Advertisement
ಚಿಕ್ಕಬಳ್ಳಾಪುರದ ಗುಂಡಿಬಂಡೆಯಲ್ಲಿ ತಲೆಮರೆಸಿಕೊಂಡಿದ್ದ ಕ್ಯಾಟ್ ರಾಜನನ್ನು ಖಚಿತ ಮಾಹಿತಿ ಮೇರೆಗೆ ಶುಕ್ರವಾರ ತಡರಾತ್ರಿ 11.30ರ ಸುಮಾರಿಗೆ ಬಂಧಿಸಿದ್ದ ಮಹಾಲಕ್ಷ್ಮೀ ಲೇಔಟ್ ಪೊಲೀಸರು, ಶನಿವಾರ ಬೆಳಗ್ಗೆ ಕೊಲೆಯಾದ ಸ್ಥಳ ಹಾಗೂ ಇಸ್ಕಾನ್ ದೇವಾಲಯ ಸಮೀಪದ ಆರ್.ಜಿ. ಪ್ಯಾಲೆಸ್ ಹೋಟೆಲ್‌ನಲ್ಲಿ ಮಹಜರು ಮಾಡಿದ್ದರು.
Related Articles
Advertisement
2 ತಿಂಗಳ ಹಿಂದೆ ಜೈಲಿನಲ್ಲೇ ಸಂಚು: ಕೆಲ ತಿಂಗಳ ಹಿಂದೆ ನಿವೇಶನ ವಿಚಾರಕ್ಕೆ ಲಕ್ಷ್ಮಣ ಹಾಗೂ ಆರ್.ಆರ್.ನಗರ ಪೊಲೀಸ್ ಠಾಣೆ ರೌಡಿಶೀಟರ್ ರೂಪೇಶ್ ನಡುವೆ ವಾಗ್ವಾದ ನಡೆದಿತ್ತು. ಇದೇ ವೇಳೆ ಪ್ರಕರಣವೊಂದರಲ್ಲಿ ಕ್ಯಾಟ್ ರಾಜ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ಮತ್ತೂಂದೆಡೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ರೂಪೇಶ್ ಕೂಡ ಜೈಲು ಸೇರಿದ್ದ.
ಈ ವಿಚಾರ ತಿಳಿದ ಹೇಮಂತ್, ಜೈಲಿನಲ್ಲಿ ರೂಪೇಶ್‌ನನ್ನು ಭೇಟಿಯಾಗಿ ಲಕ್ಷ್ಮಣನ ಹತ್ಯೆಗೆ ಸಹಕಾರ ನೀಡುವಂತೆ ಕ್ಯಾಟ್ ರಾಜನ ಮನವೊಲಿಸುವಂತೆ ಹೇಳಿದ್ದ. ಅದರಂತೆ ರೂಪೇಶ್, ಕ್ಯಾಟ್ ರಾಜನಿಗೆ ಲಕ್ಷ್ಮಣನ ಹತ್ಯೆಗೆ ಸಹಕಾರ ನೀಡುವಂತೆ ಕೇಳಿಕೊಂಡಿದ್ದ. ಆರಂಭದಲ್ಲಿ ನಿರಾಕರಿಸಿದ ಕ್ಯಾಟ್ ರಾಜ, ಜಾಮೀನು ಪಡೆದು ಹೊರ ಬರುತ್ತಿದ್ದಂತೆ ಹಣ ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದ.
ಒಂದು ತಿಂಗಳ ಹಿಂದೆ ಜಾಮೀನು ಪಡೆದು ಬಿಡುಗಡೆಯಾದ ಕ್ಯಾಟ್ ರಾಜ, ರೂಪೇಶ್, ಹೇಮಂತ್ ಜತೆಗೂಡಿ ದೇವನಹಳ್ಳಿ ತಾಲೂಕಿನ ಬೂದಿಗೆರೆಯ ಡಾಬಾ ಒಂದರಲ್ಲಿ ಕುಳಿತು ಸಂಚು ರೂಪಿಸಿದ್ದರು. ಅಷ್ಟೇ ಅಲ್ಲದೆ, ಮೂವರೂ ಪ್ರತ್ಯೇಕ ತಂಡ ಕಟ್ಟಿಕೊಂಡು ಲಕ್ಷ್ಮಣನ ಚಲನವಲನಗಳ ಬಗ್ಗೆ ನಿಗಾವಹಿಸಲು ಆರಂಭಿಸಿದ್ದರು.
ಎರಡು ಕಾರುಗಳ ಬಳಕೆ: ಹತ್ತು ದಿನಗಳ ಹಿಂದೆ ಹೇಮಂತ್ ತನ್ನ ಹೆಸರಿನಲ್ಲಿದ್ದ ಸ್ಕಾರ್ಪಿಯೋ ಮತ್ತು ಟಾಟಾ ಇಂಡಿಕಾ ಕಾರನ್ನು ಲಕ್ಷ್ಮಣನ ಚಲನವಲನಗಳ ಬಗ್ಗೆ ನಿಗಾವಹಿಸಲು ಯುವಕರಿಗೆ ಕೊಟ್ಟಿದ್ದ. ಲಕ್ಷ್ಮಣನ ದಿನಚರಿಯ ಇಂಚಿಂಚು ಮಾಹಿತಿಯನ್ನು ಮೂವರೂ ಸಂಗ್ರಹಿಸಿದ್ದರು. ಅಷ್ಟೇ ಅಲ್ಲದೆ, ಕೊಲೆ ಹಿಂದಿನ ದಿನ (ಮಾ.6ರಂದು) ಮುತ್ತತ್ತಿಗೆ ಹೋಗಿ ಎಲ್ಲರೂ ಭರ್ಜರಿ ಪಾರ್ಟಿ ಮಾಡಿದ್ದು,
ಮಾ.7ರಂದು ಆರ್.ಜೆ.ಪ್ಯಾಲೆಸ್ ಹೋಟೆಲ್‌ಗೆ ಲಕ್ಷ್ಮಣ ಬರುತ್ತಿದ್ದು, ಅಲ್ಲಿಯೇ ಕೊಲ್ಲಬೇಕೆಂದು ನಿರ್ಧರಿಸಿದ್ದರು. ಜತೆಗೆ ಅದೇ ದಿನ ರಾತ್ರಿ ಹೋಟೆಲ್ ಬಳಿ ಬಂದು ಯಾವ ರೀತಿ ಕೃತ್ಯ ಎಸಗಬೇಕೆಂದು ಸ್ಥಳ ನಿಗದಿ ಮಾಡಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಮಾ.7ರಂದು ಬೆಳಗ್ಗೆ 8 ಗಂಟೆಯಿಂದಲೇ ಕೆಂಗೇರಿಯಲ್ಲಿರುವ ಲಕ್ಷ್ಮಣನ ಮನೆ ಸಮೀಪದ ಟಾಟಾ ಇಂಡಿಕಾ ಕಾರಿನಲ್ಲಿ ಒಂದು ತಂಡ ಕಾಯುತ್ತಿತ್ತು.
9.30ರ ಸುಮಾರಿಗೆ ಮನೆಯಿಂದ ಹೊರಟ ಲಕ್ಷ್ಮಣನನ್ನು ಅದೇ ತಂಡ ಹಿಂಬಾಲಿಸುತ್ತಿತ್ತು. ಮತ್ತೆರಡು ತಂಡಗಳು ಆರ್.ಜಿ.ಪ್ಯಾಲೆಸ್ ಹೋಟೆಲ್ ಬಳಿ ಕಾಯುತ್ತಿದ್ದವು. ಸರಿಯಾಗಿ 10.30ರ ಸುಮಾರಿಗೆ ರೂಮ್ ಕಾಯ್ದಿರಿಸಲು ಹೋಟೆಲ್‌ಗೆ ಬಂದ ಲಕ್ಷ್ಮಣ, ನೇರವಾಗಿ ಪಾರ್ಕಿಂಗ್ ಸ್ಥಳಕ್ಕೆ ಹೋಗಿದ್ದಾನೆ. ಹೀಗಾಗಿ ಆರೋಪಿಗಳ ಪ್ಲಾನ್ ಫೇಲಾಗಿತ್ತು.
ನಂತರ ಸುಮಾರು ಎರಡು ಗಂಟೆಗಳ ಕಾಲ ಆರೋಪಿಗಳು ಅಲ್ಲೇ ಕಾದಿದ್ದಾರೆ. 12.30ರ ಸುಮಾರಿಗೆ ಹೋಟೆಲ್‌ನಿಂದ ಹೊರಬಂದ ಲಕ್ಷ್ಮಣನ ಇನೋವಾ ಕಾರಿನ ಮುಂಭಾಗದಲ್ಲಿ ಒಂದು ತಂಡ ಟಾಟಾ ಇಂಡಿಕಾ ಕಾರಿನಲ್ಲಿ ಹೋಗುತ್ತಿತ್ತು. ಮತ್ತೆರಡು ತಂಡಗಳು ಇನೋವಾ ಕಾರಿನ ಹಿಂಭಾಗದಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸುತ್ತಿದ್ದವು.
ಗೌತಮ ನಗರದ ರೆನೆಸಾನ್ಸ್ ಟೆಂಪಲ್ ಅಪಾರ್ಟ್‌ಮೆಂಟ್ ಮುಂಭಾಗ ಲಕ್ಷ್ಮಣ ಕಾರಿನ ಮುಂದೆ ಹೋಗುತ್ತಿದ್ದ ಟಾಟಾ ಇಂಡಿಕಾ ಕಾರನ್ನು ಚಾಲಕ ಏಕಾಏಕಿ ನಿಲ್ಲಿಸಿದ್ದಾನೆ. ಆಗ ಲಕ್ಷ್ಮಣ ಕೂಡ ಕಾರು ನಿಲ್ಲಿಸಿದ್ದಾನೆ. ಕೂಡಲೇ ಹಿಂದಿನಿಂದ ಬರುತ್ತಿದ್ದ ಸ್ಕಾರ್ಪಿಯೋ ಕಾರಿನಲ್ಲಿದ್ದ ಹಂತಕರು ಕಾರಿನಿಂದಿಳಿದು ಮಾರಕಾಸ್ತ್ರಗಳಿಂದ ಲಕ್ಷ್ಮಣನನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು.
ರಾಮ-ಲಕ್ಷ್ಮಣನ ಗ್ಯಾಂಗ್‌ನ ಹಳೇ ಪಂಟರ್: ಈ ಹಿಂದೆ ಲಕ್ಷ್ಮಣನ ತಂಡದಲ್ಲೇ ಗುರುತಿಸಿಕೊಂಡಿದ್ದ ರಾಜ, ಇತ್ತೀಚೆಗೆ ರಾಮ-ಲಕ್ಷ್ಮಣರಿಂದ ದೂರವಾಗಿ ಧೋಬಿಘಾಟ್ ರಾಮನ ಜತೆಗೆ ಗುರುತಿಸಿಕೊಂಡಿದ್ದ. ಸುಪಾರಿ ಕೊಟ್ಟರೆ ಯಾರನ್ನು ಬೇಕಾದರೂ ಹತ್ಯೆಗೈಯುತ್ತಿದ್ದ. ಕ್ಯಾಟ್ ರಾಜನ ವಿರುದ್ಧ ಬಿಡದಿ ಹಾಗೂ ನಗರದ ನಾಲ್ಕೈದು ಪೊಲೀಸ್ ಠಾಣೆಗಳಲ್ಲಿ ರೌಡಿಪಟ್ಟಿ ತೆರೆಯಲಾಗಿದೆ. ಈತನ ವಿರುದ್ಧ ಕೊಲೆ, ದರೋಡೆ, ಡಕಾಯತಿ, ರಾಬರಿ, ಸುಪಾರಿ ಕಿಲ್ಲಿಂಗ್ ಸೇರಿ ವಿವಿಧ ಠಾಣೆಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.
ಕೊಲೆ ಹಿಂದೆ ಯುವತಿ: ಸ್ತ್ರೀಲೋಲನಾಗಿದ್ದ ಲಕ್ಷ್ಮಣ, ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದು, ಯುವತಿಯೊಬ್ಬಳ ಜತೆ ಸ್ನೇಹ ಬೆಳೆಸಿದ್ದ. ಆಕೆ ಜತೆ ಪ್ರತ್ಯೇಕವಾಗಿ ಇರಲು ಬಯಸಿದ್ದ. ಈ ಹಿನ್ನೆಲೆಯಲ್ಲಿ ಮಾ.7ರಂದು ಮನೆಯಿಂದ ಹೊರಡುವಾಗ ಎರಡು ದಿನಗಳ ಕಾಲ ಊರಿನಲ್ಲಿ ಇರುವುದಿಲ್ಲ ಎಂದು ಪತ್ನಿಗೆ ಹೇಳಿ ಹೊರಟಿದ್ದಾನೆ.
ಇದೇ ವೇಳೆ ಯುವತಿ ಜತೆ ಕಾಲಕಳೆಯಲು ಆರ್.ಜಿ.ಪ್ಯಾಲೆಸ್ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದ. ಆ ಯುವತಿ ರೌಡಿಶೀಟರ್ ಹೇಮಂತ್‌ನ ಪರಿಚಯದವಳು ಎಂಬುದು ಗೊತ್ತಾಗಿದೆ. ಅಲ್ಲದೆ, ಘಟನಾ ಸ್ಥಳದಲ್ಲಿ ಚೇತು ಎಂಬಾತನ ಮೊಬೈಲ್ ಸಿಕ್ಕಿದ್ದು, ಲಕ್ಷ್ಮಣನ ಜತೆ ಆತ್ಮೀಯತೆ ಹೊಂದಿದ್ದ ಯುವತಿ ಜತೆ ಅದೇ ಮೊಬೈಲ್ ಮೂಲಕ ಆರೋಪಿಗಳು ಸಂಭಾಷಣೆ ನಡೆಸಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ತನ್ನ ಪರಿಚಯದ ಯುವತಿ ಜತೆ ಲಕ್ಷ್ಮಣ ಆತ್ಮೀಯತೆ ಹೊಂದಿರುವುದನ್ನು ಸಹಿಸದ ಹೇಮಂತ್, ಲಕ್ಷ್ಮಣನ ಹತ್ಯೆಗೆ ನಿರ್ಧರಿಸಿದ್ದ. ಮತ್ತೂಂದೆಡೆ ಲಕ್ಷ್ಮಣ, ರೂಪೇಶ್‌ಗೆ ಕೊಲೆ ಬೆದರಿಕೆ ಹಾಕಿದ್ದ. ಈ ಎಲ್ಲ ವಿಚಾರಗಳ ತಿಳಿದ ಹೇಮಂತ್, ಪರಿಚಯಸ್ಥ ಯುವತಿಯನ್ನು ಮುಂದಿಟ್ಟುಕೊಂಡು ರೂಪೇಶ್ ಮೂಲಕ ಕ್ಯಾಟ್ ರಾಜನನ್ನು ಬಳಸಿಕೊಂಡು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.