ಬೆಂಗಳೂರು: ಮಗಳು ಹಾಗೂ ಅಳಿಯನ ಜಗಳ ಬಿಡಿಸಲು ಬಂದ ಮಾವನಿಗೆ ಅಳಿಯನೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಪ್ರಕರಣ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೆಟ್ರೋಲೇಔಟ್‌ನ ಅಲ್ಲಾ ಬಕಾಶ್ (56) ಕೊಲೆಯಾದವರು. ಸಲೀಂ ಪಾಷಾ ಪರಾರಿಯಾಗಿರುವ ಆರೋಪಿ.
ಅಲ್ಲಾ ಬಕಾಶ್ ಪುತ್ರಿಯನ್ನು ಆರೋಪಿ ಸಲೀಂ ಪಾಷಾ ಅವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಜ.8ರಂದು ಸಲೀಂ ಪಾಷಾ ಹೊರಗೆ ಯಾರೊಂದಿಗೋ ಜಗಳ ಮಾಡಿಕೊಂಡು ಬಂದು ಪತ್ನಿಗೂ ನಿಂದಿಸಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿರುವುದನ್ನು ಮನೆಯಲ್ಲಿದ್ದ ಸಲೀಂಪಾಷಾ ಮಾವ ಅಲ್ಲಾ ಬಕಾಶ್ ಗಮನಿಸಿದ್ದರು.
ಅಲ್ಲಾ ಬಕಾಶ್ ದಂಪತಿ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದಾಗ ಆರೋಪಿ ಸಲೀಂ, ಮಾವನ ಹಾಗೂ ಪತ್ನಿಯ ಮೇಲೆ ಚೂರಿಯಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಅಲ್ಲಾ ಬಕಾಶ್ ಚೀರಾಟ ಕೇಳಿ ನೆರೆ ಮನೆಯವರು ಬಂದಾಗ ಅವರ ಮೇಲೂ ಆರೋಪಿ ದಾಳಿ ನಡೆಸಲು ಯತ್ನಿಸಿ ಪರಾರಿಯಾಗಿದ್ದ. ಗಂಭೀರ ಗಾಯಗೊಂಡಿದ್ದ ಅಲ್ಲಾ ಬಕಾಶ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಆದರೆ, ಚಿಕಿತ್ಸೆ ಫಲಿಸದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಇನ್ನು ನೆರೆ ಮನೆ ನಿವಾಸಿ ಹಾಗೂ ಅಲ್ಲಾ ಬಕಾಶ್ ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.