Advertisement

ಪ್ರತಾಪ್‌ ಸಿಂಹ ವಿರುದ್ಧದ ಕೇಸ್‌: ಕೋರ್ಟ್‌ ಗರಂ

11:32 AM Dec 16, 2017 | |

ಮೈಸೂರು: ಹುಣಸೂರಿನಲ್ಲಿ ಡಿ.3ರಂದು ಆಯೋಜಿಸಿದ್ದ ಹನುಮ ಜಯಂತಿ ಮೆರವಣಿಗೆಗೆ ತೆರಳುತ್ತಿದ್ದ ಸಂಸದ ಪ್ರತಾಪ ಸಿಂಹ ಅವರನ್ನು ಬಂಧಿಸಿ, ಅನಗತ್ಯ ಸೆಕ್ಷನ್‌ಗಳನ್ನು ಹಾಕಿರುವ ಪೊಲೀಸರು ಇದೀಗ ಪೇಚಿಗೆ ಸಿಲುಕಿದ್ದಾರೆ.

Advertisement

ಕಾನೂನು-ಸುವ್ಯವಸ್ಥೆಗೆ ಭಂಗವಾಗಬಹುದು ಎಂಬ ಮುನ್ನೆಚ್ಚರಿಕೆ ಕಾರಣದಿಂದ ಜಿಲ್ಲಾಧಿಕಾರಿಯವರು ಅಂದು ಹುಣಸೂರು ಪಟ್ಟಣದಲ್ಲಿ 144ನೇ ಸೆಕ್ಷನ್‌ ಪ್ರಕಾರ ನಿಷೇಧಾಜ್ಞೆ ವಿಧಿಸಿದ್ದರು. ಆದರೆ, ಹುಣಸೂರು ನಗರದಿಂದ 25 ಕಿ.ಮೀ ದೂರದಲ್ಲೇ ರಾಷ್ಟ್ರೀಯ ಹೆದ್ದಾರಿ 275ರ ಕೆ. ಆರ್‌.ನಗರ ಜಂಕ್ಷನ್‌ನಲ್ಲಿ ಸಂಸದ ಪ್ರತಾಪ್‌ ಸಿಂಹ ಅವರನ್ನು ಬಂಧಿಸಿದ ಪೊಲೀಸರು, ನಿಷೇಧಾಜ್ಞೆ ಉಲ್ಲಂಸಿದ್ದಾರೆಂಬ ಕಾರಣ ನೀಡಿ ಐಪಿಸಿ ಸೆಕ್ಷನ್‌ 188ರಡಿ ಪ್ರಕರಣ ದಾಖಲಿಸಿದ್ದರು. ಬಳಿಕ ಅದೇ ದಿನ ತಡರಾತ್ರಿ ತಿ.ನರಸೀಪುರ ಠಾಣೆಯಲ್ಲಿ ಸ್ಟೇಷನ್‌ ಬೇಲ್‌ ಮೇಲೆ ಪ್ರತಾಪ್‌ ಸಿಂಹ ಅವರನ್ನು ಬಿಡುಗಡೆ ಮಾಡಿದ್ದರು.

ಬಳಿಕ ಹುಣಸೂರು ಜೆಎಂಎಫ್ಸಿ ನ್ಯಾಯಾಲಯಕ್ಕೆ ಪ್ರತಾಪ್‌ ಸಿಂಹ ವಿರುದ್ಧ ತಪ್ಪಾಗಿ ಸೆಕ್ಷನ್‌ 188 ನಮೂದಿಸಿದ್ದು, ಈ ಸೆಕ್ಷನ್‌ ಕೈ ಬಿಡುತ್ತೇವೆ ಎಂದು ತನಿಖಾಧಿಕಾರಿ, ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸ್ಪಷ್ಟ ಕಾರಣ ತಿಳಿಸುವಂತೆ ನ್ಯಾಯಾಧೀಶರು
ಆದೇಶಿಸಿದ್ದರು. ಆದರೆ, ಡಿ.8ರಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ಹಾಜರಾಗದಿರುವುದರಿಂದ ಸೆಕ್ಷನ್‌ 188ರಡಿ ದಾಖಲಿಸಿರುವ ಪ್ರಕರಣ ಕೈಬಿಡುವ ಪೊಲೀಸರ ಕೋರಿಕೆಯನ್ನು ನ್ಯಾಯಾಲಯ ರದ್ದು ಮಾಡಿದೆ.

ಸಂಸದ ಪ್ರತಾಪ್‌ವಿರುದ್ಧ ಎಫ್ಐಆರ್‌
ಬೆಂಗಳೂರು:
ಸಾಮಾಜಿಕ ಜಾಲತಾಣ ಹಾಗೂ ಕೆಲ ದೃಶ್ಯ ಮಾಧ್ಯಮಗಳ ಮೂಲಕ ಸಂಸದ ಪ್ರತಾಪ್‌ ಸಿಂಹ ಪ್ರಚೋದನಕಾರಿ ಹೇಳಿಕೆ ನೀಡಿರುವ ಕುರಿತು ಅಂತರ್ಜಾಲ ಸಂರಕ್ಷಣಾ ಪ್ರಾಧಿಕಾರ ಸದಸ್ಯ ಎ.ಆನಂದ್‌ ದೂರು ನೀಡಿದ್ದು, ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ. ಕೆಲ ತಿಂಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ,
ರಾಜ್ಯ ಬಿಜೆಪಿ ಯುವ ಮೋರ್ಚಾ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ನಡೆಸುತ್ತಿದೆ ಎಂದು ಪ್ರಶ್ನಿಸಿದ್ದರು. 

ಯುವ ಮೋರ್ಚಾ ಪ್ರತಿಭಟನೆ ವೇಳೆ ಯಾವುದಾದರೂ ಲಾಠಿ ಪ್ರಹಾರ ಆಗಿದೆಯೇ? ಪೊಲೀಸರು ಟಿಯರ್‌ ಗ್ಯಾಸ್‌ ಸಿಡಿಸಿದ್ದರಾ? ಆ ಮಟ್ಟಕ್ಕೆ ಪ್ರತಿಭಟನೆ ನಡೆಸಬೇಕು ಎಂದಿದ್ದರು ಎಂದು ಪ್ರತಾಪ್‌ ಸಿಂಹ ಸೆಲ್ಫಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದರು. ಈ ವಿಡಿಯೋ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾದ ಬಳಿಕ ಪ್ರತಾಪ್‌ ಸಿಂಹ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅದೇ
ರೀತಿ ಪ್ರತಾಪ್‌ ಸಿಂಹ ಪ್ರತಿಭಟನೆ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದರು. ತಮ್ಮ ಹೆಸರಿನ ಫೇಸ್‌ ಬುಕ್‌ನಲ್ಲಿ ಅನಗತ್ಯ ಪೋಸ್ಟ್‌ಗಳನ್ನು ಪ್ರಕಟಿಸುವ ಮೂಲಕ ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆನಂದ್‌ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next