Advertisement

ಸಾರ್ವಜನಿಕರ ಆಸ್ತಿ ಕಬಳಿಸುತ್ತಿದ್ದ ಮೋಸಸ್‌ ಗ್ಯಾಂಗ್‌ ವಿರುದ್ಧ ಕೋಕಾಸ್ತ್ರ

11:07 AM Jul 23, 2024 | Team Udayavani |

ಬೆಂಗಳೂರು: ನಗರ ಹಾಗೂ ಹೊರವಲಯದ ಪ್ರದೇಶ ಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರ ಆಸ್ತಿ ಕಬಳಿಸುತ್ತಿದ್ದ ಕುಖ್ಯಾತ ವಂಚಕ ಜಾನ್‌ ಮೋಸಸ್‌ ಹಾಗೂ ಆತನ ಸಹಚರರ ವಿರುದ್ಧ ಸಿಐಡಿ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಪ್ರಯೋಗಿಸಿದ್ದಾರೆ.

Advertisement

ನಿವೇಶನವೊಂದರ ಸಂಬಂಧ ನಕಲಿ ದಾಖಲೆ ಸೃಷ್ಟಿಸಿ, ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಡಿಕ್ರಿ ಪಡೆದುಕೊಂಡಿದ್ದ ಆರೋಪದ ಮೇರೆಗೆ ಲಘುವ್ಯವಹಾರಗಳ ನ್ಯಾಯಾಲಯದ ರಿಜಿಸ್ಟ್ರಾರ್‌ 2020ರಲ್ಲಿ ಈ ಜಾನ್‌ ಮೋಸಸ್‌ ಹಾಗೂ ಸಹಚರರ ವಿರುದ್ಧ ಹಲಸೂರುಗೇಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣವನ್ನು ಸಿಐಡಿ ವರ್ಗಾವಣೆ ಮಾಡಲಾಗಿತ್ತು. ತನಿಖೆ ವೇಳೆ ಈ ಗ್ಯಾಂಗ್‌ 100ಕ್ಕೂ ಅಧಿಕ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂಬುದು ಪತ್ತೆಯಾಗಿತ್ತು. ಈ ಪ್ರಕರಣಗಳು ಸಿಐಡಿಗೆ ವರ್ಗಾವಣೆಯಾಗಿದ್ದವು. ಈ ಪೈಕಿ 51 ಪ್ರಕರಣಗಳ ತನಿಖೆ ಪೂರ್ಣಗೊಳಿಸಿದ್ದ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಉಳಿದ ಪ್ರಕರಣಗಳು ತನಿಖೆ ಹಂತದಲ್ಲಿವೆ.

ಈ ವಂಚಕರ ಗ್ಯಾಂಗ್‌ ಸಂಘಟಿತ ತಂಡ ಕಟ್ಟಿಕೊಂಡು ಬಡಜನರ ನಿವೇಶನ ಹಾಗೂ ಮನೆಗಳನ್ನು ಕಬಳಿಸಿರುವುದು ಮತ್ತು ಸ್ವತ್ತಿನ ಮೂಲ ಮಾಲೀಕರನ್ನು ಬೆದರಿಸಿ ಕೋಟ್ಯಂತರ ರೂ. ಸುಲಿಗೆ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಹೀಗಾಗಿ ಈ ಗ್ಯಾಂಗ್‌ ವಿರುದ್ಧ ಸಿಐಡಿ ಅಧಿಕಾರಿಗಳು ಕೋಕಾ ಕಾಯ್ದೆ ಅಡಿ ಹೆಚ್ಚುವರಿ ಪ್ರಕರಣ ದಾಖಲಿಸಿದ್ದಾರೆ. ಗ್ಯಾಂಗ್‌ನ ಮುಖ್ಯಸ್ಥ ಜಾನ್‌ ಮೋಸಸ್‌ ಸಿಐಡಿ ವಶದಲ್ಲಿದ್ದು, ತನಿಖೆ ಮುಂದುವರಿದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next