ಭುವನೇಶ್ವರ್: ಭೀಕರ ಸರಣಿ ಅಪಘಾತದಲ್ಲಿ ಮಹಿಳೆ ಸೇರಿದಂತೆ ಕನಿಷ್ಠ ಮೂವರು ಮೃತಪಟ್ಟಿರುವ ಒಡಿಶಾದ ಕೊರಾಪುಟ್ ಜಿಲ್ಲೆಯ ಬೊರಿಗುಮ್ಮದಲ್ಲಿ ಶುಕ್ರವಾರ(ಜ.26 ರಂದು) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೋರಿಗುಮ್ಮದ ರಸ್ತೆಯ ಒಂದು ಕಡೆಯಿಂದ ಎಸ್‌ಯುವಿ ಮತ್ತು ಆಟೋ ರಿಕ್ಷಾ ಬಂದಿದೆ. ವಿರುದ್ಧ ದಿಕ್ಕಿನಿಂದ ಟ್ರ್ಯಾಕ್ಟರ್ ಹಾಗೂ ಬೈಕ್ ಬರುತ್ತಿತ್ತು. ಟ್ರ್ಯಾಕ್ಟರ್ ನ್ನು ಹಿಂದಿಕ್ಕಿ ಮುಂದಕ್ಕೆ ಹೋಗುವ ನಿಟ್ಟಿನಲ್ಲಿ ಬೈಕ್ ವೇಗವಾಗಿ ಬಂದಿದೆ. ಟ್ರ್ಯಾಕ್ಟರ್ ಹಿಂದಿಕ್ಕುವ ಭರದಲ್ಲಿ ಬೈಕ್ ಎಸ್‌ಯುವಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಎಸ್‌ಯುವಿ ನಿಯಂತ್ರಣ ಕಳೆದುಕೊಂಡು ರಿಕ್ಷಾಕ್ಕೆ ಢಿಕ್ಕಿ ಹೊಡೆದು, ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಮತ್ತೊಂದು ಬೈಕ್ ಗೂ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರಿಕ್ಷಾ ನಡುರಸ್ತೆಯಲ್ಲೇ ಪಲ್ಟಿಯಾಗಿದೆ.
ಈ ಭೀಕರ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಢಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 15 ಮಂದಿ ಪ್ರಯಾಣಿಕರು ರಸ್ತೆಗೆ ಬಿದ್ದಿದ್ದಾರೆ. ಅವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಸ್ ಯುವಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಯಲ್ಲಿ 13 ಜನರು ಗಾಯಗೊಂಡಿದ್ದು, ಇದರಲ್ಲಿ 4 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತಲಾ 3 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.