Advertisement

ಮತ್ತೆ ಸುಪ್ರೀಂನತ್ತ ಕಾವೇರಿ? 

01:14 AM Mar 07, 2018 | Team Udayavani |

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಕುರಿತು ಮರುಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

Advertisement

ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆದೇಶಿಸಿರುವುದು, ತಮಿಳುನಾಡಿನಲ್ಲಿ ಅಂತರ್ಜಲ ಮಟ್ಟವನ್ನು ಕಡಿಮೆ ಪ್ರಮಾಣದಲ್ಲಿ ಗುರುತಿಸಿರು ವುದು ಮತ್ತು ತಮಿಳುನಾಡು ಕಾವೇರಿ ಕೊಳ್ಳ ವ್ಯಾಪ್ತಿ ಯಲ್ಲಿ ನೀರಾವರಿ ಬೆಳೆ ಪ್ರದೇಶವನ್ನು ಸುಮಾರು 10 ಸಾವಿರ ಎಕರೆ ಹೆಚ್ಚಾಗಿ ಪ್ರಸ್ತಾವಿಸಿದ್ದನ್ನು ಪರಿಗಣಿಸಿರುವ ಮೂರು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಯೋಚಿಸಿದೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ನಡೆಯಲಿರುವ “ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ವಿಧಾನಮಂಡಲದ ಉಭಯ ಸದನಗಳ ವಿಪಕ್ಷ ಮುಖಂಡರು, ಕಾವೇರಿ ಜಲಾನಯನ ಪ್ರದೇಶದ ಶಾಸಕರು, ಸಂಸದರ ಸಭೆ’ಯಲ್ಲಿ ಈ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ.

ಸು. ಕೋ. ತನ್ನ ತೀರ್ಪಿನಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವುದು ಕಡ್ಡಾಯ ಎಂದು ಕೇಂದ್ರಕ್ಕೆ ಸೂಚಿಸಿದೆ. ಈ ರೀತಿಯಾದರೆ ಕಾವೇರಿ ನದಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿರುವ ಜಲಾಶಯಗಳ ಹಕ್ಕು ರಾಜ್ಯದ ಕೈಯಿಂದ ತಪ್ಪಿ ಹೋಗುತ್ತದೆ. ಅಲ್ಲದೆ ಮಳೆ ಕೊರತೆ ಸಂದರ್ಭ ದಲ್ಲಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಿಗದಿತ ಸೂತ್ರವಿಲ್ಲದ ಕಾರಣ ಮಳೆ ಸಮಸ್ಯೆ ಆದಾಗ ರಾಜ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದು ರಾಜ್ಯದ ವಾದ.

ಮಾ. 9ರಂದು ದಿಲ್ಲಿಯಲ್ಲಿ  ಸಭೆ
ಈ ಮಧ್ಯೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಕುರಿತು ಚರ್ಚಿಸಲು ಮಾ. 9ರಂದು ಕಾವೇರಿ ಕೊಳ್ಳದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯನ್ನು ಕೇಂದ್ರ ಸರಕಾರ ಕರೆದಿದೆ.  ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಈ ಸಭೆ ಕರೆದಿದ್ದು, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಸಹಿತ ತೀರ್ಪಿನ ವಿವಿಧ ಅಂಶಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಉಪೇಂದ್ರ ಪ್ರಸಾದ್‌ ಸಿಂಗ್‌ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಆದರೆ ಸದ್ಯಕ್ಕೆ ಮಂಡಳಿ ರಚನೆ ಕಷ್ಟಸಾಧ್ಯ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next