Advertisement

ತಳ್ಳುಗಾಡಿಯಲ್ಲಿ ವೃದ್ದ ಆಸ್ಪತ್ರೆಗೆ ಸುದ್ದಿ ಪ್ರಕಟ: ಮೂವರು ಪತ್ರಕರ್ತರ ವಿರುದ್ಧ ಕೇಸ್

02:22 PM Aug 22, 2022 | Team Udayavani |

ಭಿಂದ್: ಆಂಬ್ಯುಲೆನ್ಸ್ ಇಲ್ಲದ ಸಂದರ್ಭದಲ್ಲಿ ಕುಟುಂಬವೊಂದು ವೃದ್ದನನ್ನು ಕೈಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಕಳಪೆ ಆರೋಗ್ಯ ಸೌಲಭ್ಯಗಳನ್ನು ಎತ್ತಿ ತೋರಿಸುವ ರೀತಿಯಲ್ಲಿ ತಪ್ಪು ಮಾಹಿತಿಯುಳ್ಳ ಸುದ್ದಿ ವರದಿ ಮಾಡಿದ ಮೂವರು ಪತ್ರಕರ್ತರ ವಿರುದ್ಧ ಮಧ್ಯಪ್ರದೇಶದ ಭಿಂದ್ ಪೊಲೀಸರು ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆ.

Advertisement

ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ರಾಜೀವ್ ಕೌರವ್ ಅವರು ನೀಡಿದ ದೂರಿನ ಮೇರೆಗೆ ಆಗಸ್ಟ್ 18 ರಂದು ಪತ್ರಕರ್ತರಾದ ಕುಂಜಬಿಹಾರಿ ಕೌರವ್, ಅನಿಲ್ ಶರ್ಮಾ ಮತ್ತು ಎನ್‌ಕೆ ಭಟೆಲೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದಾಬೋ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಕಮಲೇಶ್ ಕುಮಾರ್ ಸೋಮವಾರ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 420 (ನಕಲಿ) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಫ್‌ಐಆರ್‌ನ ಪ್ರಕಾರ, 76 ವರ್ಷದ ಗಯಾ ಪ್ರಸಾದ್ ಅವರ ಕುಟುಂಬಕ್ಕೆ ಆಂಬ್ಯುಲೆನ್ಸ್ ಲಭ್ಯವಾಗದ ಕಾರಣ, ಸರ್ಕಾರದ ಯೋಜನೆಗಲು ಲಭ್ಯವಾಗದ ಕಾರಣ ಅವರನ್ನು ಕೈಗಾಡಿಯಲ್ಲಿ ಕರೆದೊಯ್ಯಬೇಕಾಯಿತು ಎಂದು ಮೂವರು ಪತ್ರಕರ್ತರು ಆಗಸ್ಟ್ 15 ರಂದು ಸುದ್ದಿ ಪ್ರಕಟಿಸಿದ್ದರು ಎಂದು ದೂರುದಾರರು ಹೇಳಿದರು.

ಸುದ್ದಿ ಪ್ರಕಟವಾದ ನಂತರ, ಜಿಲ್ಲಾಡಳಿತವು ಸುದ್ದಿ ವರದಿಯ ತನಿಖೆಗಾಗಿ ಕಂದಾಯ ಮತ್ತು ಆರೋಗ್ಯ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ ಎಂದು ಎಫ್‌ಐಆರ್ ತಿಳಿಸಿದೆ.

Advertisement

ಗಯಾ ಪ್ರಸಾದ್ ಅವರ ಮಗ ಪುರಾನ್ ಸಿಂಗ್ ಅವರು ನಾವು ಆಂಬ್ಯುಲೆನ್ಸ್‌ಗೆ ಕರೆ ಮಾಡಿರಲಿಲ್ಲ ಮತ್ತು ತಂದೆ ಮತ್ತು ಕುಟುಂಬ ವೃದ್ಧಾಪ್ಯ ವೇತನದಂತಹ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದೆ ಎಂದು ಹೇಳಿದ್ದರಿಂದ ಸಮಿತಿಯು ಸುದ್ದಿ ವರದಿಯನ್ನು ಸುಳ್ಳು ಎಂದು ಕಂಡುಹಿಡಿದಿದೆ. ಅಲ್ಲದೆ, ಗಯಾ ಪ್ರಸಾದ್ ಅವರನ್ನು ಕುಟುಂಬದವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು ಮತ್ತು ಸರ್ಕಾರಿ ಆಸ್ಪತ್ರೆಗೆ ಅಲ್ಲ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅನಿಲ್ ಶರ್ಮಾ ಅವರು ಗಯಾ ಪ್ರಸಾದ್ ಅವರ ಕುಟುಂಬ ಸದಸ್ಯರಿಗೆ ನೀಡುತ್ತಿರುವ ಸರ್ಕಾರಿ ಯೋಜನೆ ಪ್ರಯೋಜನಗಳನ್ನು ನಿಲ್ಲಿಸುವಂತೆ ಬೆದರಿಕೆ ಹಾಕುವ ಮೂಲಕ ಜಿಲ್ಲಾಡಳಿತವು ಒತ್ತಡ ಹೇರಿದೆ ಎಂದು ಆರೋಪಿಸಿದ್ದಾರೆ. ಸುಳ್ಳು ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next