ ಎರಡು ತಿಂಗಳಲ್ಲಿ ಕಾಮಗಾರಿ ಪೂರೈಸಿ ಕಾವೇರಿ ನೀರು ನೀಡಬಹುದು ಎಂದು ತಿಳಿಸಿದರು.
ಬನ್ನೇರುಘಟ್ಟ ಉದ್ಯಾನನಕ್ಕೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರಿಗಾಗಿ ಮಾತ್ರ ನಿತ್ಯ 1.5 ಲಕ್ಷ ಲೀ. ನೀರು ಪೂರೈಸಲು ಸಮ್ಮತಿಸಲಾಗಿದೆ. ಜತೆಗೆ, ಯೋಜನೆಯ ಕಾಮಗಾರಿ ವೆಚ್ಚವನ್ನು ಉದ್ಯಾನ ನಿರ್ವಹಣಾ ವಿಭಾಗವೇ ಭರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.-ತುಷಾರ ಗಿರಿನಾಥ್, ಜಲಮಂಡಳಿ ಅಧ್ಯಕ್ಷ * ಜಯಪ್ರಕಾಶ್ ಬಿರಾದಾರ್