ಲಕ್ನೋ: ಡಿಎಸ್‌ಪಿಯೊಬ್ಬರು ಮಹಿಳಾ ಪೊಲೀಸ್ ಪೇದೆ ಜೊತೆ ಲಾಡ್ಜ್ ವೊಂದರಲ್ಲಿ ಸಿಕ್ಕಿಬಿದ್ದು, ತನ್ನ ಉನ್ನತ ಹುದ್ದೆಯಿಂದೆ ಕೆಳದರ್ಜೆಯ ಹುದ್ದೆಗೆ ಹಿಂಬಡ್ತಿ ಪಡೆಯುವ ಶಿಕ್ಷೆಯನ್ನು ಪಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಏನಿದು ಘಟನೆ?: 2021ರಲ್ಲಿ ಉನ್ನಾವೋದ ಬಿಘಪುರ್ ಠಾಣೆಯಲ್ಲಿ ಶಂಕರ್ ಕನೌಜಿಯಾ ಮೊದಲು ಸರ್ಕಲ್ ಆಫೀಸರ್ ಸೇವೆ ಸಲ್ಲಿಸಿದ್ದರು. ಆ ಬಳಿಕ ಡಿಎಸ್‌ಪಿ ಆಗಿ ಬಡ್ತಿ ಪಡೆದಿದ್ದರು. ಡಿಎಸ್‌ಪಿ ಆಗಿ ಹುದ್ದೆಗೇರಿದ ಬಳಿಕ ಅವರು ಮಹಿಳಾ ಪೇದೆಯೊಬ್ಬರ ಜೊತೆ ಸಲುಗೆಯಿಂದ ಇರಲು ಶುರು ಮಾಡಿದ್ದರು.
ಜುಲೈ 2021 ರಲ್ಲಿ ಶಂಕರ್ ತನಗೆ ಕೌಟುಂಬಿಕ ವಿಚಾರದ ಕಾರಣದಿಂದ ತುರ್ತಾಗಿ ಒಂದು ವಾರದ ರಜೆ ಬೇಕಾಗಿದೆ ಎಂದು ರಜೆಯನ್ನು ತೆಗೆದುಕೊಂಡಿದ್ದರು. ರಜೆ ತೆಗೆದುಕೊಂಡು ಮನೆಗೆ ಹೋಗುವ ಬದಲು ಮಹಿಳಾ ಪೇದೆ ಜೊತೆ ನೇರವಾಗಿ ಕಾನ್ಪುರದ ಹೊಟೇಲ್ ವೊಂದರಲ್ಲಿ ತೆರಳಿ ಚೆಕ್ ಇನ್ ಆಗಿದ್ದಾರೆ. ಈ ವೇಳೆ ತನ್ನ ಎರಡು ಮೊಬೈಲ್ ಫೋನ್ ನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ.
ಇತ್ತ ಗಂಡ ಮನೆಗೆ ಬಾರದೇ ಇರುವುದರಿಂದ ಶಂಕರ್ ಅವರಿಗೆ ಪತ್ನಿ ಕರೆ ಮಾಡಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಬರುತ್ತಿರುವ ಕಾರಣದಿಂದ ಗಾಬರಿಗೊಂಡ ಪತ್ನಿ ಉನ್ನಾವೋ ಠಾಣೆಗೆ ಕರೆ ಮಾಡಿದ್ದಾರೆ. ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು, ಶಂಕರ್ ಅವರ ಮೊಬೈಲ್ ನೆಟ್ ವರ್ಕ್ ಜಾಡನ್ನು ಪತ್ತೆ ಮಾಡಿಕೊಂಡು ಕಾನ್ಪುರ ಹೊಟೇಲ್ ಗೆ ತೆರಳಿದ್ದಾರೆ.
ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿ ಹೊಟೇಲ್ ಕೋಣೆಯತ್ತ ತೆರಳಿದಾಗ ಶಂಕರ್ ಹಾಗೂ ಮಹಿಳಾ ಪೇದೆ ಕೋಣೆಯಲ್ಲಿ ಅಸಭ್ಯ ಭಂಗಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ಬಳಿಕ ಪೊಲೀಸರು ವರದಿ ತಯಾರಿಸಿ ಎಡಿಜಿಗೆ ನೀಡಿದ್ದಾರೆ.
ಇದೀಗ ಸರ್ಕಾರ ವರದಿಯನ್ನು ಪರಿಶೀಲಿಸಿ ಶಂಕರ್ ಅವರನ್ನು ಹಿಂಬಡ್ತಿಯ ಶಿಕ್ಷೆ ನೀಡಲು ಶಿಫಾರಸು ಮಾಡಿದೆ. ಅದರಂತೆ ಡಿಎಸ್‌ಪಿ ಕೃಪಾ ಶಂಕರ್ ಕನೌಜಿಯಾರನ್ನು ಕೆಳ ದರ್ಜೆ ಪೊಲೀಸ್ ಪೇದೆಯಾಗಿ ಹಿಂಬಡ್ತಿ ಶಿಕ್ಷೆ ನೀಡಿದ್ದಾರೆ.