ದೇವನಹಳ್ಳಿ: ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರದ ಆಸ್ತಿಯನ್ನು ಉಳಿಸಿ, ಸರ್ಕಾರದ ವಶಕ್ಕೆಪಡೆದುಕೊಳ್ಳುವಂತೆ ಒತ್ತಾಯಿಸಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಡೀಸಿ, ಜಿಪಂ ಇಒಗೆ ಮನವಿ ಕೊಟ್ಟವರ ಮೇಲೆಯೇ ಕೇಸು ದಾಖಲು ಮಾಡಿದ್ದು, ಕೂಡಲೇ ಕೇಸು ವಜಾಗೊಳಿಸಬೇಕೆಂದು ಚಿಕ್ಕೋಬದೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸರ್ಕಾರಕ್ಕೆ ನಷ್ಟ ಮಾಡಿರುವ 15 ಕೋಟಿ ರೂ. ಬೆಳೆಬಾಳುವ ಸರಕಾರಿ ಆಸ್ತಿ ಸರ್ಕಾರಕ್ಕೆ ತೆಗೆದುಕೊಳ್ಳುವಂತೆ ಈ ಹಿಂದೆ ಮಾರ್ಚ್ ತಿಂಗಳಲ್ಲಿ ಪ್ರತಿ ಭಟಿಸಿ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿ ಸರಕಾರದ ಹಂತದಲ್ಲಿ ನಕಲಿ ದಾಖಲೆಗಳ ಸೃಷ್ಟಿಸಿರುವ ದಾಖಲೆಗಳನ್ನು ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ:- ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕ ಕುಸಿತ
ಇದರ ವಿರುದ್ಧ ಅಧಿಕಾರಿಗಳು ಮೂಲ ನಿವಾಸಿಗಳಾದ ಸುಮಾರು 7-8 ಜನರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು, ಕೂಡಲೇ ಡೀಸಿ ಮತ್ತು ಜಿಪಂ ಇಒ ಗಮನಕ್ಕೆ ತಂದು ಹೋರಾಟ ಮಾಡಲಾಗುತ್ತಿದೆ. ಎಂಎಲ್‌ಸಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಘೋಷಿಸಿರುವ ನೀತಿಸಂಹಿತೆಯಿಂದಾಗಿ ಮೂರ್‍ನಾಲ್ಕು ಜನರು ಮಾತ್ರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಡಿಸೆಂಬರ್ 10ರ ನಂತರ ಮತ್ತೆ ಹೋರಾಟ ಪ್ರಾರಂಭಿಸಲಾಗುವುದು. ಈ ಬಗ್ಗೆ ಗ್ರಾಮಸ್ಥರು ಎಚ್ಚೆತ್ತುಕೊಂಡು,
ಜಿಪಂ ಇಒಗೆ ಮನವಿ ಪತ್ರವನ್ನು ಸಲ್ಲಿಸಿದ್ದೆವು. ಜಿಪಂ, ತಾಪ. ಗ್ರಾಪಂ ಅಧಿಕಾರಿಗಳು ದಾಖಲೆ ಪರಿಶೀಲಿಸಿ ಅಕ್ರಮವಾಗಿ ಖಾತೆಗಳು ಮಾಡಿರುವುದು ಸಾಬೀತಾದ ನಂತರ, ಅಕ್ರಮ ಖಾತೆಗಳನ್ನು ವಜಾಗೊಳಿಸಿ. ಭೂಮಿ ಯನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಗ್ರಾಮಸ್ಥರು ಸರ್ಕಾರಿ ಭೂಮಿಯನ್ನು ಉಳಿಸಬೇಕು ಎಂದು ಹೋರಾಟ ಮಾಡಿದ ತಪ್ಪಿ ಗಾಗಿ ಗ್ರಾಮಸ್ಥರ ಮೇಲೆ ತಾಪಂ ಇಒ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ನೊಟೀಸ್ ಜಾರಿ ಮಾಡಿದ್ದಾರೆ.
ನಾವು ಅನೇಕ ವರ್ಷಗಳಿಂದ ವಾಸವಾಗಿರುವ ಭೂಮಿಯಿಂದ ನಮ್ಮನ್ನು ತೆರವುಗೊಳಿಸಲಿಕ್ಕಾಗಿ, ನಮ್ಮ ವಿರುದ್ಧವಾಗಿ ಕೇಸು ದಾಖಲಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ವಿಶ್ವನಾಥಪುರ ಗ್ರಾಪಂನಲ್ಲಿ ಈ ಹಿಂದೆ ಅಧಿ ಕಾರಿಗಳಾಗಿ ಕೆಲಸ ಮಾಡುತ್ತಿದ್ದ ಜಯರಾಮೇಗೌಡ ಹಾಗೂ ಜಮುನ ಅವರೂ ತಮ್ಮ ಕುಟುಂಬಸ್ಥರ ಹೆಸರುಗಳಲ್ಲಿ ಅಕ್ರಮವಾಗಿ ಖಾತೆಗಳನ್ನು ಮಾಡಿಸಿಕೊಂಡಿದ್ದರು.
ಅಕ್ರಮವಾಗಿ ಖಾತೆಗಳು ಮಾಡಲಿಕ್ಕೆ ಸಹಕಾರ ನೀಡಿರುವ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ನಮ್ಮ ವಿರುದ್ಧವಾಗಿ ದಾಖಲಿಸಿರುವ ಕೇಸುಗಳು ವಜಾಗೊಳಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಪ್ರಜಾ ವಿಮೋಚನಾ ಬಹುಜನ ಸಮಿತಿ ಸ್ವಾಭಿಮಾನ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ, ರೈತ ಮುಖಂಡ ಚಿಕ್ಕೋಬದೇನಹಳ್ಳಿ ರಾಮಾಂಜಿನಪ್ಪ, ಸಂಘಟನೆಯ ಜಿಲ್ಲಾ ಅಧ್ಯಕ್ಷ ಹನುಮಣ್ಣಗೂಳ್ಯ, ತಾಲೂಕು ಅಧ್ಯಕ್ಷ ಪುನೀತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಮರಿಯಪ್ಪ, ಗ್ರಾಮಸ್ಥರಿದ್ದರು.