ಬೆಂಗಳೂರು: ಪತ್ನಿ ಮೇಲಿನ ದ್ವೇಷಕ್ಕೆ ಆಕೆಯ ಹೆಸರಿ ನಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ನಕಲಿ ಖಾತೆ ತೆರೆದು ಕಾಲ್‌ಗರ್ಲ್ಸ್ ಬೇಕಾದರೆ ಕರೆ ಮಾಡಿ ಎಂದು ಪೋಸ್ಟ್ ಮಾಡಿದ ಪತಿ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೆ, ಸಂತ್ರಸ್ತ ಮಹಿಳೆ, ರಾಜ್ಯ ಮಹಿಳಾ ಆಯೋಗಕ್ಕೂ ಪತಿ ವಿರುದ್ಧ ದೂರು ನೀಡಿದ್ದಾರೆ. ಲಗ್ಗೆರೆಯ 37 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಕರಿ ಸತ್ಯನಾರಾಯಣರೆಡ್ಡಿ(40) ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆರೋಪಿ ಪತಿ ಆಸ್ಟ್ರೇಲಿಯಾದಲ್ಲಿದ್ದಾನೆ. ಆತನನ್ನು ಸಂಪರ್ಕಿಸುವ ಕಾರ್ಯ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ದೂರುದಾರ ಮಹಿಳೆ ಹಾಗೂ ಆರೋಪಿ ಸತ್ಯನಾರಾಯಣ ರೆಡ್ಡಿ 2019ರಲ್ಲಿ ಮದುವೆಯಾಗಿದ್ದು, ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು. ಆ ನಂತರ ಕೌಟುಂಬಿಕ ವಿಚಾರಕ್ಕೆ ಇಬ್ಬರ ನಡುವೆ ವೈಷ್ಯಮ್ಯ ಮೂಡಿತ್ತು. ಈ ಮಧ್ಯೆ ಪತಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಲು ಆರಂಭಿಸಿದರು.
ಹೀಗಾಗಿ, ಕಳೆದ ಒಂದು ವರ್ಷದಿಂದ ಪತಿಯಿಂದ ದೂರವಾಗಿದ್ದೇನೆ. ಬಳಿಕ ಸತ್ಯನಾರಾಯಣ ರೆಡ್ಡಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ. ತನ್ನ ಮೇಲಿನ ಹಗೆತನ ಮುಂದುವರೆಸಿದ್ದ ಪತಿ ಸತ್ಯನಾರಾಯಣ ವಿದೇಶದಲ್ಲಿ ಕುಳಿತುಕೊಂಡೆ, ಫೇಸ್‌ಬುಕ್‌ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕಾಲ್‌ಗರ್ಲ್ ಬೇಕಾಗಿದ್ದಲ್ಲಿ ಸಂಪರ್ಕಿಸಿ ಎಂದು ನನ್ನ ಫೋಟೋ ಹಾಗೂ ಮೊಬೈಲ್ ನಂಬರ್ ಸಮೇತ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಕೆಲ ಫೋರ್ನ್ ವೆಬ್‌ಸೈಟ್‌ಗಳಲ್ಲೂ ತನ್ನ ನಂಬರ್ ನೀಡಿದ್ದು, ಅದರ ಪರಿಣಾಮ ಪ್ರತಿ ದಿನ ಕರೆಗಳು ಹಾಗೂ ವಾಟ್ಸ್‌ಆ್ಯಪ್ ಸಂದೇಶಗಳು ಬರುತ್ತಿವೆ. ಅದರಿಂದ ಸಾಕಷ್ಟು ಮಾನಸಿಕ ಕಿರುಕುಳ ಅನುಭವಿಸಿದ್ದೇನೆ. ಹೀಗಾಗಿ ಪತಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮಹಿಳೆ ದೂರಿನಲ್ಲಿ ಮಹಿಳೆ ಉಲ್ಲೇಖೀಸಿದ್ದಾರೆ.