ರಾಯಚೂರು: ಸೈಬರ್ ಪ್ರಕರಣಗಳಿಗೆ ಅತಿಯಾಸೆಯೇ ಮುಖ್ಯ ಕಾರಣ. ನಮ್ಮದಲ್ಲದ ಸ್ವತ್ತಿಗೆ ಆಸೆ ಪಡುವುದನ್ನು ಬಿಟ್ಟರೆ ಸೈಬರ್ ವಂಚನೆಗೆ ಕಡಿವಾಣ ಹಾಕಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖೀಲ್ ಬುಳ್ಳಾವರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟ್‌ರ್ ಗಿಲ್ಡ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಲಾಭವಿಲ್ಲದೇ ಒಂದು ಹೊತ್ತು ಊಟ ಕೂಡ ಪುಗÕಟ್ಟೆ ಕೊಡುವುದಿಲ್ಲ ಎಂದ ಮೇಲೆ ಹಣ ಯಾರು ಕೊಡುತ್ತಾರೆ ಎಂಬುದನ್ನು ಜನ ಅರಿಯಬೇಕು ಎಂದರು.
ಸೈಬರ್ ಅಪರಾಧದ ಬಗ್ಗೆ ಜನ ಎಚ್ಚೆತ್ತುಕೊಳ್ಳುತ್ತಿರುವುದು ಸಮಾಧಾನಕರ ಸಂಗತಿ. ಬ್ಯಾಂಕ್‌ಗಳು ಡಬಲ್ ಒಟಿಪಿ ವ್ಯವಸ್ಥೆ ಜಾರಿಗೊಳಿಸಿವೆ. ಈಗ ಅಷ್ಟು ಸುಲಭಕ್ಕೆ ವಂಚನೆ ಮಾಡುವುದು ಕಷ್ಟ. ಆದರೂ ಸೈಬರ್ ಅಪರಾಧಗಳು ಮಾತ್ರ ಕಡಿಮೆಯಾಗಿಲ್ಲ ಎಂದರು. ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಸಾಗುತ್ತದೆ. ಪೊಲೀಸರು ಇಂಥ ಪ್ರಕರಣ ಭೇದಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಕೆಲವೊಂದು ಪ್ರಕರಣಗಳ ಭೇದಿಸುವುದು ಕಷ್ಟ. ಅಪಘಾತವಾದಾಗ ಗೋಲ್ಡನ್ ಟೈಂ ಇರುವಂತೆ ಸೈಬರ್ ಅಪರಾಧ ನಡೆದಾಗಲೂ ಅಂಥ ಸಮಯವಿರುತ್ತದೆ. ವಂಚನೆ ಆಗಿದೆ ಎಂದು ಗೊತ್ತಾದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾಧ್ಯವಾದಷ್ಟು ಹಣ ದುರ್ಬಳಕೆ ಆಗುವುದನ್ನು ತಡೆಯಬಹುದು ಎಂದರು.
ಈ ವಿಚಾರದಲ್ಲಿ ಪೊಲೀಸರ ಜತೆ ಮಾಧ್ಯಮಗಳ ಪಾತ್ರವೂ ಬಹಳ ಮುಖ್ಯವಾಗಿದೆ. ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಇಂಥದ್ದೊಂದು ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ಸೈಬರ್ ಪೊಲೀಸ್ ಠಾಣೆ ಇನ್ಸಪೆಕ್ಟರ್ ರಾಜಕುಮಾರ ವಾಜಂತ್ರಿ ಸೈಬರ್ ಅಪರಾಧ ಕುರಿತು ವಿಶೇಷ ಉಪನ್ಯಾಸ ನೀಡಿದರು. 2000ನೇ ಇಸ್ವಿಯಲ್ಲಿ ಸೈಬರ್ ಕಾಯ್ದೆ ಜಾರಿಗೊಳಿಸಲಾಯಿತು. ನಾನಾ ರೀತಿಯ ವಂಚನೆಗಳು ದಾಖಲಾಗುತ್ತಿವೆ. ಅಕ್ಷರಸ್ಥರೇ ಹೆಚ್ಚು ವಂಚನೆಗೆ ಬಲಿಯಾಗುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅನಾಮಧೆಯ ಸಂದೇಶಗಳಿಗೆ, ವ್ಯಕ್ತಿಗಳಿಗೆ ಪ್ರತಿಕ್ರಿಯಿಸಲು ಹೋಗಬಾರದು. ಅದರಲ್ಲೂ ಆಕರ್ಷಣೀಯ ಜಾಹೀರಾತುಗಳಿಗೆ ಮೊರೆ ಹೋಗಿ ನಮ್ಮ ಹಣ ಕಳೆದುಕೊಳ್ಳದಂತೆ ಜಾಗರೂಕತೆ ವಹಿಸಬೇಕು ಎಂದರು.
ಪತ್ರಕರ್ತರಾದ ಬಸವರಾಜ ನಾಗಡದಿನ್ನಿ, ಶಿವಮೂರ್ತಿ ಹಿರೇಮಠ, ಚನ್ನಬಸವಣ್ಣ, ವಿಜಯ ಜಾಗಟಗಲ್, ಆರ್.ಗುರುನಾಥ, ಪಾಷಾ ಹಟ್ಟಿ ವೇದಿಕೆ ಮೇಲಿದ್ದರು. ಪತ್ರಕರ್ತರಾದ ವೆಂಕಟೇಶ ಹೂಗಾರ ನಿರೂಪಿಸಿದರೆ, ಜಗನ್ನಾಥ ದೇಸಾಯಿ ಪ್ರಾರ್ಥಿಸಿದರು.