Advertisement

ಗೋಡಂಬಿ ಬರಡು ಭೂಮಿಯ ಬಂಗಾರದ ಬೆಳೆ

02:43 PM Feb 15, 2022 | Team Udayavani |

ಬೀದರ: ಬರಡು ಭೂಮಿಗೆ ಬಂಗಾರ ಬೆಳೆಯಾದ ಗೋಡಂಬಿಯನ್ನು ಬೆಳೆದು ಆರ್ಥಿಕವಾಗಿ ಸದೃಢರಾಗುವಂತೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ| ಎಸ್‌.ವಿ ಪಾಟೀಲ ಅವರು ರೈತ ಬಾಂಧವರಿಗೆ ಕರೆ ನೀಡಿದರು.

Advertisement

ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್‌ ಆಶ್ರಯದಲ್ಲಿ ಇತ್ತೀಚೆಗೆ ಮಹಾವಿದ್ಯಾಲಯದಲ್ಲಿ ನಡೆದ ಗೋಡಂಬಿ ಬೆಳೆಯ ಅವಕಾಶಗಳು ಮತ್ತು ಆಧುನಿಕ ಬೇಸಾಯ ತಾಂತ್ರಿಕತೆಗಳ ಕುರಿತು ಜಿಲ್ಲಾಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಗೋಡಂಬಿ ಬೆಳೆಯನ್ನು 18ನೇ ಶತಮಾನದಲ್ಲಿ ಪೋರ್ಚುಗೀಸರು ಭಾರತಕ್ಕೆ ಪರಿಚಯಿಸಿದರು. ಸಮುದ್ರದ ತೀರದಲ್ಲಿ ಫಲವತ್ತಾದ ಮಣ್ಣನ್ನು ಸವಳಿಕೆಯಾಗದಂತೆ ತಡೆಯಲು ಗೋಡಂಬಿ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿ, ನಂತರದ ದಿನಗಳಲ್ಲಿ ವಿಜ್ಞಾನಿಗಳ ಸಂಶೋಧನೆ ಪರಿಶ್ರಮದಿಂದ ಗೋಡಂಬಿಯನ್ನು 500ರಿಂದ 3500 ಮಿ.ಮೀ ವರೆಗೆ ಮಳೆಯಾಗುವ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಬಹುದೆಂದು ಪರಿಚಯಿಸಿದರು.

ರೈತರು ತಮ್ಮ ಬಂಜರು ಭೂಮಿಯಲ್ಲಿ ಈ ಬೆಳೆಯನ್ನು ಬೆಳೆದು ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕೆಂದು ತಿಳಿಸಿದರು. ಉಪ ಅರಣ್ಯ ಸಂರಕ್ಷಣಾ ಧಿಕಾರಿ (ಸಾಮಾಜಿಕ ಅರಣ್ಯ) ಎ.ಬಿ ಪಾಟೀಲ ಮಾತನಾಡಿ, ಪ್ರತಿಯೊಬ್ಬ ರೈತರು ತಮ್ಮ ಬಂಜರು ಭೂಮಿಯಲ್ಲಿ ಗೋಡಂಬಿ ಬೆಳೆಯನ್ನು ಬೆಳೆದು ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು. ಕೃಷಿ ಜೊತೆಗೆ ಕೃಷಿ ಅರಣ್ಯ ಪದ್ಧತಿ ಅಳವಡಿಸಿದರೆ ಇವತ್ತಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದ ವಾರ್ಷಿಕ ಬೆಳೆಗಳು ಹಾನಿಯಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಅಲ್ಲದೇ, ರೈತರು ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ 10 ಗಿಡಗಳಾದರು ಬದುವಿನ ಮೇಲೆ ನೆಟ್ಟು ಬೆಳಿಸಿದರೆ ಅದರಿಂದ ಮಣ್ಣು ಮತ್ತು ನೀರು ಸಂರಕ್ಷಣೆ, ಪರಿಸರ ರಕ್ಷಣೆ, ರೈತರ ಆದಾಯ ದ್ವಿಗುಣಗೊಳಿಸಲು ಕೂಡಾ ಉಪಯೋಗವಾಗುತ್ತದೆ ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಡಾ| ಎಸ್‌.ವಿ ಪಾಟೀಲ ಅವರು ಗೋಡಂಬಿ ಬೆಳೆಯ ಪ್ರಾಮುಖ್ಯತೆ, ಡಾ| ಮೊಹಮ್ಮದ ಫಾರೂಕ್‌ ಅವರು ಮೈದಾನ ಪ್ರದೇಶಕ್ಕೆ ಸೂಕ್ತವಾದ ಗೋಡಂಬಿ ತಳಿಗಳ ಬಗ್ಗೆ, ಡಾ| ಆನಂದ ಪಾಟೀಲ ಗೋಡಂಬಿ ಬೆಳೆಯ ಸುಧಾರಿತ ಸಸ್ಯಾಭಿವೃದ್ಧಿ ವಿಧಾನಗಳ ಕುರಿತು, ಡಾ| ಶ್ರೀನಿವಾಸ್‌ ಎನ್‌, ಅವರು ಗೋಡಂಬಿ ಬೆಳೆಯ ಸುಧಾರಿತ ಸಸ್ಯಾಭಿವೃದ್ಧಿ ವಿಧಾನಗಳು, ಡಾ| ರಾಜಕುಮಾರ ಎಂ., ಗೋಡಂಬಿ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು.

Advertisement

ಪ್ರಗತಿಪರ ರೈತ ನಾರಾಯಣರಾವ ಚಿಟ್ಟಾ ಅವರು ಗೋಡಂಬಿ ಬೆಳೆಯ ಲಾಭ ಹಾಗೂ ಅನುಭವ ಹಂಚಿಕೊಂಡರು. ನಂತರ, ರೈತರು ತೋಟಗಾರಿಕೆ ಮಹಾವಿದ್ಯಾಲಯ, ಬೀದರನಲ್ಲಿರುವ ಗೋಡಂಬಿ ಬೀಜದ ಸಂಸ್ಕರಣ ಘಟಕ ಹಾಗೂ ಗೋಡಂಬಿ ತಳಿಗಳ ಕ್ಷೇತ್ರಕ್ಕೆ ಭೇಟಿ ನೀಡಿದ ರೈತರು, ಹೆಚ್ಚಿನ ಮಾಹಿತಿ ಪಡೆದರು. ಡಾ| ಶ್ರೀನಿವಾಸ ಎನ್‌., ನಿರೂಪಿಸಿದರು. ಡಾ| ಆನಂದ ಪಾಟೀಲ ಸ್ವಾಗತಿಸಿದರು. ಡಾ| ರಾಜಕುಮಾರ ಎಂ. ವಂದಿಸಿದರು. ಜಿಲ್ಲೆಯ 100ಕ್ಕೂ ಹೆಚ್ಚು ರೈತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next