Advertisement

ಪ್ರಕರಣ ಇಳಿಮುಖ; ಶಿಶು – ತಾಯಿ ಮರಣ ಗಣನೀಯ ಇಳಿಕೆ

05:22 PM Jul 24, 2024 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಶಿಶು ಮರಣ ಮತ್ತು ತಾಯಿ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಜಿಲ್ಲೆಯಲ್ಲಿ 2019ರಲ್ಲಿ 19 ತಾಯಿ ಮರಣ ಮತ್ತು 354 ಶಿಶು ಮರಣವಾಗಿತ್ತು.
ಆದರೆ ಈ ವರ್ಷ ಮಾರ್ಚ್‌ವರೆಗೆ ಒಂದು ವರ್ಷದಲ್ಲಿ 10 ತಾಯಿ ಮರಣ ಮತ್ತು 300 ಶಿಶು ಮರಣ ಆಗಿದೆ. ಆದರೂ ಕೆಲವೊಂದು
ಸಂದರ್ಭಗಳಲ್ಲಿ ತಾಯಿ-ಮಗುವಿನ ಸಾವು ಆಗುತ್ತಿದ್ದು, ಇದನ್ನು ನಿಯಂತ್ರಣ ಮಾಡಲು ಆರೋಗ್ಯ ಇಲಾಖೆಯಿಂದ ಇನ್ನಷ್ಟು ನಿಗಾ ವಹಿಸಬೇಕಿದೆ.

Advertisement

ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ ಈವರೆಗೆ ಜಿಲ್ಲೆಯಲ್ಲಿ ಅಪೌಷ್ಟಿಕತೆ, ಎನಿಮಿಯ ಕಾರಣದಿಂದಾಗಿ ಯಾವುದೇ ಮರಣ ಸಂಭವಿಸಿಲ್ಲ. ಬದಲಾಗಿ ಗರ್ಭಿಣಿಗೆ ತೀವ್ರ ರಕ್ತಸ್ರಾವ, ಗರ್ಭಕೋಶ ಸಮಸ್ಯೆ, ಅವಧಿಗೂ ಮುನ್ನ ಹುಟ್ಟುವ ಮಗು ಸಹಿತ ಅನಿರೀಕ್ಷಿತ ಕಾರಣದಿಂದಾಗಿ ಮರಣ ಆಗುತ್ತಿದೆ.

ಗರ್ಭಿಣಿಯಾದ ಮೊದಲು ಮೂರು ತಿಂಗಳೊಳಗೆ ಆರೋಗ್ಯ ಇಲಾಖೆಯಿಂದ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಹುಟ್ಟುವ ಮಗುವಿಗೆ ಮೆದುಳು ಸಂಬಂಧಿ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶಕ್ಕೆ ಮೂರು ತಿಂಗಳ ಕಾಲ ತಾಯಿಗೆ ಫೋಲಿಕ್‌
ಆ್ಯಸಿಡ್‌ ಮಾತ್ರೆಯನ್ನು ನೀಡಲಾಗುತ್ತದೆ. ಬಳಿಕ ಮೂರು ತಿಂಗಳವರೆಗೆ ಅನಿಮಿಯಾ ನಿಯಂತ್ರಣಕ್ಕೆಂದು ಕಬ್ಬಿಣಾಂಶದ ಮಾತ್ರೆ
ಕೊಡಲಾಗುತ್ತದೆ. ಕ್ಯಾಲ್ಸಿಯಂ ಟ್ಯಾಬ್ಲೆಟ್‌ ಕೂಡ ನೀಡಿ, ಆರೋಗ್ಯ ಕಾಪಾಡಿಕೊಳ್ಳಲಾಗುತ್ತದೆ. ಇದರ ಜತೆ ನಿಯಮಿತವಾಗಿ
ವೈದ್ಯಕೀಯ ಪರೀಕ್ಷೆ, ಸ್ಕ್ಯಾನಿಂಗ್‌ ಮಾಡಲಾಗುತ್ತದೆ.

ಅಪೌಷ್ಟಿಕತೆ ಉಂಟಾಗಬಾರದು ಮತ್ತು ತಾಯಿ, ಮಗುವಿನ ಆರೋಗ್ಯದ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಗಳ ಮುಖಾಂತರ ವಿಟಮಿನ್‌ಯುಕ್ತ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ. ಸೊಪ್ಪು ತರಕಾರಿ, ಹಣ್ಣು, ಒಣ ಹಣ್ಣು, ಮೊಟ್ಟೆ, ಮೀನು, ಹಾಲು, ಮೊಸರು ಮುಂತಾದವುಗಳ ಸೇವನೆಯಿಂದ ತಾಯಿ ಮತ್ತು ಮಗುವಿನ ದೇಹಕ್ಕೆ ವಿಟಮಿನ್‌ ದೊರೆಯುತ್ತದೆ.

ಗರ್ಭಿಣಿಯರ ನೋಂದಣಿಯಾದ ಕೂಡಲೇ ಅವರ ಆರೋಗ್ಯದ ಬಗ್ಗೆ ನಿಗಾ ಇಡುವ ಕೆಲಸ ಈಗಾಗಲೇ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ನಡೆಯುತ್ತಿದೆ. ರಕ್ತದೊತ್ತಡ, ರಕ್ತಹೀನತೆ ಪರೀಕ್ಷೆ ಮುಂತಾದ ಅಗತ್ಯ ತಪಾಸಣೆಗಳನ್ನು ಆರೋಗ್ಯ ಇಲಾಖೆ ಮೂಲಕ ನಡೆಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರ ಮುಖಾಂತರ ಆಗಾಗ ಮನೆ-ಮನೆ ಭೇಟಿ ನಡೆಸಲಾಗುತ್ತಿದೆ. ಹೈರಿಸ್ಕ್ ಪ್ರಕರಣಗಳಿದ್ದಲ್ಲಿ, ಹಿಂದೆ ಗರ್ಭಪಾತ, ಸಿಝೇರಿಯನ್‌ ಆಗಿದ್ದರೆ ಅಥವಾ ಈ ಮೊದಲು ನಿರ್ಜೀವ ಶಿಶು ಜನನವಾಗಿದ್ದಲ್ಲಿ ಅಂತಹವರ ಬಗ್ಗೆ ವಿಶೇಷವಾಗಿ ನಿಗಾ ವಹಿಸುವ ಕೆಲಸವೂ ಇಲಾಖೆಯಿಂದ ನಡೆಯುತ್ತಿದೆ.

Advertisement

ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗೃತಿ
ತಾಯಿ ಮತ್ತು ಶಿಶುವಿನ ಆರೋಗ್ಯದ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಪೋಷಣೆ ಅಭಿಯಾನ ಕಾರ್ಯಕ್ರಮದ ಮೂಲಕ ಪೌಷ್ಟಿಕ ಆಹಾರ, ಮನೆ ಭೇಟಿ, ಮಾತೃಪೂರ್ಣ ಯೋಜನೆಯ ಮೂಲಕ ಕೌನ್ಸಿಲಿಂಗ್‌ ಕೆಲಸ ನಿರಂತರವಾಗಿ ನಡೆಯುತ್ತಿದೆ. ಗರ್ಭಾವಸ್ಥೆಯಲ್ಲಿ ಮತ್ತು ಶಿಶು ಜನನದ ನಂತರವೂ ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ನೀಡಲಾಗುತ್ತಿದೆ.
*ಉಸ್ಮಾನ್‌,ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ

ಅರಿವು ಮೂಡಿಸಲು ಕ್ರಮ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ವರ್ಷಕ್ಕೆ ಹೋಲಿಕೆ ಮಾಡಿದರೆ ತಾಯಿ ಮರಣ ಮತ್ತು ಶಿಶು ಮರಣ ಸಂಖ್ಯೆ ಇಳಿಕೆಯಾಗುತ್ತಿದೆ. ಸದ್ಯದ ಹೆಚ್ಚಿನ ಮರಣಗಳು ಅನಿರೀಕ್ಷಿತವಾಗಿಯೇ ಆಗಿದೆ. ಆದರೂ ಮರಣ ನಿಯಂತ್ರಿಸುವ
ಉದ್ದೇಶಕ್ಕೆ ಆರೋಗ್ಯ ಇಲಾಖೆಯಿಂದ ವಿಶೇಷ ಕ್ರಮ ವಹಿಸಲಾಗುತ್ತಿದೆ. ನಿಯಮಿತ ಆರೋಗ್ಯ ತಪಾಸಣೆ ಸಹಿತ ಗರ್ಭಿಣಿಯರಿಗೆ ಅರಿವು ಮೂಡಿಸುವ ಕೆಲಸವೂ ನಡೆಯುತ್ತಿದೆ.
ಡಾ| ತಿಮ್ಮಯ್ಯ,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next