Advertisement

ಪಾಂಡು ಪಂಚ್‌

04:33 PM Jul 14, 2018 | |

ನಿವೃತ್ತಿಗೆ ಎರಡು ವರ್ಷ ಇರುವಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡ ಪಾಂಡುರಂಗ ರಾವ್‌ ಅವರು, 2001ರಲ್ಲಿ ಕರ್ನಾಟಕಕ್ಕೆ ಮರಳಿ ಕನ್ನಡ ಭವನದಲ್ಲಿ ವ್ಯಂಗ್ಯಚಿತ್ರಗಳ ಪ್ರದರ್ಶನ ನಡೆಸಿದರು. ನಿವೃತ್ತಿಯ ಬಳಿಕ ವಿಶ್ವಮಟ್ಟದ 
ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಅವರ ಕುಂಚದಲ್ಲಿ ಮೂಡಿದ ಎಲ್ಲ ವ್ಯಂಗ್ಯಚಿತ್ರಗಳು ದಾಖಲೆ ಬರೆಯುತ್ತಲೇ ಇವೆ.

Advertisement

ದಾಖಲೆ ಬರೆಯಲು ಯಾವುದೇ ವಯಸ್ಸಿನ ಹಂಗಿಲ್ಲ. ಆಸಕ್ತಿ ಹಾಗೂ ಪರಿಶ್ರಮವಿದ್ದರೆ ಸಾಧನೆಯ ಶಿಖರ ಎಲ್ಲರನ್ನೂ ಅಪ್ಪಿಕೊಳ್ಳಲಿದೆ. 75ರ ವಯಸ್ಸಿನಲ್ಲೂ 25ರ ಹುರುಪು ಇವರಲ್ಲಿ. ಸಾಧನೆಗೆ ಯಾವುದೇ ವಯಸ್ಸು ಮುಖ್ಯವಲ್ಲ ಎನ್ನುವ ಈ ಹಿರಿಯ ಚೇತನದ ಹೆಸರಿನಲ್ಲಿ ಹತ್ತಾರು ವಿಶ್ವ ದಾಖಲೆಗಳಿವೆ ಎಂದರೆ ನೀವು ನಂಬಲೇ ಬೇಕು. ಯಾರು ಈ ಹಿರಿಯ ಚೇತನ ಅಂದಿರಾ?ಅವರೇ, ನಗರದ ವಿದ್ಯಾರಣ್ಯಪುರದಲ್ಲಿ 2 ದಶಕಗಳಿಂದ ವಾಸವಿರುವ ಬಿ.ವಿ.ಪಾಂಡುರಂಗ ರಾವ್‌.ಇವರು ವ್ಯಂಗ್ಯಚಿತ್ರದಲ್ಲಿ ಹಲವು ವಿಶ್ವ ದಾಖಲೆಗಳನ್ನು ಮಾಡಿ, ತಮ್ಮ ಹೆಸರಿನಲ್ಲಿದ್ದ ಲಿಮ್ಕಾ ದಾಖಲೆಗಳನ್ನು ತಾವೇ ಮುರಿದು ಹೊಸ ದಾಖಲೆಗಳಿಗೆ ಮುನ್ನುಡಿ ಹಾಡಿದ್ದಾರೆ.

35 ವರ್ಷಗಳ ಹಿಂದೆ ಮಧ್ಯ ಪ್ರದೇಶದ ಭಿಲಾಯ್‌ ಉಕ್ಕಿನ ಕಾರ್ಖಾನೆಯಲ್ಲಿ ಎಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಪ್ರಾರಂಭದಲ್ಲಿ ಉಕ್ಕಿನ ಕಾರ್ಖಾನೆಯಲ್ಲಿನ ಚಟುವಟಿಕೆಗಳ ಬಗ್ಗೆಯೇ ವ್ಯಂಗ್ಯಚಿತ್ರ ರಚಿಸುತ್ತಿದ್ದರು. ನಂತರ ಸಾಮಾಜಿಕ ಕಾಳಜಿಯುಳ್ಳ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ವ್ಯಂಗ್ಯಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದರು. ಸಹೋದ್ಯೋಗಿಗಳ ಪ್ರೇರಣೆಯಿಂದ ದೈನಿಕ್‌ ಭಾಸ್ಕರ್‌, ದೇಶ ಬಂಧು, ನವಭಾರತ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದರು. 1981ರಲ್ಲಿ ಮಧ್ಯ ಪ್ರದೇಶದ ಕನ್ನಡ ಸಂಘದ ಸಮಾರಂಭದಲ್ಲಿ ಪಾಂಡುರಂಗ ರಾವ್‌ ಅವರ ವ್ಯಂಗ್ಯಚಿತ್ರಗಳ ಮೊದಲ ಪ್ರದರ್ಶನ ನಡೆಯಿತು. ಅಲ್ಲಿ ಜನರು ತೋರಿದ ಅಭಿಮಾನ, ಮುಂದೆ ವ್ಯಂಗ್ಯಚಿತ್ರದಲ್ಲಿ ಹಲವು ದಾಖಲೆಗಳನ್ನು ಬರೆಯಲು ಪ್ರೇರಣೆಯಾಯಿತು. ಮೊದಲ ಪ್ರದರ್ಶನದ ನಂತರ ಮಧ್ಯ ಪ್ರದೇಶದಲ್ಲಿ ನಡೆಯುವ ವ್ಯಂಗ್ಯಚಿತ್ರಗಳ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. 

ನಿವೃತ್ತಿಗೆ ಎರಡು ವರ್ಷ ಇರುವಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡ ಇವರು 2001ರಲ್ಲಿ ಕರ್ನಾಟಕಕ್ಕೆ ಮರಳಿ ಕನ್ನಡ ಭವನದಲ್ಲಿ ವ್ಯಂಗ್ಯಚಿತ್ರಗಳ ಪ್ರದರ್ಶನ ನಡೆಸಿದರು. ನಿವೃತ್ತಿಯ ಬಳಿಕ ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಅಲ್ಲಿಂದ ಅವರ ಕುಂಚದಲ್ಲಿ ಮೂಡಿದ ಎಲ್ಲ ವ್ಯಂಗ್ಯಚಿತ್ರಗಳು ವಿಶ್ವ ದಾಖಲೆ ಬರೆಯುತ್ತಲೇ ಇವೆ.

Advertisement

ಸಮಾಜದಲ್ಲಿನ ತೊಂದರೆಗಳನ್ನು ಕುಂಚದಲ್ಲಿ ಮೂಡಿಸಿ ಸಮಾಜದ ಬದಲಾವಣೆಗೆ ಶ್ರಮಿಸುತ್ತಿರುವ ಪಾಂಡುರಂಗ ರಾವ್‌ ಅವರ ವ್ಯಂಗ್ಯಚಿತ್ರಗಳು ಭಾರತದಲ್ಲಷ್ಟೇ ಅಲ್ಲದೆ ಬೀಜಿಂಗ್‌, ಚೀನಾ, ಹಾಂಗ್‌ಕಾಂಗ್‌, ಬ್ರಿಟನ್‌, ಅಮೇರಿಕಾ ಸೇರಿದಂತೆ ಪ್ರಪಂಚದ ಹಲವಾರು ದೇಶಗಳಲ್ಲಿ ಪ್ರದರ್ಶನಗೊಂಡಿವೆ.

ಪಾಂಡುರಂಗ ರಾವ್‌ 14 ಬಾರಿ ಲಿಮ್ಕಾ ದಾಖಲೆಗೆ ಭಾಜನರಾಗಿದ್ದಾರೆ.  ಅದರಲ್ಲಿ ಐದು ಬಾರಿ ತಮ್ಮ ದಾಖಲೆಯನ್ನು ತಾವೇ ಮುರಿದು ಹೊಸ ದಾಖಲೆ ಬರೆದಿದ್ದಾರೆ. 
ರಾವ್‌ ಅವರು ಕೇವಲ ವ್ಯಂಗ್ಯಚಿತ್ರಗಾರರಷ್ಟೇ ಅಲ್ಲ. ಕ್ರಿಕೆಟ್‌ ಹಾಗೂ ಬ್ಯಾಡ್ಮಿಂಟನ್‌ ಆಟಗಾರರೂ ಹೌದು. ಕರ್ನಾಟಕ ಬ್ಯಾಟ್‌ಮಿಂಟನ್‌ ಅಸೋಸಿಯೇಷನ್‌ನಿಂದ ನಡೆದ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಇವರು ವಿಜೇತರಾಗಿದ್ದು, ನಂ.1 ಬ್ಯಾಟ್‌ಮಿಂಟನ್‌ ಆಟಗಾರರಾಗಿದ್ದಾರೆ. 75ರ ವಯೋಮಾನದವರಿಗೆ ವಿಶಾಖಪಟ್ಟಣದಲ್ಲಿ ಇತ್ತೀಚೆಗೆ ನಡೆದ ಬ್ಯಾಡ್ಮಿಂಟನ್‌ ಡಬಲ್ಸ್‌ನಲ್ಲಿ ಕ್ವಾಟರ್‌ ಫೈನಲ್‌ ತಲುಪಿದ್ದರು ಅಂದರೆ ಇವರ ಉತ್ಸಾಹ ಹೇಗಿದೆ ಎನ್ನುವುದನ್ನು ನೀವೇ ಲೆಕ್ಕ ಹಾಕಿ.

ಕೆಲ ದಿನಗಳ ಹಿಂದಷ್ಟೇ ಪಾಂಡುರಂಗ ರಾವ್‌ ರಚಿಸಿದ ಪರಿಸರ ಮಾಲಿನ್ಯದ ಕುರಿತ ವ್ಯಂಗ್ಯಚಿತ್ರ ಮಂಗೋಲಿಯಾ ದೇಶದ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಮಂಗೋಲಿಯಾದ ಕ್ಸಿಲಿಂಗೋಲ್‌ ವೊಕೇಶನಲ್‌ ಕಾಲೇಜಿನಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬ್ರೆಜಿಲ್‌, ಇರಾನ್‌, ಟೋಕಿಯೋ, ಟರ್ಕಿ ಸೇರಿ 26 ದೇಶಗಳಿಂದ 375 ವ್ಯಂಗ್ಯಚಿತ್ರಕಾರರು ಭಾಗವಹಿಸಿದ್ದರು. 168 ಕಲಾಕೃತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿ ಪ್ರದರ್ಶನಗೊಂಡವು. ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮಾನವ ವಾಯು ಮಾಲಿನ್ಯಕ್ಕೆ ಬಲಿಯಾಗುವುದನ್ನು ಮನಮುಟ್ಟುವಂತೆ ಚಿತ್ರಿಸಿದ ಬಿ.ವಿ.ಪಾಂಡುರಂಗ ರಾವ್‌ ಅವರ ವ್ಯಂಗ್ಯಚಿತ್ರ ತೀರ್ಪುಗಾರರ ಮನಗೆದ್ದು ಪ್ರಶಸ್ತಿ ಪಡೆದಿದೆ.

252 ಸಲ ಪ್ರದರ್ಶನ
ವಿಶ್ವಮಟ್ಟದ ವ್ಯಂಗ್ಯಚಿತ್ರಗಳ ಸ್ಪರ್ಧೆಗಳಲ್ಲಿ 252 ಬಾರಿ ಪಾಂಡುರಂಗ ರಾವ್‌ ಭಾಗವಹಿಸಿದ್ದಾರೆ. ಅದರಲ್ಲಿ 108 ಬಾರಿ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ವ್ಯಂಗ್ಯಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನಗೊಂಡಿವೆ. ಹೀಗೆ ಪ್ರದರ್ಶನಗಳು ನಡೆದಾಗ ಉತ್ತಮ ವಾದ ವ್ಯಂಗಚಿತ್ರಗಳನ್ನು ಆಯ್ಕೆ ಮಾಡಿ ಪುಸ್ತಕ ಪ್ರಕಟಿಸಲಾಗುತ್ತದೆ. ಅಂತಹ 70 ಪುಸ್ತಕಗಳಲ್ಲಿ ಪಾಂಡುರಂಗ ರಾವ್‌ ಅವರ ವ್ಯಂಗ್ಯಚಿತ್ರ ಗಳು ಪ್ರಕಟವಾಗಿವೆ. ಈ ರೀತಿ 70 ಪುಸ್ತಕಗಳಲ್ಲಿ ವ್ಯಂಗ್ಯಚಿತ್ರಗಳು ಪ್ರಕಟವಾಗಿರುವುದು ಮತ್ತು 108 ಬಾರಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ವ್ಯಂಗ್ಯಚಿತ್ರಗಾರರಾಗಿ ಭಾಗವಹಿಸಿರುವುದು ಜೂನ್‌ 2017ರಲ್ಲಿ ವರ್ಲ್ಡ್ ಬುಕ್‌ನಲ್ಲಿ ರೆಕಾರ್ಡ್‌ ಆಗಿದೆ.

ಸದ್ಯದಲ್ಲೇ 15ನೇ ಲಿಮ್ಕಾ ?
2017ರಲ್ಲಿ ಮಧ್ಯ ಪ್ರದೇಶದ ಕನ್ನಡ ಸಂಘದಿಂದ 75ನೇ ಸಂಭ್ರಮಾಚರಣೆ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಂಡುರಂಗ ರಾವ್‌ ಅವರ 50ನೇ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಇವರ ಮೊದಲ ವ್ಯಂಗ್ಯಚಿತ್ರ ಪ್ರದರ್ಶನ ನಡೆದ ಜಾಗದಲ್ಲಿಯೇ 50ನೇ ಪ್ರದರ್ಶನ ನಡೆದಿರುವುದು ಹಾಗೂ ಹವ್ಯಾಸಿ ವ್ಯಂಗ್ಯಚಿತ್ರಗಾರರೊಬ್ಬರು 50ನೇ 
ಬಾರಿ ವ್ಯಂಗ್ಯಚಿತ್ರ ಪ್ರದರ್ಶನ ನಡೆಸುವುದು ಬಹಳ ಅಪರೂಪದ ವಿಷಯ. ಹೀಗಾಗಿ ಇದನ್ನು ಲಿಮ್ಕಾ ದಾಖಲೆಗೆ ಕಳುಹಿಸಲಾಗಿದೆ. 
ಬಹುಶಃ ಸದ್ಯದಲ್ಲೇ 15ನೇ ಲಿಮ್ಕಾ ದಾಖಲೆ ತಮ್ಮ ಮುಡಿಗೇರಲಿದೆ 
ಎಂಬ ವಿಶ್ವಾಸದಲ್ಲಿದ್ದಾರೆ 
ಪಾಂಡುರಂಗ ರಾವ್‌.

ಅಂ ದು ವ್ಯಂಗ್ಯಚಿತ್ರಗಾರರಿಗೆ ಸಾಕಷ್ಟು ಅವಕಾಶಗಳಿರಲಿಲ್ಲ. ಇಂದು  ಹೆಚ್ಚಿನ ಅವಕಾಶಗಳಿವೆ. ಯುವ ಪೀಳಿಗೆ ಅದನ್ನು ಬಳಸಿಕೊಂಡು ಸಾಧನೆ ಮಾಡಬೇಕು. ದಿನ ಬೆಳಗಾಗುವುದರೊಳಾಗಿ ಜನಪ್ರಿಯರಾಗಬೇಕೆಂಬ ಮನಸ್ಥಿತಿ ಸರಿಯಲ್ಲ. ಆಸಕ್ತಿ ಹಾಗೂ ಪರಿಶ್ರಮದಿಂದ ಸಾಧನೆ ಸಾಧ್ಯ.
ಬಿ.ವಿ.ಪಾಂಡುರಂಗ ರಾವ್‌, ವ್ಯಂಗ್ಯಚಿತ್ರಗಾರ.

ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next