Advertisement

120ಕ್ಕೂ ಅಧಿಕ ದನಗಳು ಕಟುಕರ ಪಾಲು

12:46 AM Jan 29, 2022 | Team Udayavani |

ಮಂಗಳೂರು: ಇಲ್ಲಿನ ಪ್ರತೀ ಹೈನುಗಾರನ ಮನೆಯಲ್ಲಿಯೂ ನೋವಿನ ಕತೆ ಇದೆ. ಒಂದಿಡೀ ಊರು ಗೋಕಳ್ಳರ ನಿರಂತರ ಅಟ್ಟಹಾಸಕ್ಕೆ ನಲುಗಿದೆ. ಇದು ಹಳ್ಳಿಗಾಡಲ್ಲ, ಮಂಗಳೂರು ಪಾಲಿಕೆ ವ್ಯಾಪ್ತಿಯ ಬೊಲ್ಪುಗುಡ್ಡೆ ಪರಿಸರ. ಇಲ್ಲಿನ 4-5 ಕಿ.ಮೀ. ವ್ಯಾಪ್ತಿಯಲ್ಲೇ ಇತ್ತೀಚಿನ 7-8 ವರ್ಷಗಳಲ್ಲಿ 120ಕ್ಕೂ ಅಧಿಕ ಗೋವುಗಳು ಕಟುಕರ ಪಾಲಾಗಿವೆ.

Advertisement

ಮೇಯಲು ಕಟ್ಟಿದ ದನಗಳು ಹಗ್ಗ ಸಮೇತ ನಾಪತ್ತೆಯಾಗುತ್ತಿವೆ. ಹಟ್ಟಿಗೆ ಕರೆತರುವಾಗ ಒಂದು ವೇಳೆ ಕೈ ತಪ್ಪಿಸಿ ಹೋದರೆ ಮತ್ತೆ ಸಿಗುವುದಿಲ್ಲ. ಇಲ್ಲಿನ ಹೈನುಗಾರರಾದ ಡೊಮಿನಿಕ್‌ ಸಲ್ದಾನ್ಹಾ, ಪ್ರಣಾಮ್‌ ಶೆಟ್ಟಿ, ಅರುಣ್‌ ಸಲ್ದಾನ್ಹಾ, ಸುಮಲತಾ ನಾಯಕ್‌… ಹೀಗೆ ಎಲ್ಲರ ವ್ಯಥೆ ಒಂದೇ ರೀತಿಯದು.

ಒಂದೇ ದಿನ 3 ಜರ್ಸಿ ದನ ಕಳವು
ಬೊಲ್ಪುಗುಡ್ಡೆಯ ಡೊಮಿನಿಕ್‌ ಸಲ್ದಾನ್ಹಾ ಕುಟುಂಬ 40 ವರ್ಷಗಳಿಂದ ಹೈನುಗಾರಿಕೆ ಯಿಂದಲೇ ಬದುಕುತ್ತಿದೆ. ಪ್ರಸ್ತುತ 12 ದನಗಳಿವೆ. ತಿಂಗಳ ಹಿಂದೆ ಮೇಯಲು ಕಟ್ಟಿದ್ದ 3 ಜರ್ಸಿ ದನಗಳು ಒಂದೇ ದಿನ ನಾಪತ್ತೆಯಾಗಿವೆ. ನಾಲ್ಕು ವರ್ಷಗಳಲ್ಲಿ 12 ದನಗಳು ಕಳವಾಗಿವೆ. 3 ತಿಂಗಳಲ್ಲಿ 5 ದಿನಗಳು ಕಳವಾಗಿವೆ.

ಗಬ್ಬದ ದನಗಳೂ ಕಟುಕರ ಪಾಲು
ಬೊಲ್ಪುಗುಡ್ಡೆ ಪಕ್ಕದ ಗಾಂಧಿನಗರ ಮಲ್ಲಿ ಲೇಔಟ್‌ನ ದಯಾನಂದ ಶೆಟ್ಟಿ ಅವರಿಗೆ ಸೇರಿದ 2 ದನಗಳು ಕಳೆದ ಮಳೆಗಾಲದಲ್ಲಿ ಕಳವಾಗಿವೆ. ಇದರಲ್ಲಿ ಒಂದು 8 ತಿಂಗಳು, ಮತ್ತೂಂದು 7 ತಿಂಗಳ ಗಬ್ಬದ ದನ. ಕಳೆದೊಂದು ವರ್ಷದಲ್ಲಿ ದಯಾನಂದ ಶೆಟ್ಟಿ ಅವರ ಒಟ್ಟು 3, ಪ್ರಶಾಂತ್‌ ಅವರ ಒಂದು ದನ ಕಳವಾಗಿದೆ.

ಬೊಲ್ಪುಗುಡ್ಡೆಯ ಪ್ರಣಾಮ್‌ ಶೆಟ್ಟಿ ಅವರು 10 ವರ್ಷಗಳಿಂದ ಹೈನುಗಾರಿಕೆ ಮಾಡುತ್ತಿದ್ದು, 2 ವರ್ಷಗಳಲ್ಲಿ 4 ದನಗಳು ಕಳವಾಗಿವೆ. ಕಳೆದ ಅಕ್ಟೋಬರ್‌ನಲ್ಲಿ 2 ದನಗಳು ಕಳವಾಗಿವೆ. ಬೋಂದೆಲ್‌ ಚರ್ಚ್‌ ಸಮೀಪದ ಲಾರೆನ್ಸ್‌ ಡಿಸಿಲ್ವಾ ಕಳೆದ ಒಂದೂವರೆ ವರ್ಷದಲ್ಲಿ 7 ದನಗಳನ್ನು, ಕಳೆದ 15 ವರ್ಷಗಳಲ್ಲಿ 48 ದನಗಳನ್ನು ಕಳೆದುಕೊಂಡಿದ್ದಾರೆ.

Advertisement

ದನವೂ ಇಲ್ಲ, ಪರಿಹಾರವೂ ಇಲ್ಲ
ದನ ಕಳೆದುಕೊಂಡ ಬಹುತೇಕ ಮಂದಿ ಹೈನುಗಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ದನ ಕಳವು ನಿಂತಿಲ್ಲ, ಪರಿಹಾರವೂ ಸಿಕ್ಕಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಪ್ರಕರಣಗಳೇ ದಾಖಲಾಗಿಲ್ಲ. ಇನ್ನು ಕೆಲವು ಮಂದಿ ಪೊಲೀಸರಿಗೆ ಮಾಹಿತಿಯನ್ನು ನೀಡಿಲ್ಲ.

ಹಟ್ಟಿಯೇ ಖಾಲಿ!
ದನ ಕಳ್ಳರಿಂದಾಗಿ ಬಾಂದೊಟ್ಟು ಕೊಪ್ಪಲ್‌ಕಾಡುವಿನ ಶ್ರೀನಿವಾಸ ನಾಯಕ್‌ ಅವರ ಹಟ್ಟಿಯೇ ಒಮ್ಮೆ ಖಾಲಿಯಾಗಿತ್ತು. ಎರಡು ವರ್ಷಗಳಲ್ಲಿ ಇವರಿಗೆ ಸೇರಿದ 3 ದನಗಳು ಕಳವಾಗಿವೆ. ಹಲವು ಗಂಡು ಕರುಗಳು ನಾಪತ್ತೆಯಾಗಿವೆ. “ಒಮ್ಮೆ ನಮ್ಮ ಹಟ್ಟಿಯೇ ಖಾಲಿಯಾಗಿತ್ತು. ಊರಿನವರು ಕಸಾಯಿಖಾನೆಯೊಂದರ ಬಳಿ ಇದ್ದ ನಮ್ಮ ಕರುವನ್ನು ಪತ್ತೆ ಮಾಡಿ ತಂದುಕೊಟ್ಟಿದ್ದರು. ಅದನ್ನು ಸಾಕಿ ಅದರಿಂದ ಕರುಗಳಾಗಿ ನಮ್ಮ ಹಟ್ಟಿ ಮತ್ತೆ ತುಂಬಿತು. ಆದರೆ ಅದರಿಂದ ಆದ 2 ಕರುಗಳು ಮತ್ತೆ ಕಳ್ಳರ ಪಾಲಾದವು’ ಎನ್ನುತ್ತಾರೆ ಸುಮಲತಾ ಶ್ರೀನಿವಾಸ ನಾಯಕ್‌.

ಒಂದೇ ವರ್ಷ
3 ದನ ಕಳೆದುಕೊಂಡರು
ಬೊಲ್ಪುಗುಡ್ಡೆಯ ಅರುಣ್‌ ಸಲ್ದಾನ್ಹಾ ಅವರದ್ದು ಡೊಮಿನಿಕ್‌ ಅವರ ಪಕ್ಕದ ಮನೆ. ಕಳೆದ ಒಂದೇ ವರ್ಷದಲ್ಲಿ ಇವರ 3 ದನಗಳು ಕಳವಾಗಿವೆ. 20 ವರ್ಷಗಳಿಂದ 20ಕ್ಕೂ ಅಧಿಕ ದನಗಳು ಕಳವಾಗಿವೆ. “ಮೇಯಲು ಬಿಟ್ಟ ದನಗಳನ್ನು ಆಗಾಗ್ಗೆ ನೋಡದಿದ್ದರೆ, ಹಟ್ಟಿಗೆ ಕರೆತರುವುದು ಸ್ವಲ್ಪ ತಡವಾದರೆ ಆಸೆ ಬಿಟ್ಟು ಬಿಡುವ ಸ್ಥಿತಿ ಇದೆ. ನಮಗೆ ನಷ್ಟದ ಮೇಲೆ ನಷ್ಟ. ಕೆಲವರು ದನಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ ಸಲ್ದಾನ್ಹಾ.

ದನ ಹಿಡಿದಲ್ಲಿಗೆ ಓಡಾಟ!
“ಕಳ್ಳರ ಹಾವಳಿ ಇದ್ದರೂ ದೇವರು ಕೈಬಿಟ್ಟಿಲ್ಲ. ಈಗಲೂ ನಮ್ಮಲ್ಲಿ ಮಲೆನಾಡ ಗಿಡ್ಡ ಸಹಿತ 4 ದನಗಳು, 8 ಗಂಡು ಕರುಗಳಿವೆ. ಬೆಳಗ್ಗೆ 10 ಲೀ., ಸಂಜೆ 10-15 ಲೀ. ಹಾಲು ಡೈರಿಗೆ ಹಾಕುತ್ತಿದ್ದೇವೆ. ಹೈನುಗಾರಿಕೆ ಯಿಂದಲೇ ಮಕ್ಕಳ ವಿದ್ಯಾಭ್ಯಾಸ ಸಾಧ್ಯವಾಯಿತು. 10 ವರ್ಷಗಳಲ್ಲಿ 30ಕ್ಕೂ ಅಧಿಕ ದನಗಳು ಕಳವಾಗಿವೆ. ಎಲ್ಲಿಯಾದರೂ ದನ ಹಿಡಿದಿದ್ದಾರೆ ಎಂಬ ಸುದ್ದಿ ಸಿಕ್ಕಿದರೆ ಹೋಗಿ ನೋಡಿ ಬರುತ್ತೇವೆ. ಆದರೆ ನಮ್ಮ ದನ ಸಿಗುವುದಿಲ್ಲ’ ಎನ್ನುತಾರೆ ಸುಮಲತಾ.

Advertisement

Udayavani is now on Telegram. Click here to join our channel and stay updated with the latest news.

Next