Advertisement

ಇಂಗಾಲದ ಡೈಆಕ್ಸೈಡ್ಡ್‌ನಿಂದ ನೆಲಹಾಸು! ಧಾರವಾಡ ಯುವಕ ತೇಜಸ್‌ ಸಿದ್ನಾಳ ಸಾಧನೆ

12:15 PM Jan 12, 2022 | Team Udayavani |

ಹುಬ್ಬಳ್ಳಿ: ಮನೆಯ ಸೌಂದರ್ಯ ಹೆಚ್ಚಿಸಲು ಲಕ್ಷಾಂತರ ರೂ. ಖರ್ಚು ಮಾಡುವ ಜನ ಪರಿಸರಕ್ಕೆ ಮಾರಕವಾದರೂ ಒಪ್ಪ ಓರಣಕ್ಕೆ ಆದ್ಯತೆ ನೀಡುತ್ತಾರೆ. ಆದರೆ, ಧಾರವಾಡದ ಯುವಕನೊಬ್ಬ ನಿಸರ್ಗಕ್ಕೆ ಮಾರಕವಾದ ಇಂಗಾಲದ ಡೈ ಆಕ್ಸೈಡ್ಡ್‌ ನ್ನು ಬಳಸಿ ಟೈಲ್ಸ್‌ (ನೆಲಹಾಸು) ಆವಿಷ್ಕರಿಸಿದ್ದಾನೆ. ಇದು ದೇಶದಲ್ಲೇ ಮೊದಲ ಪ್ರಯತ್ನ ಎಂಬುದು ಕೂಡ ವಿಶೇಷ.
ಧಾರವಾಡದ ತೇಜಸ್‌ ಸಿದ್ನಾಳ ವೃತ್ತಿಯಲ್ಲಿ ಆರ್ಕಿಟೆಕ್ಟ್ ಡಿಸೈನರ್‌. ಮುಂಬೈನಲ್ಲಿ ಎಂಜಿನಿಯರಿಂಗ್‌ ಪದವಿ ಹಾಗೂ ಲಂಡನ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಒಂದು ಕಂಪನಿಯಲ್ಲಿ ಉದ್ಯೋಗಿಯಾಗಿ ಇರುವ ಬದಲು ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎನ್ನುವ ಹಂಬಲ ಪದವಿ ಹಂತದಿಂದಲೇ ಇತ್ತು. ಪರಿಣಾಮ ಪರಿಸರಕ್ಕೆ ಮಾರಕವಾದ ವಸ್ತುವಿನಿಂದಲೇ ನಿರ್ಮಾಣ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡ ಬೇಕು ಎನ್ನುವ ತುಡಿತ ಎಂಟು ವರ್ಷಗಳ ಬಳಿಕ ಸಾಕಾರಗೊಂಡಿದೆ.

Advertisement

ವಾಯುಮಾಲಿನ್ಯಕ್ಕೆ ಕಾರಣವಾಗಿರುವ ಇಂಗಾಲದ ಡೈಆಕ್ಸೈಡ್ಡ್‌ ಬಳಸಿಕೊಂಡು ಮೊದಲ ಪ್ರಯತ್ನದಲ್ಲಿ ಇಟ್ಟಿಗೆ ಇನ್ನಿತರ ವಸ್ತುಗಳ ತಯಾರಿಸಿ ಯಶಸ್ವಿಯಾಗಲಿಲ್ಲ. ನಿರಂತರ ಆವಿಷ್ಕಾರದ ನಂತರ ಇದೀಗ ಟೈಲ್ಸ್‌ ಉತ್ಪಾದನೆ ಕೈ ಹಿಡಿದಿದ್ದು, ಗುಜರಾತ್‌ನ ಮೋರ್ಬಿ ಕೈಗಾರಿಕೆ ವಲಯದಲ್ಲಿನ ಟೈಲ್ಸ್‌ ತಯಾರಿಕೆ ಕಂಪನಿ ಮೂಲಕ ಈ ಉತ್ಪಾದನೆ ನಡೆಯುತ್ತಿದೆ. ಕಾರ್ಬನ್‌ ಕ್ರಾಫ್ಟ್‌ ಮೂಲಕ ಹೊಸ ಸಂಶೋಧನೆಯನ್ನು ಜನರಿಗೆ ತಲು ಪಿಸುವ ಪ್ರಯತ್ನದಲ್ಲಿ ತಂಡ ಕಾರ್ಯ ನಿರ್ವಹಿಸುತ್ತಿದೆ.

ಪರಿಸರ-ಸಾಮಾಜಿಕ ಕಾಳಜಿ : ಪ್ರತಿವರ್ಷ ಭಾರತದಲ್ಲಿ ಸುಮಾರು 100 ಮಿಲಿಯನ್‌ ಟೈರ್‌ಗಳನ್ನು ಉತ್ಪಾದಿಸಲಾಗುತ್ತದೆ. ಇಷ್ಟೇ ಪ್ರಮಾಣದ ಟೈರ್‌ಗಳು ಗುಜಿರಿಗೆ ಹೋಗುತ್ತವೆ. ಇದರ ಮೂಲಕ ರಸ್ತೆ ನಿರ್ಮಾಣಕ್ಕೆ ಬೇಕಾದ ಇಂಧನ ಹಾಗೂ ಅದರಲ್ಲಿನ ತಂತಿಯನ್ನು ಮರುಬಳಕೆ ಮಾಡಲಾಗುತ್ತದೆ. ಒಂದು ಟೈರ್‌ ಸುಟ್ಟಾಗ ಕನಿಷ್ಠ 300 ಗ್ರಾಂ ಇಂಗಾಲದ ಡೈಆಕ್ಸೈಡ್‌ ಹೊರಸೂಸುತ್ತದೆ. ಹೀಗೆ ಟೈರ್‌ಗಳನ್ನು ಸುಟ್ಟಾಗ ಪ್ರತಿವರ್ಷ 150 ಮಿಲಿಯನ್‌ ಕೆಜಿ ಕಾರ್ಬನ್‌ ಪುಡಿ ಉತ್ಪಾದನೆಯಾಗುತ್ತದೆ. ಈ ತ್ಯಾಜ್ಯ ನಿರ್ವಹಣೆ ಸಾಧ್ಯವಾಗದೆ ಪುನಃ ಸುಡಲಾಗುತ್ತದೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತದೆ. ಈ ತ್ಯಾಜ್ಯವನ್ನು ಗುರಿಯಾಗಿಸಿಕೊಂಡು ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕಾರ್ಬನ್‌ ಪುಡಿಯನ್ನು ಟೈಲ್ಸ್‌
ಉತ್ಪಾದನೆಗೆ ಬಳಸಲಾಗುತ್ತಿದೆ. ಇನ್ನೂ ಕೆಲವು ಸಂಸ್ಥೆಗಳು ಶುದ್ಧ ವಾಯು ಪಡೆಯುವ ಕಾರಣಕ್ಕೆ ಗಾಳಿ ಶುದ್ಧೀಕರಣ ಘಟಕ ಸ್ಥಾಪಿಸಿವೆ. ಇವುಗಳ ಮೂಲಕವೂ ಇಂಗಾಲದ ಡೈಆಕ್ಸೈಡ್ಡ್‌ ದೊರೆಯುತ್ತಿದೆ.

ವಿಶೇಷತೆ ಏನು?
ವಾಯುಮಾಲಿನ್ಯಕ್ಕೆ ಕಾರಣವಾದ ವಸ್ತು ಪರಿಸರಕ್ಕೆ ಪೂರಕವಾಗಿ ಬಳಕೆಯಾಗುತ್ತಿದೆ. ಒಂದು ಡೀಸೆಲ್‌ ಕಾರು 15 ನಿಮಿಷ ಹೊರಸೂಸುವ ಇಂಗಾಲದ ಡೈ ಆಕ್ಸೈಡ್ಡ್‌ ಪ್ರಮಾಣವನ್ನು ಒಂದು ಟೈಲ್ಸ್‌ ಉತ್ಪಾದನೆಗೆ ಬಳಸಲಾಗುತ್ತದೆ. ಇತರೆ ಟೈಲ್ಸ್‌ ಉತ್ಪಾದನೆಗೆ ಬಳಕೆಯಾಗುವ ವಿದ್ಯುತ್‌ನಲ್ಲಿ ಶೇ.20ರಷ್ಟು ಮಾತ್ರ ಬೇಕಾಗುತ್ತದೆ. ನೈಸರ್ಗಿಕವಾಗಿ ಕ್ವಾರಿಗಳಲ್ಲಿ ದೊರೆಯುವ ಶೇ.70 ಮಾರ್ಬಲ್‌, ಗ್ರಾನೈಟ್‌ ಪುಡಿ ಬಳಸಲಾಗುತ್ತದೆ. ಕಟ್ಟಡ ತಾಜ್ಯದಲ್ಲಿ ದೊರೆಯುವ ಟೈಲ್ಸ್‌, ಮಾರ್ಬಲ್‌ ಹಾಗೂ ಗ್ರಾನೈಟ್‌ ಪುಡಿಯ ನ್ನು ಕೂಡ ಇದಕ್ಕೆ ಬಳಸಬಹುದಾಗಿದೆ. ಇತರೆ ಕಂಪನಿಯ ಟೈಲ್ಸ್‌ 10 ಮಿಮೀ ಇದ್ದರೆ ಇದು 20-30 ಮಿಮೀನಷ್ಟು ದಪ್ಪ. ಆವಿಷ್ಕಾರ ಹೊಸದಾದರೂ ಈ ಟೈಲ್ಸ್‌ ತಯಾರಿಕೆಗೆ 200 ವರ್ಷದ ಹಿಂದಿನ ತಂತ್ರವನ್ನು ಬಳಸಲಾಗುತ್ತಿದೆ. ಈಗಾಗಲೇ 18
ವಿವಿಧ ವಿನ್ಯಾಸ ಹಾಗೂ 40ಕ್ಕೂ ಹೆಚ್ಚು ಸಾದಾ ವಿನ್ಯಾಸದ ಟೈಲ್ಸ್‌ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಪರಿಸರಕ್ಕೆ ಮಾರಕವಾದ ವಸ್ತುವಿನಿಂದ ನಿರ್ಮಾಣ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಆವಿಷ್ಕಾರದಲ್ಲಿ ಹಲವು ಏರಿಳಿತಗಳ ನಡುವೆ ಒಂದು ಹಂತಕ್ಕೆ ತಲುಪಿದ್ದೇವೆ.
– ತೇಜಸ್‌ ಸಿದ್ನಾಳ, ಆರ್ಕಿಟೆಕ್ಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next