ಮೂಡಬಿದಿರೆ: ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ಮತ್ತು ಕೊಡಗು ಅರಣ್ಯ ವೃತ್ತಗಳ ಪ್ರಾದೇಶಿಕ ಅರಣ್ಯ ಕ್ರೀಡಾಕೂಟ-2017 ರವಿವಾರ ಇಲ್ಲಿನ ಸ್ವರಾಜ್ಯ ಮೈದಾನದ ಕ್ರೀಡಾಂಗಣದಲ್ಲಿ ಜರಗಿತು.
ಶಾಸಕ ಕೆ. ಆಭಯಚಂದ್ರ ಅವರು ಉದ್ಘಾಟಿಸಿ, ಜಾತಿ -ಮತಗಳ ಗೋಡೆಗಳಿಲ್ಲದ ರಂಗವೊಂದಿದ್ದರೆ ಅದು ಕ್ರೀಡಾ ಕ್ಷೇತ್ರ ಮಾತ್ರ. ಇಲ್ಲಿ ಪ್ರಾಮಾಣಿಕತೆ ಮತ್ತು ಪರಿಶ್ರಮಕ್ಕಷ್ಟೇ ಮಹತ್ವ. ದೇಹ ಮತ್ತು ಮನಸ್ಸುಗಳ ಆರೋಗ್ಯದಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ದೇಶಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್. ಸುವರ್ಣ ಅವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ಸಂಜಯ್ ಎಸ್. ಬಿಜೂರು ಪ್ರಸ್ತಾವನೆಗೈದರು. ಮುಖ್ಯಅತಿಥಿಗಳಾಗಿ ಪುರಸಭಾ ಉಪಾಧ್ಯಕ್ಷ ವಿನೋದ್ ಸೆರಾವೋ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಪಿ. ಕೆ. ಥಾಮಸ್, ಮುಡಾ ಅಧ್ಯಕ್ಷ ಸುರೇಶ್ ಪ್ರಭು, ಮುಡಾ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಭಾಗವಹಿಸಿದ್ದರು.
ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಎಸ್. ಎಸ್., ಮಂಗಳೂರಿನ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಎಸ್. ನೆಟಲ್ ಕರ್, ಅರಣ್ಯ ವಿಚಕ್ಷಣ ದಳದ ಎ. ಎಸ್. ಅಬ್ಟಾಸ್, ವಿವಿಧ ಉಪ ವಿಭಾಗಗಳ ಅಧಿಕಾರಿಗಳಾದ ಗಣೇಶ್ ಭಟ್ ಕುದುರೆಮುಖ, ಕರಿಕಳನ್ ಮಂಗಳೂರು, ಮರಿಯ ಕೃಷ್ಣರಾಜು ವಿರಾಜಪೇಟೆ, ಸೂರ್ಯಸೇನ ಮಡಿಕೇರಿ, ಪ್ರಭಾಕರನ್ ಕುಂದಾಪುರ, ಶ್ರೀನಿವಾಸ ಮೂರ್ತಿ ಮಂಗಳೂರು, ಕಾರ್ಕಳ ವಲಯ ಅರಣ್ಯಾಧಿಕಾರಿ ಜಿ.ಡಿ. ದಿನೇಶ್, ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೊಡಗಿನ ಆರೋಗ್ಯಸ್ವಾಮಿ, ಮಂಗಳೂರು ವೃತ್ತದ ಪ್ರಜ್ಞಾ , ಕೀರ್ತನ್ ಶೆಟ್ಟಿ, ಶರತ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕ್ರೀಡಾಜ್ಯೋತಿಯನ್ನು ಅಧ್ಯಕ್ಷತೆ ವಹಿಸಿದ್ದ ಹರಿಣಾಕ್ಷಿ ಎಸ್. ಸುವರ್ಣ ಅವರಿಗೆ ನೀಡಿ, ಅದರ ಮೂಲಕ ಕುಂಡವನ್ನು ಬೆಳಗಿಸಲಾಯಿತು. ಸತೀಶ್ ಬಾಬಾ ರೈ ಅಪ್ರತಿಜ್ಞಾವಿಧಿ ಬೋಧಿಸಿದರು.
ಮೂಡಬಿದಿರೆ ಉಪವಿಭಾಗದ ಸ. ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣ್ಯ ರಾವ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ಕುದುರೆಮುಖ ಉಪವಿಭಾಗದ ಸಹಾಯಕ ಅರಣ್ಯಾಧಿಕಾರಿ ಭಾಸ್ಕರ್ ವಂದಿಸಿದರು.
22 ಆ್ಯತ್ಲೆಟಿಕ್ಸ್, 9 ಈಜು, 8 ಪುರುಷರ ಈಜು, 7 ಮಹಿಳೆಯರ ಈಜು, 17 ಒಳಾಂಗಣ ಕ್ರೀಡೆಗಳು, 9 ಹೊರಾಂಗಣ ಕ್ರೀಡೆಗಳು, ರೈಫಲ್ ಶೂಟಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತು.