Advertisement

ಮೋಡ- ಮಳೆ ಭೀತಿಯಲ್ಲಿ ಗೇರು ಬೆಳೆಗಾರರು

08:50 PM Jan 01, 2019 | Karthik A |

ಕುಂದಾಪುರ: ಕರಾವಳಿ ಭಾಗದ ಪ್ರಮುಖ ಬೆಳೆಗಳಲ್ಲಿ ಒಂದಾದ ಗೇರು ಕೃಷಿಗೆ ಈ ಬಾರಿ ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣ ಅಡ್ಡಿಯಾಗುವ ಆತಂಕ ಇಲ್ಲಿನ ಕೃಷಿಕರದ್ದು. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಸುಳ್ಯ, ಬೆಳ್ತಂಗಡಿ, ಉಡುಪಿ ಜಿಲ್ಲೆಯ ಕಾರ್ಕಳ ಭಾಗಗಳಲ್ಲಿ ಇತ್ತೀಚೆಗೆ ಉತ್ತಮ ಮಳೆಯಾಗಿತ್ತು. ಚಳಿಗಾಲದಲ್ಲೂ ಮೋಡ ಕವಿದ ವಾತಾವರಣ ಆವರಿಸಿರುವುದರಿಂದ ಕರಾವಳಿ ಭಾಗದ ಗೇರು ಬೀಜ ಕೃಷಿಕರು ಆತಂಕಿತರಾಗಿದ್ದಾರೆ. ಈ ರೀತಿಯ ಪ್ರತಿಕೂಲ ಹವಾಮಾನದಿಂದಾಗಿ ಗೇರು ಬೀಜದ ಹೂವು ಕರಟಿ ಹೋಗುವುದಲ್ಲದೆ, ಉದುರಿ ಹೋಗುತ್ತಿದೆ.

Advertisement

ನವೆಂಬರ್‌ – ಡಿಸೆಂಬರ್‌ ಸಮಯದಲ್ಲಿ ಗೇರು ಹೂವು ಬಿಟ್ಟು, ಹಣ್ಣಾಗುವ ಸಮಯ. ಜನವರಿ – ಫೆಬ್ರವರಿ ತಿಂಗಳಲ್ಲಿ ಗೇರು ಫಸಲು ಕೊಡುವ ಸಮಯ. ಎಪ್ರಿಲ್‌, ಕೆಲವೆಡೆ ಮೇ ವರೆಗೂ ಗೇರು ಬೀಜ ಕೊಯ್ಲು ಇರುತ್ತದೆ. ಈ ವೇಳೆ ಚಳಿ ಇದ್ದರೆ ಅನುಕೂಲ. ಆದರೆ ಈ ಬಾರಿ ಉತ್ತಮ ಹೂವು ಬಿಟ್ಟರೂ, ಪ್ರತಿಕೂಲ ಹವಾಮಾನದಿಂದಾಗಿ ಆ ಹೂವೆಲ್ಲ ಕರಟಿ ಹೋಗುತ್ತಿದೆ. ಇದರಿಂದ ಈ ಋತುವಿನಲ್ಲಿ ಗೇರು ಬೀಜದ ಇಳುವರಿ ಕಡಿಮೆಯಾಗುವ ಭೀತಿ ಗೇರು ಕೃಷಿಕರದ್ದು. 

ದರ ಕುಸಿತ
ಈಗ ಕಳೆದ ವರ್ಷದ ಅಂದರೆ ಹಳೆ ಗೇರು ಬೀಜಗಳ ಮಾರಾಟ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಕೆ.ಜಿ. ಗೆ 150 ರೂ. ಇತ್ತು. ಈಗ ದರ ಕುಸಿತಗೊಂಡಿದ್ದು, ಕೆ.ಜಿ. ಗೆ 90 ರೂ. ಅಷ್ಟೇ ಇದೆ. ಜನವರಿಯಿಂದ ಹೊಸ ಗೇರು ಬೀಜ ಮಾರಾಟಕ್ಕೆ ಸಿದ್ಧವಾಗುತ್ತದೆ.

50 ಸಾವಿರ ಹೆಕ್ಟೇರ್‌ ಪ್ರದೇಶ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 33 ಸಾವಿರ ಹೆಕ್ಟೇರ್‌ ಪ್ರದೇಶ ಹಾಗೂ ಉಡುಪಿ ಜಿಲ್ಲೆಯಲ್ಲಿ 19,541 ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಕೃಷಿ ಬೆಳೆಯಲಾಗುತ್ತದೆ. ಅಂದರೆ ಕರಾವಳಿ ಭಾಗದಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಕೃಷಿಯಿದೆ. ಆದರೆ ಈ ಬಾರಿ ಚಳಿಗಾಲವಾಗಿದ್ದರೂ, ಕಳೆದ ಕೆಲ ದಿನಗಳಿಂದ ಪ್ರತಿಕೂಲ ಹವಾಮಾನದಿಂದಾಗಿ ಗೇರು ಬೆಳೆಗೆ ಮೋಡ ಕವಿದಂತಾಗಿದೆ. 

ಮೋಡದಿಂದ ನಷ್ಟ
ಮಳೆಯಾದರೂ ಪರ್ವಾಗಿಲ್ಲ. ಆದರೆ ಮೋಡ ಬಂದಲ್ಲಿ, ಗೇರು ಸಹಿತ ಯಾವುದೇ ಹೂವು ಬಿಡುವ ಕೃಷಿಗೆ ನಷ್ಟ. ಮೋಡಕ್ಕೆ ಗೇರು ಹೂವೆಲ್ಲ ಕರಟಿ ಹೋಗುತ್ತದೆ. ಹೂವು ಬಿಡುವ ಸಮಯದಲ್ಲಿಯೇ ಹೀಗೆ ಮೋಡವಾಗಿದ್ದು, ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಗೇರು ಬೀಜವನ್ನು ನಿರೀಕ್ಷಿಸುವುದು ಕಷ್ಟ.
– ಕೃಷ್ಣ ನಾಯ್ಕ ತೆಂಕಬೆಟ್ಟು, ಬೆಳ್ವೆ

Advertisement

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next