ಚಾಮರಾಜನಗರ: ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿಯಾಗಿರುವ ಕೇಂದ್ರ ಸರ್ಕಾರದ ದೂರ ಸಂಪರ್ಕ ಸಚಿವಾಲಯದ ಆರ್ಥಿಕ ಸಲಹೆಗಾರ ಅಮಿತ್ ರೇ ನೇತೃತ್ವದ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ನೀರಿನ ಸಂರಕ್ಷಣೆ ಕುರಿತು ಪರಿಶೀಲನೆ ನಡೆಸಿತು.
ಎರಡು ದಿನಗಳಿಂದ ಜಿಲ್ಲೆಯಲ್ಲಿ ಪರಿಶೀಲನೆ: ಭಾರತ ಸರ್ಕಾರವು ಜಲ ಭದ್ರತೆಗಾಗಿ ಜಲಶಕ್ತಿ ಅಭಿಯಾನ ಎಂಬ ಕಾರ್ಯಕ್ರಮವನ್ನು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜು. 1 ರಿಂದ 15 ರವರೆಗೆ ಹಾಗೂ ಅಕ್ಟೋಬರ್ 2 ರಿಂದ ನವೆಂಬರ್ 30 ರವರೆಗೆ ಹಮ್ಮಿಕೊಂಡಿದೆ. ರಾಜ್ಯದ ಹಲವು ಭಾಗಗಳಲ್ಲಿ ನೀರಿನ ತೀವ್ರ ಕೊರತೆಯಿರುವ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಅಮಿತ್ ರೇ ನೇತೃತ್ವದಲ್ಲಿ ಜಲಶಕ್ತಿ ಅಭಿಯಾನ ಹಾಗೂ ತಂಡದವರು ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆ ಹಾಗೂ ಪೂರೈಕೆ ಸಂಬಂಧ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಅಧ್ಯಕ್ಷತೆ: ಪೂರ್ವಭಾವಿಯಾಗಿ ಸೋಮವಾ ಕಾವೇರಿ ಅವರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಿ ಗುಂಡ್ಲುಪೇಟೆ ತಾಲೂಕಿಗೆ ಕ್ಷೇತ್ರ ಭೇಟಿಯನ್ನು ಕೈಗೊಂಡರು.
ಟ್ರಂಚ್, ಬಂಡ್‌ಗಳ ಪರಿಶೀಲನೆ: ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಕೃಷಿ ಹೊಂಡಗಳು, ಸಾಂಸ್ಕೃತಿಕ ಕಲ್ಯಾಣಿ ಪುನರುಜ್ಜೀವನ ಕುರಿತು ಪರಿಶೀಲನೆ ನಡೆಸಿದರು. ಹಂಗಳಾಪುರ ಗ್ರಾಮದಲ್ಲಿನ ಕೆರೆಗಳ ವೀಕ್ಷಣೆ, ಪುತ್ತನಪುರ ಗ್ರಾಮದಲ್ಲಿರುವ ಟ್ರಂಚ್ ಮತ್ತು ಬಂಡ್‌ಗಳ ಪರಿಶೀಲನೆ ನಡೆಸಿದರು.
ಏತ ನೀರಾವರಿ ವೀಕ್ಷಣೆ: ಕೂತನೂರು ಗ್ರಾಮದಲ್ಲಿನ ಚೆಕ್‌ಡ್ಯಾಂಗಳ ವೀಕ್ಷಿಸಿದರು. ಬಳಿಕ ಗುಂಡ್ಲುಪೇಟೆ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಳೆ ನೀರು ಕೋಯ್ಲು ವೀಕ್ಷಣೆ ಕೈಗೊಂಡರು. ಕೊಳವೆ ಬಾವಿಗಳ ಅಧ್ಯಯ ನಡೆಸಿ ಅಂತರ್ಜಲ ಮಟ್ಟ ಪರಿಶೀಲಿಸಿ ಹುತ್ತೂರು ಕೆರೆಯ ಏತನೀರಾವರಿ ಯೋಜನೆಯನ್ನು ವೀಕ್ಷಿಸಿದರು.
ತೆರಕಣಾಂಬಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ, ಅಣ್ಣೂರು ಕೆರೆ ವೀಕ್ಷಣೆ ಮಾಡಿದರು. ಗೋಪಾಲಪುರ ಗ್ರಾಮದ ರಸ್ತೆ ಬದಿಗಳಲ್ಲಿ ನೆಟ್ಟಿರುವ ಸಸಿಗಳ ಪರಿಶೀಲನೆ ಕೈಗೊಂಡರು. ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.