ಬೆಂಗಳೂರು: ಸರಕಾರ ವಿಧಿಸಿರುವ ಕರ್ಫ್ಯೂ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಒಮಿಕ್ರಾನ್ ಹರಡುವ ಭಯದ ನಡುವೆ ರಾಜ್ಯದಲ್ಲಿ ಡಿಸೆಂಬರ್ 28 ರಿಂದ ಜನವರಿ 7 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದ್ದು, ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ.
ಸರಕಾರದ ಆದೇಶದಂತೆ ಬೆಂಗಳೂರಿನಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಪಬ್‌ಗಳು, ಕ್ಲಬ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಲ್ಲಿ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ರಾತ್ರಿ ಕರ್ಫ್ಯೂ ಸಮಯದಲ್ಲಿ ಪೊಲೀಸರು ಜನರನ್ನು ತಿರುಗಾಡಲು ಬಿಡುವುದಿಲ್ಲ. ಯಾರಾದರೂ ಕರ್ಫ್ಯೂ ಉಲ್ಲಂಘಿಸುವುದು ಕಂಡುಬಂದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್‌ಡಿಎಂಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.
ರಾತ್ರಿ 10 ಗಂಟೆಯ ನಂತರ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಮತ್ತು ಇಂದಿರಾನಗರದ ಲ್ಲಿ ವಾಹನಗಳು ಮತ್ತು ಜನರ ಓಡಾಟ ಇರುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಹೊಸ ವರ್ಷದ ಮುನ್ನಾ ದಿನದಂದು ಕರ್ಫ್ಯೂ ಜಾರಿಗೊಳಿಸಲು ಪೊಲೀಸರು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಿನ ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈ ಪ್ರದೇಶಗಳಲ್ಲಿವೆ ಮತ್ತು ಬೆಂಗಳೂರಿನ ಜನರು ಸಾಂಪ್ರದಾಯಿಕವಾಗಿ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷವನ್ನು ಆಚರಿಸುತ್ತಾರೆ .ಸಂಭ್ರಮಾಚರಣೆ ತಡೆಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದರು.
ಎಲ್ಲೆಂದರಲ್ಲಿ ಸಿಸಿಟಿವಿ ಅಳವಡಿಸಲಾಗುವುದು ಮತ್ತು ಯಾರಿಗೂ ಪಾಸ್ ನೀಡುವುದಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಹೊರಗೆ ಹೋಗುವವರಿಗೆ ಮಾತ್ರ ಪುರಾವೆ ತೋರಿಸಿದರೆ ಅವಕಾಶ ಎಂದು ತಿಳಿಸಿದ್ದಾರೆ.