Advertisement

ಹೆದ್ದಾರಿ ಬಳಿ ರಾಸುಗಳ ಸಂತೆ: ಸಂಚಾರ ವ್ಯತ್ಯಯ

07:38 AM Mar 16, 2019 | |

ನಂಜನಗೂಡು: ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಯಾವಾಗಲೂ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ. ಇದರ ನಡುವೆ, ಶುಕ್ರವಾರ ಹೆದ್ದಾರಿ ಸಮೀಪ ಜಾನುವಾರು ಸಂತೆಯನ್ನು ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿ ಸವಾರರು ಹೈರಾಣಾದರು.

Advertisement

ಆಗಿದ್ದೇನೆ?: ಹಲವು ವರ್ಷಗಳಿಂದ ನಗರದ ರಾಷ್ಟ್ರೀಯ ಹೆದ್ದಾರಿ 766 ನ ಅಪೋಲೋ ವೃತ್ತದ ಬಳಿಯ ಎಪಿಎಂಸಿ ಯಾರ್ಡನಲ್ಲಿ ಪ್ರತಿ ಶುಕ್ರವಾರ ಜಾನುವಾರುಗಳ ಸಂತೆ ನಡೆಯುತ್ತಿತ್ತು. ಇದೀಗ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಸುತ್ತಿರುವುದರಿಂದ ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಮಲ್ಲಮೂಲೆ ಮಠದ ಬಳಿ ನಡೆಸಿದ್ದರಿಂದ ಅವ್ಯವಸ್ಥೆಯ ಆಗರವಾಗಿತ್ತು.

ಹೆದ್ದಾರಿಯಿಂದ‌ ಸಾಕಷ್ಟು ತಗ್ಗಿನಲ್ಲಿರುವ ಖಾಸಗಿ ಸ್ಥಳದಲ್ಲಿ ಸಂತೆಯನ್ನು ನಡೆಸಿದ್ದರಿಂದ ರಾಸುಗಳ ಮಾರಾಟ ಹಾಗೂ ಖರೀದಿಗೆ ಬಂದ ಗ್ರಾಹಕರು ಮತ್ತು ಮಾಲೀಕರು ತಮ್ಮ ವಾಹನಗಳನ್ನು ತಗ್ಗು ಪ್ರದೇಶದಲ್ಲಿ ಇಳಿಸಲಾಗದೇ ಹೆದ್ದಾರಿಯಲ್ಲೇ ನಿಲುಗಡೆ ಮಾಡಿದ್ದರು. ರಸ್ತೆ ಬದಿಯಲ್ಲಿ ಸಾಲು ಸಾಲಾಗಿ ವಾಹನಗಳನ್ನು ನಿಲ್ಲಿಸಿದ್ದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಈ ಅವ್ಯವಸ್ಥೆಗೆ ವಾಹನ ಸವಾರರು ಹಿಡಿ ಶಾಪ ಹಾಕುತ್ತಿದಿದ್ದು ಸಾಮಾನ್ಯವಾಗಿತ್ತು. 

ಇಲ್ಲಿಗೆ ಸಂತೆಯನ್ನು ಸ್ಥಳಾಂತರಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತದ ವಿರುದ್ಧ ವಾಹನ ಸವಾರರು ಹಾಗೂ ರಾಸುಗಳ ಮಾಲೀಕರು ಹರಿಹಾಯ್ದರು. ವ್ಯವಸ್ಥಿತವಾಗಿ ಸಂತೆ ನಡೆಯಲು ಎಲ್ಲಾ ಅವಕಾಶಗಳಿದ್ದರೂ ಈ ರೀತಿ ಬೇಕಾಬಿಟ್ಟಿಯಾಗಿ ಆಯೋಜಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪೊಲೀಸರು ಹಾಗೂ ಸಾರ್ವಜನಿಕರ ಮಾತಿನ ಚಕಮುಕಿ ನಡೆಯಿತು.

ಮಾಮೂಲಿ ಸಂತೆ ನಡೆಯುತ್ತಿದ್ದ ವಿಶಾಲವಾದ ಸ್ಥಳದಲ್ಲಿ ಅರ್ಧಜಾಗದಲ್ಲಿ ಕಾಮಗಾರಿ ನಡೆಸಿ ಉಳಿದ ಜಾಗದಲ್ಲಿ ಸಂತೆ ಆಯೋಜಿಸಬಹುದಿತ್ತು. ಹಿಂದೆ ಇಲ್ಲಿ ಕಾಮಗಾರಿ ಕೈಗೊಂಡಾಗ ಇದೇ ಸೂತ್ರ ಅಳವಡಿಸಲಾಗಿತ್ತು. ಆದರೆ, ಈಗ ಎಪಿಎಂಸಿ ತೆಗೆದುಕೊಂಡಿರುವ ನಿರ್ಧಾರ ಅವೈಜ್ಞಾನಿಕವಾಗಿದ್ದು,

Advertisement

-ಸ್ಥಳಾಂತರ ಮಾಡುವದಾದಲ್ಲಿ ಹುಲ್ಲಹಳ್ಳಿ ರಸ್ತೆಯ ಎಪಿಎಂಸಿಯ ಮುಖ್ಯ ಆವರಣದಲ್ಲೇ ನಡೆಸಬಹುದಾಗಿತ್ತು. ಆದರೆ, ಎಪಿಎಂಸಿ ಹಿಂದೆ ಮುಂದೆ ಯೋಚಿಸದೆ ಹೆದ್ದಾರಿ ಬಳಿ ಸಂತೆಯನ್ನು ಆರು ವಾರಗಳ ಕಾಲ ನಡೆಸಲು ಕೈಗೊಂಡಿರುವ ತೀರ್ಮಾನದಿಂದ ವಾಹನ ಸವಾರರು ಹಿಂಸೆ ಅನುಭವಿಸುವಂತಾಗಿದೆ.

ಅಪಾಯಕ್ಕೆ ಆಹ್ವಾನ: ಈ ಜಾಗ ಸಂತೆ ನಡೆಸಲು ಯೋಗ್ಯವಾಗಿಲ್ಲ. ಮೇಲ್ಭಾಗದಲ್ಲಿ ಹೆದ್ದಾರಿ ಇದೆ. ಕೆಳಗಡೆ ಕಪಿಲಾ ನದಿ ಇದೆ. ಇವೆರಡರ ಮಧ್ಯೆ ಹಾದು ಹೋಗಿರುವ ವಿದ್ಯುತ್‌ ಕಂಬಗಳ ಮಧ್ಯೆ ಇರುವ ಈ ಜಾಗದಲ್ಲೆ ನಡೆಯುವ ಜಾನುವಾರುಗಳ ಸಂತೆ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ ಎಂದು ರೈತ ಮಾದಪ್ಪ ಕಿಡಿಕಾರಿದ್ದಾರೆ.

ದಲ್ಲಾಳಿಗಳು ಹಾಗೂ ಮಾಲೀಕರ ನೇತೃತ್ವದ ನಿಯೋಗ  ಎಪಿಎಂಸಿಗೆ ಈ ಕುರಿತು ದೂರು ನೀಡಿದ್ದು, ಯಾವುದೇ ಕಾರಣಕ್ಕೂ ಹೆದ್ದಾರಿ ಬಳಿ ಸಂತೆ ನೀಡಲು ಅವಕಾಶ ನೀಡಬಾರದು. ಯಾವುದೇ ರೀತಿಯ ಅನಾಹುತು ಸಂಭವಿಸಿದರೆ ಅದಕ್ಕೆ ಎಪಿಎಂಸಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಮುಂದಿನ ಶುಕ್ರವಾರದ ಸಂತೆಯನ್ನು ಎಪಿಎಂಸಿಯ ಮುಖ್ಯ ಪ್ರಾಂಗಣದಲ್ಲೇ ನಡೆಸಬೇಕು. ಇಲ್ಲದಿದ್ದರೆ ಸಂತೆಯ ಅರ್ಧ ಭಾಗದಲ್ಲಿ ಕಾಮಗಾರಿ ನಡೆಸಿ ಉಳಿದ ಜಾಗದಲ್ಲಿ ಸಂತೆ ನಡೆಸಬೇಕು ಆಗ್ರಹಿಸಿದ್ದಾರೆ.

ಸೌಲಭ್ಯವಿಲ್ಲದಿದ್ದರೂ ಕರ ವಸೂಲಿ: ಖಾಸಗಿ ಜಮೀನಿನಲ್ಲಿ ರಾಸುಗಳ ಸಂತೆಯನ್ನು ನಡೆಸುತ್ತಿದ್ದರೂ ಕೂಡ ಎಪಿಎಂಸಿ ಕರ ವಸೂಲಿ ಮಾಡಿದೆ. ಆದರೆ, ಸ್ಥಳದಲ್ಲಿ ನೀರು, ನೆರಳಿನ ವ್ಯವಸ್ಥೆ ಮತ್ತಿತರ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಎಂದು  ಜಾನುವಾರುಗಳ ಮಾಲೀಕರು ಹಾಗೂ ದಲ್ಲಾಳಿಗಳು ಕಿಡಿ ಕಾರಿದರು.

ನಗರದ ರಾಷ್ಟ್ರೀಯ ಹೆದ್ದಾರಿ ಸಮೀಪದ ಮಲ್ಲಮೂಲೆ ಮಠದ ಬಳಿ ಜಾನುವಾರ ಸಂತೆ ನಡೆಸಿದ್ದರಿಂದ ಟ್ರಾಫಿಕ್‌ ಜಾಮ್‌ ಸೇರಿದಂತೆ ಮತ್ತಿತರ ತೊಂದರೆಯಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಮುಂದಿನ ವಾರ ಎಪಿಎಂಸಿಯ ಮುಖ್ಯ ಪ್ರಾಂಗಣದಲ್ಲೇ ಸಂತೆ ನಡೆಸಲಾಗುವದು.
-ಹರೀಶ್‌ಕುಮಾರ್‌, ಎಪಿಎಂಸಿ ಕಾರ್ಯದರ್ಶಿ

* ಶ್ರೀಧರ್‌ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next