Advertisement
ಜೊಕೋ ಟ್ರಿಕ್ಸ್, ಅವರ ಕಾರ್ಯತಂತ್ರವನ್ನೆಲ್ಲ ಅವರಿಗೇ ತಿರುಗಿ ನೀಡುವ ಮೂಲಕ ಕಾರ್ಲೋಸ್ ಅಲ್ಕರಾಜ್ ಗೆದ್ದು ಬಂದದ್ದು ವಿಂಬಲ್ಡನ್ ಫೈನಲ್ ವಿಶೇಷ. ಮೊದಮೊದಲು ತೀರಾ ಸಾಮಾನ್ಯ ಮಟ್ಟದ ಪ್ರದರ್ಶನ ನೀಡುವುದು, ಮೊದಲ ಸೆಟ್ ಸೋಲುವುದು, ಬಳಿಕ ನೈಜ ಸಾಮರ್ಥ್ಯಕ್ಕೆ ಕುದುರಿಕೊಳ್ಳುವುದು, ಎದುರಾಳಿಯ ಶಕ್ತಿಯನ್ನು ಬಸಿಯುತ್ತ ಹೋಗಿ ಹೈರಾಣಾಗಿಸುವುದು, ಪಂದ್ಯವನ್ನು 5ನೇ ಸೆಟ್‌ಗೆ ಕೊಂಡೊಯ್ಯುವುದು, ಇಲ್ಲಿ ರ್ಯಾಕೆಟ್ ರಭಸವನ್ನು ತೀವ್ರಗೊಳಿಸಿ ಗೆದ್ದು ಬರುವುದು… ಇದು ಜೊಕೋವಿಕ್ ಆಟದ ರೀತಿ. ರವಿವಾರದ ನಾಲ್ಕೂವರೆ ಗಂಟೆಗಳ ಹೋರಾಟದಲ್ಲಿ ಇದು ಅವರಿಗೇ ತಿರುಮಂತ್ರವಾಯಿತು! ಇದಕ್ಕೆ ಅಲ್ಕರಾಜ್ ಗೆಲುವಿನ ಅಂತರವೇ ಸಾಕ್ಷಿ: 1-6, 7-6 (8-6), 6-1, 3-6, 6-4.
ಸ್ಪೇನ್‌ನ ಎಲ್ ಪಾಮರ್‌ನಲ್ಲಿ, 2003ರ ಮೇ 5ರಂದು ಕಾರ್ಲೋಸ್ ಅಲ್ಕರಾಜ್ ಗಾರ್ಫಿಯ ಜನನ. ನಾಲ್ಕರ ಹರೆಯದಲ್ಲೇ ರ್ಯಾಕೆಟ್ ಗೀಳು. ತಂದೆ ಕಾರ್ಲೋಸ್ ಅಲ್ಕರಾಜ್ ಗೊಂಝಾಲೆಸ್ ಮಾಜಿ ವೃತ್ತಿಪರ ಟೆನಿಸಿಗ. 1990ರಲ್ಲಿ ಸ್ಪೇನ್‌ನ ಟಾಪ್-40 ಆಟಗಾರರಲ್ಲಿ ಇವರೂ ಒಬ್ಬರಾಗಿದ್ದರು. ತಂದೆಯೇ ಜೂ. ಅಲ್ಕರಾಜ್ ಅವರ ಮಾರ್ಗದರ್ಶಕ.
Related Articles
Advertisement
ಜೊಕೋ ಪ್ರಶಂಸೆ“ಹುಲ್ಲಿನಂಕಣದಲ್ಲಿ ಅಲ್ಕರಾಜ್ ಇಷ್ಟೊಂದು ಅಮೋಘ ಆಟವಾಡುತ್ತಾರೆಂದು ನಾನು ಭಾವಿಸಿರಲೇ ಇಲ್ಲ. ಇನ್ನೂ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಅಲ್ಕರಾಜ್ ಅವರಂಥ ಆಟಗಾರನನ್ನು ಈವರೆಗೆ ಎದುರಿಸಿಲ್ಲ. ತಾನು ವಿಶ್ವದ ಶ್ರೇಷ್ಠ ಆಟಗಾರನೆಂಬುದನ್ನು ಅವರು ನಿರೂಪಿಸಿದ್ದಾರೆ’ ಎಂಬ ಜೊಕೋವಿಕ್ ಮಾತುಗಳೇ ಸಾಕು, ಅಲ್ಕರಾಜ್ ಅವರ ಭವ್ಯ ಭವಿಷ್ಯವನ್ನು ತೆರೆದಿಡುತ್ತದೆ.
ಹಾಗೆಯೇ ಅಲ್ಕರಾಜ್ ಅವರ ಈ ಅಮೋಘ ಜಯಕ್ಕೆ ಕ್ರೀಡಾ ದಿಗ್ಗಜರಾದ ಸಚಿನ್ ತೆಂಡುಲ್ಕರ್, ರಫೆಲ್ ನಡಾಲ್ ಅವರೆಲ್ಲ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ಕೆಲವು ವರ್ಷಗಳ ಕಾಲ ಟೆನಿಸ್ ಜಗತ್ತು ಅಲ್ಕರಾಜ್ ಮಂತ್ರವನ್ನು ಜಪಿಸುವುದರಲ್ಲಿ ಅನುಮಾನವಿಲ್ಲ. ನಂ.1 ಸ್ಥಾನ ಗಟ್ಟಿಗೊಳಿಸಿದ ಅಲ್ಕರಾಜ್
ವಿಂಬಲ್ಡನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ನೂತನ ಎಟಿಪಿ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಯುಎಸ್ ಓಪನ್ ಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್ ಅವರನ್ನು ಸೋಲಿಸುವ ಮೂಲಕ ಅಲ್ಕರಾಜ್ ನಂ.1 ಸ್ಥಾನಕ್ಕೆ ಏರಿದ್ದರು.
ವನಿತಾ ವಿಭಾಗದ ಚಾಂಪಿಯನ್ ಮಾರ್ಕೆಟಾ ವೊಂಡ್ರುಸೋವಾ ಡಬ್ಲ್ಯುಟಿಎ ರ್‍ಯಾಂಕಿಂಗ್ ಯಾದಿಯಲ್ಲಿ 10ನೇ ಸ್ಥಾನಕ್ಕೆ ನೆಗೆದಿದ್ದಾರೆ. ಇವರದು ಬರೋಬ್ಬರಿ 32 ಸ್ಥಾನಗಳ ಜಿಗಿತ. ದಾಖಲೆಗಳ ದೊರೆ
ಕಾರ್ಲೋಸ್ ಅಲ್ಕರಾಜ್ ಗ್ರ್ಯಾನ್‌ಸ್ಲಾಮ್ ಫೈನಲ್‌ನಲ್ಲಿ ನೊವಾಕ್ ಜೊಕೋವಿಕ್ ವಿರುದ್ಧ 5 ಸೆಟ್‌ಗಳ ಹೋರಾಟ ನಡೆಸಿ ಗೆದ್ದ ಕೇವಲ 2ನೇ ಆಟಗಾರ. 2012ರ ಯುಎಸ್ ಓಪನ್ ಫೈನಲ್‌ನಲ್ಲಿ ಆ್ಯಂಡಿ ಮರ್ರೆ ಈ ಸಾಧನೆಗೈದಿದ್ದರು. ಅಲ್ಕರಾಜ್ ವಿಂಬಲ್ಡನ್ ಗೆದ್ದ ಸ್ಪೇನ್‌ನ ಕೇವಲ 3ನೇ ಟೆನಿಸಿಗ. ಮ್ಯಾನ್ಯುಯೆಲ್ ಸಂಟಾನ (1966) ಮತ್ತು ರಫೆಲ್ ನಡಾಲ್ (2008, 2010) ಉಳಿದಿಬ್ಬರು. ಹಾಗೆಯೇ ಒಂದಕ್ಕಿಂತ ಹೆಚ್ಚು ಗ್ರ್ಯಾನ್‌ಸ್ಲಾಮ್ ಗೆದ್ದ ಸ್ಪೇನ್‌ನ 4ನೇ ಆಟಗಾರ. ರಫೆಲ್ ನಡಾಲ್, ಮ್ಯಾನ್ಯುಯೆಲ್ ಸಂಟಾನ ಮತ್ತು ಸಗೇìಯಿ ಬ್ರುಗೇರ ಉಳಿದ ಮೂವರು. ಅಲ್ಕರಾಜ್ ವಿಂಬಲ್ಡನ್ ಗೆದ್ದ 3ನೇ ಕಿರಿಯ ಆಟಗಾರ (20 ವರ್ಷ, 72 ದಿನ). ಮೊದಲೆರಡು ಸ್ಥಾನದಲ್ಲಿರುವವರು ಬ್ಜೋ ರ್ನ್ ಬೋರ್ಗ್ (20 ವರ್ಷ, 27 ದಿನ, 1976ರಲ್ಲಿ) ಮತ್ತು ಬೊರಿಸ್ ಬೆಕರ್ (17 ವರ್ಷ, 227 ದಿನ, 1985ರಲ್ಲಿ ಹಾಗೂ 18 ವರ್ಷ, 226 ದಿನ, 1986ರಲ್ಲಿ). 1994ರ ಬಳಿಕ ಅಲ್ಕರಾಜ್ ಟಾಪ್-10 ಯಾದಿಯ ಮೂವರನ್ನು ಸೋಲಿಸಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೊದಲಿಗನೆನಿಸಿದರು. ಅವರಿಲ್ಲಿ ಹೋಲ್ಜರ್ ರುನೆ (6), ಡ್ಯಾನಿಲ್ ಮೆಡ್ವೆಡೇವ್ (3), ಜೊಕೋವಿಕ್ (2) ವಿರುದ್ಧ ಜಯ ಸಾಧಿಸಿದರು. 1994ರ ಸಾಧಕ ಪೀಟ್ ಸಾಂಪ್ರಸ್. ಅವರು ಮೈಕಲ್ ಚಾಂಗ್, ಟಾಡ್ ಮಾರ್ಟಿನ್ ಮತ್ತು ಗೊರಾನ್ ಇವಾನಿಸೆವಿಚ್‌ಗೆ ಸೋಲುಣಿಸಿದ್ದರು. ಅಲ್ಕರಾಜ್ 21 ವರ್ಷ ತುಂಬುವ ಮೊದಲೇ “ಓಪನ್ ಎರಾ’ದಲ್ಲಿ 2 ಹಾಗೂ ಹೆಚ್ಚು ಗ್ರ್ಯಾನ್‌ಸ್ಲಾಮ್ ಗೆದ್ದ 5ನೇ ಆಟಗಾರ. ಮ್ಯಾಟ್ಸ್ ವಿಲಾಂಡರ್ (4), ಬ್ಜೋರ್ನ್ ಬೋರ್ಗ್ (3), ಬೊರಿಸ್ ಬೆಕರ್ (2) ಮತ್ತು ರಫೆಲ್ ನಡಾಲ್ (2) ಉಳಿದ ಕಿರಿಯ ಸಾಧಕರು. ಕಳೆದ 40 ವರ್ಷಗಳ ಟೆನಿಸ್ ಇತಿಹಾಸದಲ್ಲಿ, ಒಂದೇ ಸೀಸನ್‌ನಲ್ಲಿ 6 ಹಾಗೂ ಹೆಚ್ಚಿನ ಟೆನಿಸ್ ಪ್ರಶಸ್ತಿ ಜಯಿಸಿದ 3ನೇ ಕಿರಿಯ ಆಟಗಾರನೆಂಬುದು ಅಲ್ಕರಾಜ್ ಸಾಧನೆ. ಆ್ಯಂಡ್ರೆ ಅಗಾಸ್ಸಿ (1988) ಮತ್ತು ರಫೆಲ್ ನಡಾಲ್ (2005) ಉಳಿದವರು. ಅಲ್ಕರಾಜ್ ಕಳೆದ 21 ವರ್ಷಗಳಲ್ಲಿ “ಬಿಗ್ ಫೋರ್’ಗಳಾದ ನಡಾಲ್, ಜೊಕೋವಿಕ್, ಮರ್ರೆ, ಫೆಡರರ್ ಹೊರತುಪಡಿಸಿ ವಿಂಬಲ್ಡನ್ ಗೆದ್ದ ಮೊದಲ ಹೀರೋ. 2002ರಲ್ಲಿ ಲೇಟನ್ ಹೆವಿಟ್ ಗೆದ್ದು ಬಂದಿದ್ದರು. ವಿಂಬಲ್ಡನ್‌ನಲ್ಲಿ ಜೊಕೋವಿಕ್ ಅವರ 34 ಪಂದ್ಯಗಳ ಗೆಲುವಿನ ಸರಪಣಿಯನ್ನು ಅಲ್ಕರಾಜ್ ಮುರಿದರು. “ಓಪನ್ ಎರಾ’ದಲ್ಲಿ 51ನೇ ಸಲ ಅಗ್ರ ಶ್ರೇಯಾಂಕಿತರಿಬ್ಬರು ವಿಂಬಲ್ಡನ್ ಫೈನಲ್‌ನಲ್ಲಿ ಕಾದಾಡಿದರು. ಅಗ್ರ ಶ್ರೇಯಾಂಕದ ಆಟಗಾರ ಪ್ರಶಸ್ತಿ ಎತ್ತಿದ 26ನೇ ನಿದರ್ಶನ ಇದಾಗಿದೆ. ಟಾಪ್-10 ರ್‍ಯಾಂಕಿಂಗ್ (ಪುರುಷರು)
1 ಕಾರ್ಲೋಸ್ ಅಲ್ಕರಾಜ್
2 ನೊವಾಕ್ ಜೊಕೋವಿಕ್
3 ಡ್ಯಾನಿಲ್ ಮೆಡ್ವೆಡೇವ್
4 ಕ್ಯಾಸ್ಪರ್ ರೂಡ್
5 ಸ್ಟೆಫನಸ್ ಸಿಸಿಪಸ್
6 ಹೋಲ್ಜರ್ ರುನೆ
7 ಆ್ಯಂಡ್ರೆ ರುಬ್ಲೇವ್
8 ಜಾನಿಕ್ ಸಿನ್ನರ್
9 ಟೇಲರ್ ಫ್ರಿಟ್ಜ್
10 ಫ್ರಾನ್ಸೆಸ್ ಥಿಯಾಫೊ ಟಾಪ್-10 ರ್‍ಯಾಂಕಿಂಗ್ (ವನಿತೆಯರು)
1 ಇಗಾ ಸ್ವಿಯಾಟೆಕ್
2 ಅರಿನಾ ಸಬಲೆಂಕಾ
3 ಎಲೆನಾ ರಿಬಾಕಿನಾ
4 ಜೆಸ್ಸಿಕಾ ಪೆಗುಲಾ
5 ಕ್ಯಾರೋಲಿನ್ ಗಾರ್ಸಿಯಾ
6 ಓನ್ಸ್ ಜೆಬ್ಯುರ್
7 ಕೊಕೊ ಗಾಫ್
8 ಪೆಟ್ರಾ ಕ್ವಿಟೋವಾ
9 ಮರಿಯಾ ಸಕ್ಕರಿ
10 ಮಾರ್ಕೆಟಾ ವೊಂಡ್ರುಸೋವಾ