Advertisement

ಗೋಡಂಬಿ ಶಿಖರ ಎಂಬಿಎ ಪದವಿ ಬಿಟ್ಟು ಕೃಷಿ ಹಿಂದೆ ಬಿದ್ದವನ ಕತೆ

03:45 AM Jun 26, 2017 | |

ತುಂಗಭದ್ರಾ ಎಡದಂಡೆ ಕಾಲುವೆ ಕೊನೆ ಭಾಗದ ರೈತರಿಗೆ ಇಂದಿಗೂ ಸಮರ್ಪಕ ನೀರು ದಕ್ಕುವುದಿಲ್ಲ. ರಾಯಚೂರು ಹೇಳಿ ಕೇಳಿ ಗಡಿ ಜಿಲ್ಲೆ. ಈ ಭಾಗದ ಬಹುತೇಕ ಗ್ರಾಮಗಳು ಇತ್ತ ಕರ್ನಾಟಕಕ್ಕೂ ಅತ್ತ ಆಂಧ್ರ, ತೆಲಂಗಾಣಕ್ಕೂ ಬೇಡವಾಗಿದೆ. ಹೀಗಾಗಿ ಈ ಭಾಗದಲ್ಲಿ ನೀರಾವರಿ ಯೋಜನೆಗಳು ಸಾಕಾರಗೊಂಡಿಲ್ಲ. ಇಂದಿಗೂ ಆಂಧ್ರ, ತೆಲಂಗಾಣಕ್ಕೆ ತೆರಳುವ ಮಾರ್ಗದಲ್ಲಿ ಬರೀ ಬಂಜರು ಭೂಮಿ ಇದೆ. ಇಂಥ ಭೂುಯಲ್ಲಿ ಸಾಮಾನ್ಯ ಬೆಳೆ ಬೆಳೆಯುವುದೇ ದುಸ್ತರ. ಅಂಥದ್ದರಲ್ಲಿ ಎಂಬಿಎ ಪದವೀಧರನೊಬ್ಬ ಗೋಡಂಬಿ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ.  

Advertisement

ರಾಯಚೂರು ನಗರದ ನಿವಾಸಿ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ಇಂಥ ಸಾಧನೆ ಮಾಡಿದ ಯುವಕ. ಬೆಂಗಳೂರಿನಲ್ಲಿ ಎಂಬಿಎ ಪದ ಮುಗಿಸಿದ ನಂತರ ಕೆಲ ಕಾಲ ಅಲ್ಲಿಯೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ. ಆದರೆ, ಕಾರ್ಪೊರೆಟ್‌ ಬದುಕು ಅವರನ್ನು ಆಕರ್ಷಿಸಲಿಲ್ಲ. ತಮ್ಮ ಪೂರ್ವಿಕರು ಮಾಡಿಟ್ಟ ಜಮೀನಿನಲ್ಲಿಯೇ ಏನಾದರೂ ಮಾಡಬೇಕು ಎಂಬ ತುಡಿತದಿಂದ ತಮ್ಮೂರಿನ ಕಡೆ ನಡೆದ.

ತಾಲೂಕಿನ ವಡವಟ್ಟಿ ಗ್ರಾಮದಲ್ಲಿ ತಮ್ಮ ಪೂರ್ವಜರ ಭೂಮಿ ಇತ್ತು. ಆದರೆ, ಏನನ್ನು ಬೆಳೆಯಲು ಯೋಗ್ಯವಲ್ಲದ ಈ ಭೂಮಿಗೆ ಹಣ ಹೂಡುವುದಕ್ಕಿಂತ ಸುಮ್ಮನಿರುವುದೇ ಲೇಸು ಎಂದರು ಈ ಭಾಗದ ರೈತರು. ಆದರೆ, ಮಲ್ಲಿಕಾರ್ಜುನ ಮಾತ್ರ ಹಾಗೆ ಮಾಡಲಿಲ್ಲ. ಇದೇ ಭೂಮಿಯಲ್ಲಿ ಏನಾದರೂ ಬೆಳೆದು ತೋರಿಸಬೇಕು ಎಂಬ ತುಡಿತ.  ಆಗ ದೊಡ್ಡಪ್ಪನ ಮಾರ್ಗದರ್ಶನದಲ್ಲಿ ದೊಡ್ಡ ಯೋಜನೆಗೆ ಕೈ ಹಾಕಿದ. ಯುವಕನ ಯೋಜನೆಗೆ ಹುಚ್ಚು ಯೋಚನೆ ಎಂದು ಟೀಕಿಸಿದವರೂ ಉಂಟು. ಆದರೆ, ಇಂದು ಅದೇ ಬಂಜರು ಭೂಮಿಯಲ್ಲಿ  ಚಿನ್ನದಂಥ ಫ‌ಲಸು ತೆಗೆಯುತ್ತಿರುವುದನ್ನು ಕಂಡು ನಿಬ್ಬೆರಗಾಗಿದ್ದಾರೆ.

ಆರಂಭದಲ್ಲಿ ಮಣ್ಣು ಪರೀಕ್ಷೆ ಮಾಡಿಸಿದ. ಗೋಡಂಬಿ ಬೆಳೆಯಬಹುದು ಅಂತ ಗೊತ್ತಾಯಿತು. ಆರಂಭದ ಆರು ತಿಂಗಳು ಗಿಡಗಳನ್ನು ಪೋಷಿಸುವುದು ತುಸು ಕಷ್ಟವಾಯಿತು. ದೀರ್ಘಾವಧಿ ಬೆಳೆಯಾಗಿರುವ ಗೋಡಂಬಿ ಏಳು ವರ್ಷದ ನಂತರ ಫ‌ಲ ಕೊಟ್ಟಿತು. 

ಇಂದು ಕೈತುಂಬ ಹಣ ತಂದುಕೊಡುತ್ತಿರುವ ಈ ಕೃ ಪದ್ಧತಿ ಇತರರಿಗೆ ಮಾದರಿಯಾಗುತ್ತಿದೆ. 

Advertisement

ಭಾರೀ ಬೇಡಿಕೆ
ಗೋಡಂಬಿಗೆ ಎಂದಿಗೂ ಬೇಡಿಕೆ ಇದ್ದೇ ಇದೆ. ಈ ಬೆಳೆಯನ್ನು ನಿಯಮಿತ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಇದನ್ನು ಬೆಳೆದರೆ ವ್ಯಾಪಾರಿಗಳು ಇದ್ದಲ್ಲಿಗೆ ಬಂದು ಖರೀದಿಸುತ್ತಾರೆ ಎನ್ನುತ್ತಾರೆ ಮಲ್ಲಿಕಾರ್ಜುನ ಸ್ವಾಮಿ. ಕಚ್ಚಾ ಸಾಮಗ್ರಿಗೆ ಕ್ವಿಂಟಲ್‌ಗೆ ಕನಿಷ್ಠ 25ರಿಂದ 30 ಸಾವಿರ ರೂ. ಲಭಿಸುತ್ತದೆ. ಕಾಯಿಗಳಿಂದ ಗೋಡಂಬಿ ಪ್ರತ್ಯೇಕಿಸುವುದು ಮುಖ್ಯ ಕೆಲಸ. ಅದಕ್ಕೆ ಪಕ್ವತೆ ಬೇಕು. ನಾವು ಕೇವಲ ಬೆಳೆದ ಕಾಯಿಗಳನ್ನು ಮಾರಿದರೂ, ವ್ಯಾಪಾರಿಗಳು ಖರೀದಿಸಿ ತಾವೇ ಪ್ರತ್ಯೇಕ ಮಾಡಿಕೊಳ್ಳುತ್ತಾರೆ. ಹೈದ್ರಾಬಾದ್‌, ಶಿರಸಿ ಕಡೆಗೆ ಹೆಚ್ಚಾಗಿ ಖರೀದಿಯಾಗುತ್ತದೆ ಎಂದು ವಿವರಿಸುತ್ತಾರೆ ಸ್ವಾಮಿ.

ಬೇರೆ ಬೆಳೆಗಳಲ್ಲೂ ಸೈ
ಇಷ್ಟು ಮಾತ್ರವಲ್ಲದೇ ತೋಟಗಾರಿಕೆಯತ್ತವೂ ಮಲ್ಲಿಕಾರ್ಜುನ ಚಿತ್ತ ಹರಿಸಿದ್ದಾರೆ. ಗೋಡಂಬಿ ಜೊತೆಗೆ ಮಾವು, ಸಪೋಟ, ಪೇರಲ, ನೀಲದ ಹಣ್ಣು, ಬೆಟ್ಟದ ನೆಲ್ಲಿಕಾಯಿ ಕೂಡ ಬೆಳೆದಿದ್ದಾರೆ. ವಿವಿಧ ತಳಿಗಳ ಗಿಡಗಳನ್ನು ಇದೇ ಬಂಜರು ಭೂಮಿಯಲ್ಲಿ ಬೆಳೆದಿದ್ದಾರೆ. ಪರಿಚಿತರಿಗೆ ಹೈನುಗಾರಿಕೆ ಮಾಡಲು ನೆರವಾಗಿದ್ದಲ್ಲದೇ ಅದರಿಂದ ಬರುವ ಸಗಣಿ ಗೊಬ್ಬರವನ್ನು ಕೃಷಿಗೆ ಬಳಸಿಕೊಳ್ಳುತ್ತಿದ್ದಾರೆ.

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next