Advertisement
2019ನೇ ಸಾಲಿನ ಡಿ. 15ರ ತನಕ ತಾಲೂಕು ಹಾಗೂ ನೆರೆಯ ತಾಲೂಕಿನಲ್ಲಿ ಮಳೆ ಇದ್ದ ಪರಿಣಾಮ ಹವಾಮಾನ ವೈಪರೀತ್ಯಗೊಂಡಿದೆ. ಮಳೆ ನಿಂತರೂ ಚಳಿ ಆರಂಭಗೊಳ್ಳಲೇ ಇಲ್ಲ. ಗೇರು ಮರ ಸೂಕ್ತವಾಗಿ ಫಲ ಬಿಡಲು ಫಲಗಾಳಿಯೂ ಇಲ್ಲ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೇರು ಮರ ಹೂ ಬಿಡಲು ತಡವಾಗಿದೆ. ಇನ್ನೂ ಕೆಲವೆಡೆ ಮರಗಳು ಹೂ ಬಿಟ್ಟಿಲ್ಲ. ಈ ಪರಿಣಾಮದಿಂದ ಜನವರಿ ತಿಂಗಳ ಕೊನೆಗೆ ಮೂರು ಎಕ್ರೆ ಗೇರು ತೋಟದಲ್ಲಿ 10 ಕ್ವಿಂಟಲ್ ಗೇರು ಬೀಜ ದೊರೆಯುತ್ತಿದ್ದ ರೈತರಿಗೆ ಈತನಕ ಸಿಕ್ಕಿದ್ದು 10 ಕೆ.ಜಿ.ಯಷ್ಟು ಮಾತ್ರ.
ಅಡಿಕೆಗೆ ಹಳದಿ ರೋಗ, ರಬ್ಬರ್‌ಗೆ ಧಾರಣೆ ಕುಸಿತ, ಕರಿಮೆಣಸಿಗೆ ಸೊರಬು ರೋಗದಿಂದ ತಾಲೂಕಿನ ರೈತರು ಬೇರೆ ಬೇರೆ ಪರ್ಯಾಯ ಬೆಳೆಯತ್ತ ಆಲೋಚಿಸಿದರು. ಅದರಲ್ಲಿ ಹೆಚ್ಚಿನವರು ಗೇರು ಕೃಷಿಯ ಬಗ್ಗೆ ಆಲೋಚಿಸಿ ಗೇರಿನ ವಿವಿಧ ಹೈಬ್ರಿಡ್ ತಳಿಗಳಾದ ಉಳ್ಳಾಲ-1 ಉಳ್ಳಾಲ-2, ಉಳ್ಳಾ-3 ,ಉಳ್ಳಾಲ-4 ಯು.ಎನ್.-50, ಚಿಂತಾಮಣಿ-1 ಭಾಸ್ಕರ ಹೀಗೆ ವಿವಿಧ ತಳಿಗಳನ್ನು ನಾಟಿ ಮಾಡಿದರು. ಗೇರು ಗಿಡಗಳು ಫಸಲು ನೀಡಲು ಪ್ರಾರಂಭವಾಗಿ ಅನೇಕ ವರ್ಷಗಳು ಕಳೆದಿವೆ. ಇನ್ನೂ ಕೆಲವರು ಮತ್ತೆ ಪ್ರತಿ ವರ್ಷ ಗೇರು ನಾಟಿ ಮಾಡುತ್ತಿದ್ದಾರೆ. ಸುಳ್ಯ ತಾಲೂಕಿನಲ್ಲಿ 2,500 ಹೆಕ್ಟೇರ್ ಭೂಮಿಯಲ್ಲಿ ಗೇರು ಬೆಳೆ ಬೆಳೆಯಲಾಗಿದೆ. ರಬ್ಬರ್, ಅಡಿಕೆ ಈ ಬೆಳೆಯಲ್ಲಿ ಆಗುತ್ತಿರುವ ನಷ್ಟವನ್ನು ರೈತ ಗೇರು ಬೆಳೆಯ ಮೂಲಕ ಒಂದಷ್ಟು ಸರಿದೂಗಿಸುವ ಲೆಕ್ಕ ಹಾಕುತ್ತಿರುವಾಗಲೇ ನಿರೀಕ್ಷಿತ ಫಲ ದೊರೆಯಲು ಅಸಾಧ್ಯ ಎಂದು ಚಿಂತೆ ಕಾಡತೊಡಗಿದೆ. ಧಾರಣೆ ಏರುಪೇರು
2018ನೇ ಸಾಲಿನಲ್ಲಿ ಗೇರು ಬೀಜ ಕೆ.ಜಿ.ಯೊಂದಕ್ಕೆ 150ರಿಂದ 160 ರೂ. ಗಡಿ ದಾಟಿತ್ತು. ಆದರೆ ಕಳೆದ ವರ್ಷ ಕೆ.ಜಿ.ಯೊಂದಕ್ಕೆ 100ರಿಂದ 120ರ ತನಕ ಧಾರಣೆ ಇತ್ತು.
Related Articles
ಗೋಡಂಬಿ ವಿದೇಶಿ ವಿನಿಮಯ ಗಳಿಸುತ್ತಿರುವ ಬೆಳೆಗಳಲ್ಲಿ ಒಂದು. ಕರ್ನಾಟಕ ಕರಾವಳಿ ಪ್ರದೇಶಗಳು ಒಳನಾಡು ಒಣ ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಸಿಹಿತಿಂಡಿಗಳು, ಖಾರ ತಿಂಡಿಗಳು, ಪಾನೀಯ ಹಾಗೂ ಮದ್ಯ ತಯಾರಿಕೆಯಲ್ಲಿ ನೀರು ಬಸಿದು ಹೋಗುವಂತಹ ಕೆಂಪು ಗೋಡು, ಜಂಬಿಟ್ಟಿಗೆ ಮತ್ತು ಮಧ್ಯಮ ಕಪ್ಪು ಮಣ್ಣು ಈ ಬೆಳೆಗೆ ಸೂಕ್ತ.
Advertisement
ಗೋಡಂಬಿ ಬೆಳೆ ವಾತಾವರಣದಲ್ಲಿ ಹೆಚ್ಚು ತೇವಾಂಶ ಮತ್ತು ಹೆಚ್ಚು ಉಷ್ಣಾಂಶ ಇರುವ ತೀರ ಪ್ರದೇಶಗಳಲ್ಲಿ ಬೆಳೆಯಬಲ್ಲದು. ಅಲ್ಲದೆ ಮಣ್ಣಿನಲ್ಲಿ ತೇವಾಂಶ ಕಡಿಮೆ ಆದಾಗಲೂ ಅಂತಹ ಪರಿಸ್ಥಿತಿಗೆ ಹೊಂದಿಕೊಂಡು ಬೆಳೆಯಬಲ್ಲದು. ಹೈಬ್ರಿಡ್ ತಳಿಗಳು ಮೂರು ವರ್ಷದಲ್ಲಿ ಫಸಲು ನೀಡುತ್ತವೆ.
ದುಷ್ಪರಿಣಾಮ ಬೀರಬಹುದುಗೇರು ಬೆಳೆಯನ್ನು ತಾತ್ಸಾರ ಮಾಡುವ ಹಾಗಿಲ್ಲ. ಉತ್ತಮ ಫಸಲಿಗೆ ಕಾಲ ಕಾಲಕ್ಕೆ ತಕ್ಕಂತೆ ಎನ್.ಪಿ.ಕೆ. ಹಾಗೂ ಇತರ ಗೊಬ್ಬರವನ್ನು ಗಿಡಗಳ ಪ್ರಾಯಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ಸೂಕ್ತ ಪ್ರಮಾಣದಲ್ಲಿ ನೀಡಬೇಕು. ಕಾಲ ಕಾಲಕ್ಕೆ ತಕ್ಕಂತೆ ನೀರುಣಿಸಬೇಕು. ಕೀಟಗಳ ಹತೋಟಿ ಮಾಡಬೇಕಾಗಿದೆ. ಈ ಬಾರಿಯ ಹವಾಮಾನ ಗೇರು ಬೆಳೆಗೆ ಸ್ವಲ್ಪ ಮಟ್ಟಿಗೆ ದುಷ್ಪರಿಣಾಮ ಬೀರಬಹುದು.
– ಅರ್ಬನ್ ಪೂಜಾರೆ , ಸಹಾಯಕ ಅಧಿಕಾರಿ, ತೋಟಗಾರಿಕಾ ಇಲಾಖೆ ಸುಳ್ಯ ಇಳುವರಿ ಭಾರಿ ಕುಸಿತ
ಗೇರು ಮರ ಹೂ ಬಿಡುವ ಕಾಲದಲ್ಲಿ ವಿಪರೀತ ಮಳೆ ಸುರಿದಿದೆ. ಹವಾಮಾನದ ಬದಲಾವಣೆಯಿಂದ ಈ ವರ್ಷ ಗೇರು ಕೃಷಿಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕಳೆದ ವರ್ಷ ಈ ಸಮಯಕ್ಕೆ ನನಗೆ 10 ಕ್ವಿಂಟಲ್ ಗೇರು ಬೀಜ ಆಗಿದೆ. ಈ ಸಲ 10 ಕೆ.ಜಿ. ಮಾತ್ರ ಬೆಳೆದಿದೆ. ಇಳುವರಿ ಭಾರೀ ಕುಸಿತವಾಗಿದೆ. ರೈತರಿಗೆ ಒಂದರ ಮೇಲೆ ಇನ್ನೊಂದು ಸಮಸ್ಯೆಯಾಗುತ್ತಿದೆ. ಸರಕಾರವು ಗೇರು ಬೆಳೆಗಾರರ ಕಡೆ ಗಮನ ಹರಿಸಬೇಕಾಗಿದೆ.
– ಸತೀಶ್ ರೈ ಕರ್ನೂರು , ಗೇರು ಕೃಷಿಕ ತೇಜೇಶ್ವರ್ ಕುಂದಲ್ಪಾಡಿ