ಹುಮನಾಬಾದ್: ಜೆಜೆಎಮ್ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಸಿದ್ದು ಪಾಟೀಲರ ಇಬ್ಬರು ಸಹೋದರರು ಸೇರಿದಂತೆ ಇತರೆ ವ್ಯಕ್ತಿಗಳು ಸೇರಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ತಡರಾತ್ರಿ ಪ್ರಕರಣ ದಾಖಲಾಗಿದೆ.
ಕಠಳ್ಳಿ ಗ್ರಾಮದ ಬಸವರಾಜ ಹಲ್ಲೆಗೆ ಒಳಗಾಗಿ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ. ಶಾಸಕ ಪಾಟೀಲ ಸಹೋದರರಾದ ಸಂತೋಷ ಪಾಟೀಲ, ಸುನೀಲ್ ಪಾಟೀಲ ಹಾಗೂ ಸಂದೀಪ, ಪಾನಿ, ರಾಜ ರೆಡ್ಡಿ ಸೇರಿದಂತೆ ಇತರೆ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದ್ದು, ಕೆಲ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಘಟನೆಯ ಮಾಹಿತಿ ಗೊತ್ತಾಗುತ್ತಿದ್ದಂತೆ ಮಾಜಿ ಸಚಿವ ರಾಜಶೇಖರ ಪಾಟೀಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ವ್ಯಕ್ತಿಯ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಬೀದರ್ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರೆ ಮಾಡಿ ಘಟನೆಯಲ್ಲಿ ಭಾಗವಹಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಆವರಣದಲ್ಲಿ ನೂರಾರು ಜನರು ಸೇರಿದರು. ಕಾನೂನು ಸುವ್ಯವಸ್ಥೆ ಹಾಳಾಗದಂತೆ ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಬಿಗಿ ಬಂದೋಬಸ್ ಏರ್ಪಾಡು ಮಾಡಿದರು.
ಘಟನೆಯ ವಿವರ: ತಾಲೂಕಿನ ಕಠಳ್ಳಿ ಗ್ರಾಮದಲ್ಲಿ ಜೆಜೆಎಮ್ ಕಾಮಗಾರಿ ನಡೆದಿದ್ದು, ಗ್ರಾಮದಲ್ಲಿನ ಹಳೆ ನೀರಿನ ಟ್ಯಾಂಕಿನ ಮೇಲೆ ಬಣ್ಣ ಬಳೆದು ಹೊಸ ನಿರ್ಮಾಣ ಎಂದು ಬರಿಸುತ್ತಿರುವುದನ್ನು ವಿರೋಧಿಸಿ ಕಾಮಗಾರಿ ನಿಲ್ಲಿಸಿದ ಕಾರಣಕ್ಕೆ ಹಲ್ಲೆಮಾಡಿದ್ದಾರೆ ಎಂದು ಗಾಯಗೊಂಡ ವ್ಯಕ್ತಿ ಬಸವರಾಜ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ ದೂರಿದ್ದಾರೆ. ಗುರುವಾರ ರಾತ್ರಿ ಗ್ರಾಮಕ್ಕೆ ಬಂದ ಇಬ್ಬರು ಗೌಡರು ಮಾತ್ತಾಡಲು ಬರುವಂತೆ ತಿಳಿಸಿದ್ದಾರೆ ಎಂದು ಹೇಳಿದ್ದು, ಬೆಳಿಗ್ಗೆ ಬರುತ್ತಾನೆ ಎಂದರು ಕೂಡ ದ್ವಿಚಕ್ರ ವಾಹನದ ಮೇಲೆ ಒತ್ತಾಯ ಪೂರ್ವಕ ಕರೆದುಕೊಂಡು ಹಣಕುಣಿ ರಸ್ತೆಯ ಬಯಲು ಪ್ರದೇಶದಲ್ಲಿ ಕರೆತಂದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಮುಂದೇ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಕಾದುನೋಡಬೇಕಾಗಿದೆ.
ಇದನ್ನೂ ಓದಿ: Bantwala: ಹೆದ್ದಾರಿಯಲ್ಲೇ ಪಲ್ಟಿಯಾದ ಗ್ಯಾಸ್ ಟ್ಯಾಂಕರ್; ತಪ್ಪಿದ ಭಾರೀ ಅನಾಹುತ