ವರ್ಷಾಂತ್ಯಕ್ಕೆ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ, ಮುಂದಿನ ವರ್ಷದ ಏಪ್ರಿಲ್-ಮೇ ನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪೂರಕವಾಗಿರುವಂತೆ ಬಿಹಾರದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಜಾತಿ ಗಣತಿಯ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ಅದರ ಅನ್ವಯ ಆ ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ 13 ಕೋಟಿ ಮಂದಿ ಒಬಿಸಿಗೆ ಸೇರಿದವರು.
ಶೇಕಡಾವಾರು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 63. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಬಿಹಾರದಲ್ಲಿ ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗಿದೆ. ಬ್ರಿಟಿಷ್ ಆಡಳಿತದ ಭಾರತದಲ್ಲಿ 1931ರಲ್ಲಿ ಕೊನೆಯ ಬಾರಿಗೆ ಜಾತಿ ಆಧಾರಿತ ಸಮೀಕ್ಷೆ ನಡೆಸಲಾಗಿತ್ತು. 1881ರಲ್ಲಿ ಮೊದಲ ಬಾರಿಗೆ ಇಂಥ ಅಧ್ಯಯನ ಕೈಗೊಳ್ಳಲಾಗಿತ್ತು.
ಬಿಹಾರದ ವರದಿಯ ಬಗ್ಗೆ ಪಕ್ಷಿನೋಟ ಬೀರುವುದಿದ್ದರೆ ಶೇ.27 ಹಿಂದುಳಿದ ವರ್ಗ, ಶೇ.36 ಅತ್ಯಂತ ಹಿಂದುಳಿದ ವರ್ಗ, ಎಸ್‌ಸಿ ಶೇ.19.65, ಎಸ್‌ಟಿ ಶೇ.1.68, ಸಾಮಾನ್ಯ ವರ್ಗಕ್ಕೆ ಸೇರಿದವರು ಶೇ. 15.52 ಎಂಬ ವರ್ಗೀಕರಣವಿದೆ. ಯಾದವ ಸಮುದಾಯ ಶೇ.14, ಕುಮ್ರಿ ಶೇ.2.87 ಇದೆ.
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ನಡೆಸಿದ ಈ ಸಮೀಕ್ಷೆಯನ್ನೇ ಮುಂದಿಟ್ಟುಕೊಂಡೇ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಇವರೇ ಮುಂತಾದವರು ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ “ನಾವು ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುತ್ತೇವೆ’ ಎಂಬ ಭರವಸೆಯ ಮಾತುಗಳನ್ನು ಆಗಾಗ ಹೇಳುತ್ತಾ ಬರುತ್ತಿದ್ದಾರೆ.
ಜಾತಿಗಣತಿ ಎನ್ನುವುದೇ ರಾಜಕೀಯದಲ್ಲಿ ಅತ್ಯಂತ ಸೂಕ್ಷ್ಮವಾಗಿರುವ ವಿಚಾರವೇ ಹೌದು. ಕೊಂಚ ತಪ್ಪಿ ಹೋದರೂ ಅದರಿಂದ ಉಂಟಾಗುವ ರಾಜಕೀಯ ಪ್ರತಿಕೂಲ ಸಂಗತಿಗಳು ವರ್ಷಾನುಗಟ್ಟಲೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಆಗಾಗ ವಿಶೇಷವಾಗಿ ಚುನಾವಣೆಗಳ ಸಂದರ್ಭಗಳಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಒಟ್ಟು 40 ಲೋಕಸಭಾ ಸದಸ್ಯರನ್ನು ಕಳುಹಿಸಿಕೊಡುವ ಬಿಹಾರದಲ್ಲಿ ಮುಸ್ಲಿಂ ಸಮುದಾಯದ ಪ್ರಮಾಣ ಶೇ. 17.70. ಹಿಂದೂಗಳು ಶೇ.81.99.ಜಾತಿ ಎನ್ನುವುದು ಕತ್ತಿಯ ಅಲಗಿನ ಮೇಲೆ ನಡೆದಂತೆಯೇ ಸರಿ ಎಂಬ ಮಾತನ್ನು ದೇಶದ ರಾಜಕೀಯ ವಲಯದ ಹಿರಿಯ ನಾಯಕರು ಆಗಾಗ ಆತ್ಮೀಯ ವಲಯದಲ್ಲಿ ಹೇಳುವುದುಂಟು. ಇಂಥ ವರದಿಗಳು ಕೇವಲ ರಾಜಕೀಯ ಲಾಭ ಪಡೆಯುವುದಕ್ಕೋ, ನಾಯಕರ ವೈಯಕ್ತಿಕ ವರ್ಚಸ್ಸು ಹೆಚ್ಚಿಸಲು ಬಳಕೆಯಾಗದೆ, ನಿಜವಾಗಿಯೂ ಅನ್ಯಾಯಕ್ಕೆ, ತುಳಿತಕ್ಕೆ ಒಳಗಾಗಿರುವ ಸಮುದಾಯಕ್ಕೆ ಅನುಕೂಲವಾಗುವಂತೆ ಸರ್ಕಾರಗಳ ಕಲ್ಯಾಣ ಯೋಜನೆಗಳು ಅವರಿಗೆ ತಲುಪುವಂತೆ ಆಗಬೇಕು.
ವರದಿ ಪ್ರಕಟಗೊಳ್ಳುತ್ತಲೇ ರಾಜಕೀಯವಾಗಿ ಲಾಭ-ನಷ್ಟದ ಲೆಕ್ಕಾಚಾರಗಳು, ಆರೋಪ ಪ್ರತ್ಯಾರೋಪಗಳಿಗೆ ಸೋಪಾನವಾಗಿದೆ. ಬಿಹಾರ ಬಿಜೆಪಿ ಘಟಕ ಅಧ್ಯಕ್ಷ ಸಾಮ್ರಾಟ್ ಚೌಧರಿಯವರ ಪ್ರಕಾರ ವರದಿ ರಾಜ್ಯದ ಬದಲಾಗಿರುವ ಸಾಮಾಜಿಕ ಕ್ಷೇತ್ರದ ಅಂಶವನ್ನು ಪ್ರತಿಫಲಿಸಬೇಕಾಗಿತ್ತು ಎಂದಿದ್ದಾರೆ. ಇನ್ನು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮತ್ತೆ ದೇಶಾದ್ಯಂತ ಜಾತಿಗಣತಿ ನಡೆಸಬೇಕು ಎಂಬ ವಾದ ಮುಂದಿಟ್ಟಿದ್ದಾರೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಕೈಗೊಂಡಿದ್ದು, ಅದರ ಪರಿಷ್ಕೃತ ವರದಿ ಇಷ್ಟರಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಸಮೀಕ್ಷೆ ಸಹ ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದೆ.ಆದರೆ ಈ ಪ್ರಕ್ರಿಯೆ ಜೇನಿನ ಗೂಡಿಗೆ ಕಲ್ಲು ಎಸೆದ ಹಾಗೆ ಎನ್ನುವುದು ಎಲ್ಲ ಪಕ್ಷಗಳಿಗೂ ತಿಳಿದಿರುವ ಕಾರಣ, ಒಂದಿಲ್ಲೊಂದು ಲೆಕ್ಕಾಚಾರಗಳೇ ಮೇಳೈಸುತ್ತವೆ.