Advertisement

Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

01:15 AM Jul 22, 2024 | Team Udayavani |

ಮಂಗಳೂರು: “ಷೇರು ಮಾರುಕಟ್ಟೆ ವ್ಯವಹಾರ ಕಂಪೆನಿ’ ಎಂಬ ಹೆಸರನ್ನಿಟ್ಟುಕೊಂಡು ಆನ್‌ಲೈನ್‌ನಲ್ಲಿ ಹಣ ದೋಚುವ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿವೆ. ವಂಚಕರು ಫೇಸ್‌ಬುಕ್‌ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತುಗಳನ್ನು ಹಾಕಿ ನಕಲಿ ಸ್ಟಾಕ್‌ ಮಾರ್ಕೆಟ್‌ ಸುಳಿಗೆ ಸೆಳೆದುಕೊಳ್ಳುತ್ತಾರೆ. ಷೇರು ಮಾರುಕಟ್ಟೆ ಬಗ್ಗೆ ಅಲ್ಪಸ್ವಲ್ಪ ಮಾಹಿತಿ, ಕುತೂಹಲ, ಹೆಚ್ಚು ಲಾಭ ಗಳಿಸ ಬೇಕೆಂಬ ಆಸೆ ಯವರು ಅನಾಯಾಸವಾಗಿ ಇಂಥ ವಂಚಕರ ಬಲೆಗೆ ಬಿದ್ದು, ಭಾರೀ ಹಣವನ್ನು ಕಳೆದು ಕೊಳ್ಳುತ್ತಿದ್ದಾರೆ.

Advertisement

ಒಬ್ಬರಿಂದಲೇ 5 ಕೋ.ರೂ. ದೋಚಿದರು!
ವಿದೇಶದಲ್ಲಿ ಉದ್ಯೋಗ ದಲ್ಲಿದ್ದು, ಮಂಗಳೂರಿಗೆ ಮರಳಿರುವ ವ್ಯಕ್ತಿಯೋರ್ವರು ಫೇಸ್‌ಬುಕ್‌ನಲ್ಲಿ “ಫೆಡ ರೇಟೆಡ್‌ ಹಮ್ಸ್‌ì ಷೇರ್‌ ಟ್ರೇಡಿಂಗ್‌ ಕಂಪೆನಿ’ ಎಂಬ ಜಾಹೀರಾತು ನೋಡಿದ್ದರು. ಕುತೂಹಲದಿಂದ ಅದರಲ್ಲಿದ್ದ ಲಿಂಕ್‌ ಒತ್ತಿದ್ದರು. ಬಳಿಕ ಅವರನ್ನು “ಟ್ರೇಡಿಂಗ್‌ ಕಂಪೆನಿ’ಯವರು ವಾಟ್ಸಾಪ್‌ ಗ್ರೂಪೊಂದಕ್ಕೆ ಸೇರಿಸಲಾಯಿತು. ಕೆಲವೇ ಸಮಯದಲ್ಲಿ ಮತ್ತೊಂದು ವಾಟ್ಸಾಪ್‌ ಗ್ರೂಪ್‌ಗೆ ಸೇರಿಸಲ್ಪಟ್ಟರು. ಅಲ್ಲಿ ಗ್ರೂಪ್‌ ಅಡ್ಮಿನ್‌ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡತೊಡಗಿದ. ಷೇರು ಮಾರುಕಟ್ಟೆಗೆ ಸಂಬಂಧಿಸಿ ಹಲವಾರು ಮಂದಿ ವ್ಯವಹಾರ ನಡೆಸುತ್ತಿರುವ ರೀತಿಯಲ್ಲಿ ಆ ಗ್ರೂಪ್‌ನಲ್ಲಿ ಸಂದೇಶಗಳನ್ನು ಹಾಕಲಾಗುತ್ತಿತ್ತು. ತಾನು ಕೂಡ ಹೆಚ್ಚು ಲಾಭ ಗಳಿಸಬಹುದು ಎಂಬ ನಂಬಿಕೆ ಆ ವ್ಯಕ್ತಿಯಲ್ಲಿ ಮೂಡಿತು. ವಂಚಕರು ತಿಳಿಸಿದಂತೆ ಎ.15ರಂದು ಹಣ ಹೂಡಿಕೆ ಮಾಡಿದರು.

ಅನಂತರ ಗ್ರೂಪ್‌ನವರ ಸೂಚನೆಯಂತೆ ಹಂತ ಹಂತವಾಗಿ ಜೂ.7ರ ವರೆಗೆ ಒಟ್ಟು 5 ಕೋ.ರೂ.ಗಳನ್ನು ಕಳೆದುಕೊಂಡಿದ್ದಾರೆ !
ಲಾಭ ಗಳಿಸಿದಂತೆ ಬಿಂಬಿಸುತ್ತಾರೆ !

ಇನ್ನೊಂದು ಪ್ರಕರಣದಲ್ಲಿ ಇದೇ ರೀತಿ ಸ್ಟಾಕ್‌ ಮಾರ್ಕೆಟ್‌ ಹೂಡಿಕೆ ಎಂಬ ವಂಚನಾ ಕಂಪೆನಿಯ ಬಲೆಗೆ ಬಿದ್ದವರೊಬ್ಬರು 1.50 ಕೋ.ರೂ. ಕಳೆದುಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ”Jefferies wealth multiplication Plan’ ‘ ಎಂಬ ಜಾಹೀರಾತು ಗಮನಿಸಿದ್ದರು. ಅದರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿದ್ದರು. ಕೆಲವು ದಿನಗಳ ಬಳಿಕ ಅವರನ್ನು Jefferies wealth multiplication center–223’ ವಾಟ್ಸಪ್‌ ಗ್ರೂಪ್‌ಗೆ ಸೇರಿಸಲಾಗಿತ್ತು. ಆ ಗ್ರೂಪ್‌ನಲ್ಲಿದ್ದ ಸದಸ್ಯರು ಸ್ಟಾಕ್‌ನಲ್ಲಿ ಹೂಡಿಕೆ ಮಾಡಿ “ಲಾಭ’ ಗಳಿಸಿದ ಬಗ್ಗೆ ಸ್ಕ್ರೀನ್‌ ಶಾಟ್‌ಗಳನ್ನು ಹಾಕುತ್ತಿದ್ದರು. ಇದರಿಂದ ಪ್ರೇರಿತರಾದ ದೂರುದಾರ ವ್ಯಕ್ತಿ ಹಣ ಹೂಡಿಕೆ ಮಾಡುವ ಆಸಕ್ತಿ ತೋರಿಸಿದರು. ಬಳಿಕ ಅಡ್ಮಿನ್‌ನ ಸೂಚನೆಯಂತೆ “ವಿಐಪಿ ಟ್ರೇಡಿಂಗ್‌ ಅಕೌಂಟ್‌’ ತೆರೆದರು. ಮೇ 28ರಿಂದ ಜೂ.28ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್‌ಗಳ ಖಾತೆಯಿಂದ 1.50 ಕೋ.ರೂ.ಗಳನ್ನು ಗ್ರೂಪ್‌ನಲ್ಲಿದ್ದ ಅಪರಿಚಿತ(ವಂಚಕ) ನೀಡಿದ ಖಾತೆಗಳಿಗೆ ವರ್ಗಾಯಿಸಿದ್ದರು. ಕೆಲವು ದಿನಗಳ ಬಳಿಕ ಹೂಡಿಕೆ ಮಾಡಿದ ಹಣವನ್ನು ವಾಪಸ್‌ ಪಡೆಯಲು ಮುಂದಾದರು. ಆದರೆ ವಿಥ್‌ಡ್ರಾ ಮಾಡಲು ಸಾಧ್ಯವಾಗಲಿಲ್ಲ. ಚೀಫ್ ಅಡ್ಮಿನ್‌ನನ್ನು ಸಂಪರ್ಕಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ!

Advertisement

ಚಿನ್ನಾಭರಣ ಅಡವಿಟ್ಟು ಹಣ ಹೂಡಿಕೆ
ಇತ್ತೀಚೆಗೆ ಮಹಿಳೆಯೋರ್ವರು ಮನೆಯವರಿಗೆ ತಿಳಿಯದಂತೆಯೇ ಸ್ಟಾರ್ಕ್‌ ಮಾರ್ಕೆಟ್‌ ಹೆಸರಿನ ಕಂಪೆನಿಗೆ ಆನ್‌ಲೈನ್‌ ಮೂಲಕ ಸೇರ್ಪಡೆಯಾಗಿ 50 ಲ.ರೂ.ಗಳನ್ನು ಹೂಡಿಕೆ ಮಾಡಿದ್ದರು. ಮನೆಯಲ್ಲಿದ್ದ ಚಿನ್ನವನ್ನು ಕೂಡ ಅಡವಿರಿಸಿದ್ದರು. ಅನಂತರ ಮೋಸ ಹೋಗಿ ಪೊಲೀಸರಿಗೆ ದೂರು ನೀಡಿದ್ದರು.

ಮೊಬೈಲ್‌ ಶೋಧ ಗೀಳು
ವಂಚನೆಗೆ ಮೂಲ!
ಮೊಬೈಲ್‌ನಲ್ಲಿ ನಿರಂತರವಾಗಿ ಸಾಮಾಜಿಕ ಜಾಲತಾಣಗಳನ್ನು ನೋಡುವವರು ಒಂದಲ್ಲ ಒಂದು ಆಮಿಷದ ಸುಳಿಗೆ ಸಿಲುಕುತ್ತಾರೆ. ಇತ್ತೀಚೆಗೆ ಬೆಳಕಿಗೆ ಬಂದಿರುವ “ಷೇರು ಮಾರುಕಟ್ಟೆಯಲ್ಲಿ ಹೂಡಿಕೆ’ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಂಡವರಿಗೆ ಸಾಮಾಜಿಕ ಜಾಲತಾಣಗಳನ್ನು ನಿರಂತರವಾಗಿ ವೀಕ್ಷಿಸುವ, ಹುಡುಕುವ ಅಭ್ಯಾಸವಿತ್ತು ಎಂಬುದು ಗೊತ್ತಾಗಿದೆ ಎನ್ನುತ್ತಾರೆ ಪೊಲೀಸರು.

6 ತಿಂಗಳಲ್ಲಿ
20 ಕೋ.ರೂ. ವಂಚನೆ
ಮಂಗಳೂರು ನಗರದಲ್ಲಿ ಆನ್‌ಲೈನ್‌ ಮೂಲಕ ಹೂಡಿಕೆ ಸಹಿತ ಕಳೆದ ಆರು ತಿಂಗಳಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, 20 ಕೋ.ರೂ. ವಂಚಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿ 15 ಮಂದಿಯನ್ನು ಬಂಧಿಸಲಾಗಿದ್ದು, 1.50 ಕೋ.ರೂ.ಗಳನ್ನು ದೂರುದಾರರಿಗೆ ಹಿಂದಿರುಗಿಸಲಾಗಿದೆ. ಒಂದು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಹೂಡಿಕೆಯ ಆಮಿಷ ಸಹಿತ ಯಾವುದೇ ರೀತಿಯ ಹಣಕಾಸಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಲಿಂಕ್‌ಗಳನ್ನು ತೆರೆಯಬಾರದು. ಒಂದು ವೇಳೆ ತೆರೆದರೂ ಹಣ ವರ್ಗಾಯಿಸಬಾರದು. ಆನ್‌ಲೈನ್‌ ವಂಚನೆ ಗೊತ್ತಾದ ಕೂಡಲೇ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬೇಕು. ಆನ್‌ಲೈನ್‌ ವಂಚನೆ ಬಗ್ಗೆ ಜನ ಜಾಗೃತರಾಗಬೇಕು.
– ಸತೀಶ್‌, ಇನ್‌ಸ್ಪೆಕ್ಟರ್‌,
ಸೈಬರ್‌ ಪೊಲೀಸ್‌ ಠಾಣೆ ಮಂಗಳೂರು

- ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next