ಕಲಬುರಗಿ: ರಾಜ್ಯ ಸರ್ಕಾರ ಗೊಂಡ, ಜೇನುಕುರುಬ, ಕಾಡಕುರುಬ, ಟೋಕರೆ ಕೋಲಿ ಸೇರಿದಂತೆ ಇತರ ಜನಾಂಗದವರು ಪರಿಶಿಷ್ಟ ಪಂಗಡ ಜಾತಿ ಸಿಂಧುತ್ವ ಪ್ರಮಾಣಪತ್ರ ಪಡೆಯಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ನಿರಾಕ್ಷೇಪಣ ಪತ್ರ ಪಡೆಯಬೇಕೆಂದು ಹೊರಡಿಸಿರುವ ಹೊಸ ಆದೇಶ ಹಿಂದಕ್ಕೆ
ಪಡೆಯಬೇಕೆಂದು ಒತ್ತಾಯಿಸಿ ಜಿಲ್ಲಾ ಗೊಂಡ ಸಂಘ, ರಾಜ್ಯ ಟೋಕರೆ ಕೋಲಿ, ಕೋಲಿ ಸಮಾಜ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಇಲ್ಲಿನ ಜಗತ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಗೊಂಡ-ಕೋಲಿ ಸಮಾಜದವರು ಜಮಾವಣೆಯಾಗಿ ತಮಟೆ, ಡೊಳ್ಳುಗಳನ್ನು ಬಾರಿಸಿಕೊಂಡು ಮೆರವಣಿಗೆ ಮೂಲಕ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ತೆರಳಿ, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿದರು. ಜಿಲ್ಲಾಧಿಕಾರಿ ಆವರಣದಲ್ಲಿ ಸುಮಾರು ಹೊತ್ತು ಪ್ರತಿಭಟನೆ ನಡೆಸಿ, ಸಮಾಜ ಕಲ್ಯಾಣ ಇಲಾಖೆ ಕೆಲವೊಂದು ಜಾತಿಗಳಿಗೆ ಮಾತ್ರ ಜಾತಿ ಸಿಂಧುತ್ವ ಪ್ರಮಾಣಪತ್ರ ಪಡೆಯಲು ಇಂತಹ ಆದೇಶ
ಹೊರಡಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಹೇಳಿದರು.
ಸುಳ್ಳು ಜಾತಿ ಮತ್ತು ಸಿಂಧುತ್ವ ಪ್ರಮಾಣಪತ್ರ ಪಡೆಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ನಿಯಮ ಸಹಕಾರಿಯಾಗಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಆದರೆ, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿದ್ದು, ಅವುಗಳಲ್ಲಿ ಕೆಲ ಜಾತಿಗಳು ಅಂದರೆ, ಗೊಂಡ, ರಾಜಗೊಂಡ, ಜೇನುಕುರುಬ, ಕಾಡಕುರುಬ, ಟೋಕರೆ ಕೋಲಿ ಸೇರಿದಂತೆ ಇತರ ಜಾತಿಗಳಿಗೆ ನಿರಾಕ್ಷೇಪಣ ಪತ್ರ ಪಡೆಯಬೇಕೆಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಪರಿಶಿಷ್ಟ ಪಂಗಡದಲ್ಲೇ ಕ್ರಮ ಸಂ.38ರಲ್ಲಿ ಬರುವ ನಾಯ್ಕಡ ಸಮಪದವಾದ ಬೇಡ, ಬೇಡರ, ನಾಯಕ, ನಾಯ್ಕ ಮತ್ತು ವಾಲ್ಮೀಕಿ ಜನಾಂಗದವರಿಗೆ ಇಂತಹ ನಿಯಮ ವಿಧಿಸಿಲ್ಲ.
ಇದೇ ಕ್ರಮ ಸಂಖ್ಯೆಯಲ್ಲಿ ಬರುವ ತಳವಾರ ಮತ್ತು ಪರಿವಾರದವರು ನಿರಾಕ್ಷೇಪಣ ಪತ್ರ ತರಬೇಕೆಂದು ಹೇಳಲಾಗಿದೆ. ಹೀಗೆ ಯಾಕೆ ಎಂದು ಪ್ರಶ್ನಿಸಿದರು. ಆದೇಶ ವಾಪಸ್ ಪಡೆಯಬೇಕು. ಇಲ್ಲವೇ ಪರಿಶಿಷ್ಟ ಪಂಗಡದಲ್ಲಿ ಬರುವ ಜಾತಿಗಳಿಗೂ ಇದೇ ನಿಯಮ ಅನ್ವಯವಾಗುವಂತೆ ಆದೇಶಿಸಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಗೊಂಡ ಸಂಘದ ಅಧ್ಯಕ್ಷ ಮಹಾಂತೇಶ ಕೌಲಗಿ, ಟೋಕರೆ ಕೋಲಿ, ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಲಚ್ಚಪ್ಪ ಜಮಾದಾರ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ಮುಖಂಡರಾದ ಮಹಾದೇವ ಕೋಳಕೂರ, ಪೀಡೆಪ್ಪ ಜಾಲಗಾರ, ಅಂಬಣ್ಣ ನರಗೋಧಿ, ನಿಂಗಪ್ಪ ಹೇರೂರ, ಶರಣು ಕರಗರ, ಶ್ರೀಮಂತ ಗಣಜಲಖೇಡ್, ಅಮರೇಶ ದೇವಾಂಗ ಮತ್ತಿತರರು ಪಾಲ್ಗೊಂಡಿದ್ದರು.