Advertisement

ಬಾವಿಗಿಳಿಯುವಾಗ ಎಚ್ಚರ ಅಗತ್ಯ ; ಆಮ್ಲಜನಕದ ಕೊರತೆ, ವಿಷಾನಿಲ ತುಂಬಿರುವ ಸಾಧ್ಯತೆ

10:06 PM May 27, 2020 | mahesh |

ಕುಂದಾಪುರ: ಎಲ್ಲೆಡೆ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು, ಕೆಲವೆಡೆಗಳಲ್ಲಿ ಕೆರೆ, ಬಾವಿಗಳು ನೀರಿಲ್ಲದೆ ಬತ್ತುತ್ತಿವೆ. ಕರಾವಳಿ ಭಾಗದಲ್ಲಿ ಈ ಸಮಯ ಬಾವಿಗಳಲ್ಲಿ ತುಂಬಿಕೊಂಡಿರುವ ಹೂಳು, ಕೆಸರು ತೆಗೆದು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ ಬಾವಿಯೊಳಗೆ ಆಮ್ಲಜನಕದ ಕೊರತೆಯುಂಟಾಗಿ, ವಿಷಾನಿಲ ತುಂಬಿರುವುದರಿಂದ ಬಾವಿಗಿಳಿಯುವ ಮುನ್ನ ಎಚ್ಚರವಹಿಸಬೇಕಾಗಿದೆ. ಬೇಸಗೆಯಲ್ಲಿ ಆಳವಾದ, ಅಗಲ ಕಡಿಮೆಯಿರುವ ಬಾವಿಗಳಲ್ಲಿ ವಿಷಾನಿಲ ತುಂಬಿಕೊಂಡಿರುವ ಸಾಧ್ಯತೆ ಗಳಿದ್ದು, ಸೂಕ್ತ ಸುರಕ್ಷತಾ ಕ್ರಮಗಳನ್ನು ಮಾಡಿಕೊಂಡು ಬಾವಿಗಿಳಿಯಬೇಕು.

Advertisement

ಗುಡ್ಡಮ್ಮಾಡಿಯಲ್ಲಿ ದುರ್ಘ‌ಟನೆ
ಇದಕ್ಕೆ ಪೂರಕವಾಗಿ ಬುಧವಾರ ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯಲ್ಲಿಯೂ ಘಟನೆ ಸಂಭವಿಸಿದೆ. ಬಾವಿ ಯೊಳಗೆ ಒಬ್ಬರು ಆಯ ತಪ್ಪಿ ಬಿದ್ದಿದ್ದು, ಅವರು ಅಸ್ವಸ್ಥ ಗೊಂಡು ಮೃತಪಟ್ಟರೆ, ಅವರನ್ನು ಮೇಲೆತ್ತಲು ಇಳಿದ ವ್ಯಕ್ತಿಯು ಕೂಡ ಆಮ್ಲಜನಕದ ಕೊರತೆಯಿಂದಾಗಿ ಅಸ್ವಸ್ಥಗೊಂಡಿದ್ದು, ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ಇಲ್ಲದಿರುವುದರಿಂದ ಪ್ರತಿ ವರ್ಷ ಜಿಲ್ಲೆಯಲ್ಲಿ ಬಾವಿಯಿಂದ ಕೆಸರು ತೆಗೆಯುವ ವೇಳೆ ಜೀವಹಾನಿಯಾಗುವ ಪ್ರಕರಣಗಳು ನಡೆಯುತ್ತಲೇ ಇವೆ. ವಿಷಾನಿಲ ಸೇವಿಸಿ ಬಲಿಯಾಗುವ ಅಪಾಯಗಳೂ ಇವೆ. ಹೀಗಾಗಿ, ಎಚ್ಚರವಹಿಸುವುದು ಅತ್ಯಗತ್ಯವಾಗಿದೆ.

ಏನೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು
– ಬಾವಿಗೆ ಇಳಿಯುವ ಮೊದಲು ಬಾವಿಯ ಆಳ ನೋಡಿ ಇಳಿಯುವುದು ಉತ್ತಮ. ಸಾಮಾನ್ಯವಾಗಿ ಆಳ ಜಾಸ್ತಿ ಇರುವ ಬಾವಿಗಳಲ್ಲಿ ಅಪಾಯ ಅಧಿಕ. ಕೆಲವು ಬಾವಿಗಳು 100 ಅಡಿಗಿಂತಲೂ ಅಧಿಕ ಆಳವನ್ನು ಹೊಂದಿರುತ್ತವೆ. ಇಂತಹ ಬಾವಿಗಳು ಅಪಾಯಕಾರಿ.

– ಆಳ ಬಾವಿಗಳಲ್ಲಿ ಆಮ್ಲಜನಕದ ಕೊರತೆ ಅಥವಾ ತ್ಯಾಜ್ಯಗಳು ಕೊಳೆತು ಮಿಥೇನ್‌ ಅನಿಲ ಇರುತ್ತದೆ. ಇಳಿಯುವಾಗ ಆಮ್ಲಜನಕ ಕೊರತೆ ಅಥವಾ ಮಿಥೇನ್‌ ಅನಿಲ ಇಲ್ಲವೆಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

– ಇಳಿಯುವಾಗ ಸೊಂಟಕ್ಕೆ ಹಗ್ಗ ಕಟ್ಟಿ ಅದರ ತುದಿ ಯನ್ನು ಮೇಲೆ ಇರುವವರ ಕೈಯಲ್ಲಿ ಕೊಡಬೇಕು. ಅರ್ಧಕ್ಕೆ ಹೋಗುವಾಗ ಉಸಿರುಕಟ್ಟಿದ ಅನುಭವ ಆದರೆ ತತ್‌ಕ್ಷಣ ಮೇಲೆ ಬರಬೇಕು.

Advertisement

– ಇಳಿಯುವ ಮುನ್ನ ಹಗ್ಗವೊಂದಕ್ಕೆ ಬಕೆಟ್‌ ಕಟ್ಟಿ ಅದರಲ್ಲಿ ದೀಪ ಅಥವಾ ಕ್ಯಾಂಡಲ್‌ ಉರಿಸಿಟ್ಟು ಬಾವಿಗೆ ಇಳಿಸಬೇಕು. ದೀಪ ಆರಿದರೆ ಅಲ್ಲಿ ವಿಷಾನಿಲ ಅಥವಾ ಆಮ್ಲಜನಕದ ಕೊರತೆ ಇದೆ ಎಂದರ್ಥ.

– ಬಾವಿಯೊಳಗೆ ವಿಷಾನಿಲ ಇದ್ದರೆ ಮೇಲಿನಿಂದ ಬಾವಿಗೆ ನೀರು ಹಾಕಬೇಕು. ಆಗ ವಿಷಾನಿಲ ಮೇಲಕ್ಕೆ ಬರುತ್ತದೆ. ಮೇಲಿನಿಂದ ಹಸುರು ಎಲೆಗಳಿರುವ ಮರದ ಗೆಲ್ಲುಗಳನ್ನು ಹಾಕಿದರೆ ಆಮ್ಲಜನಕದ ಕೊರತೆ ಸ್ವಲ್ಪಮಟ್ಟಿಗೆ ಪರಿಹಾರವಾಗುತ್ತದೆ.

ಈ ವರ್ಷ 40 ಪ್ರಕರಣ
ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕಾರ್ಕಳ, ಮಲ್ಪೆ ಹಾಗೂ ಕುಂದಾಪುರ ಈ 4 ಅಗ್ನಿಶಾಮಕ ಠಾಣೆಗಳ ವ್ಯಾಪ್ತಿಯಲ್ಲಿ ಬಾವಿಗೆ ಬಿದ್ದು ಅವಘಡ ಸಂಭವಿಸಿದ 40 ಪ್ರಕರಣಗಳು ದಾಖಲಾಗಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ. ಕಳೆದ ವರ್ಷ ಜಿಲ್ಲೆಯಲ್ಲಿ ಈ ಸಮಯದಲ್ಲಿ 100ಕ್ಕೂ ಅಧಿಕ ಪ್ರಕರಣಗಳಿದ್ದರೆ, ಅದಕ್ಕಿಂತಲೂ ಹಿಂದಿನ ವರ್ಷ ಅಂದರೆ 2018 ರಲ್ಲಿ ಗರಿಷ್ಠ 200ಕ್ಕೂ ಮಿಕ್ಕಿ ಬಾವಿ ಅವಘಡ ಪ್ರಕರಣಗಳು ದಾಖಲಾಗಿದ್ದವು.

ಎಚ್ಚರ ವಹಿಸಿ
ಬಾವಿಗೆ ಇಳಿಯುವ ಮುನ್ನ ಜಾಗರೂಕತೆ ವಹಿಸುವುದು ಅತ್ಯಗತ್ಯ. ಆಳದ ಬಾವಿಗೆ ಇಳಿಯುವ ಮುನ್ನವಂತೂ ಎಚ್ಚರ ವಹಿಸಲೇಬೇಕು. ಈ ಬಾರಿ ಲಾಕ್‌ಡೌನ್‌ನಿಂದಾಗಿ ಸ್ವಲ್ಪ ಮಟ್ಟಿಗೆ ಬಾವಿ ಅವಘಡ ಪ್ರಕರಣ ಕಡಿಮೆಯಾಗಿದೆ. ಬಾವಿಯೊಳಗೆ ವಿಷಾನಿಲ ಇದ್ದು, ಏನಾದರೂ ಅವಘಡವಾದರೆ, ಅಲ್ಲಿರುವವರು ಬಾವಿಗಿಳಿಯದೆ ಕೂಡಲೇ 101 ನಂಬರ್‌ ಡಯಲ್‌ ಮಾಡಿ ಅಗ್ನಿಶಾಮಕ ದಳವರಿಗೆ ಮಾಹಿತಿ ಕೊಡಿ. ಅವರು ಸ್ಥಳಕ್ಕೆ ಬಂದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಾರೆ. ನಮ್ಮಲ್ಲಿ ಉಸಿರಾಟಕ್ಕೆ ಬಳಸುವ ಸಾಧನಗಳಿರುತ್ತವೆ. ಇದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು.
-ವಸಂತ ಕುಮಾರ್‌,  ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next