ಹೈದರಾಬಾದ್: ಸಹಪಾಠಿ ವಿದ್ಯಾರ್ಥಿ ಮೇಲೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಮಗ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕರಣ ದಾಖಲಾಗಿದೆ.
ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್ ಸಾಯಿ ಸ್ನೇಹಿತರೊಂದಿಗೆ ಸೇರಿ ಕಾಲೇಜು ಆವರಣದಲ್ಲಿ ಹಾಗೂ ಹಾಸ್ಟೆಲ್ ಕೋಣೆಯಲ್ಲಿ ಸಹಪಾಠಿ ಶ್ರೀರಾಮ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾಲೇಜು ಮಂಡಳಿ ಬಂಡಿ ಭಗೀರಥ್ ಸಾಯಿ ಅವರ ವಿರುದ್ಧ ದೂರು ದಾಖಲಿಸಿದೆ.
ಈ ಕುರಿತು ಸ್ವತಃ ಬಂಡಿ ಸಂಜಯ್ ಕುಮಾರ್ ಅವರ ಕಚೇರಿ ವಿಡಿಯೋ ರಿಲೀಸ್ ಮಾಡಿ ಸ್ಪಷ್ಟನೆ ಕೊಟ್ಟಿದೆ. ವಿಡಿಯೋದಲ್ಲಿ ಭಗೀರಥ್ ಸಾಯಿ ಮಾತನಾಡಿದ್ದು, ಶ್ರೀರಾಮ್ ನನ್ನ ಸ್ನೇಹಿತೆಯ ತಂಗಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಆಕೆಗೆ ಅಸಭ್ಯ ಸಂದೇಶವನ್ನು ಕಳುಹಿಸಿದ್ದಾನೆ. ಹೀಗಾಗಿ ಈ ಕೃತ್ಯ ನಡೆಯಿತು ಎಂದು ಭಗೀರಥ ಸಾಯಿ ಹೇಳಿ ಕ್ಷಮೆ ಕೇಳಿದ್ದಾರೆ.
ಇನ್ನು ಈ ವಿಷಯದ ಬಗ್ಗೆ ಮಾತನಾಡಿರುವ ಶ್ರೀರಾಮ್, ಇದು ಎರಡು ತಿಂಗಳ ಹಿಂದಿನ ವಿಷಯ. ಈಗ ಅನಗತ್ಯವಾಗಿ ವೈರಲ್ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ರಾಜಿ ಮಾತುಕತೆ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಸದ್ಯ ತೆಲಂಗಾಣದಲ್ಲಿ ಈ ಘಟನೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಬಂಡಿ ಸಂಜಯ್ ಕುಮಾರ್ ಇದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಿತೂರಿ ಎಂದು ಆರೋಪಿಸಿದ್ದಾರೆ.