ವರದಿ: ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಪರ್ಯಾಯ ಆದಾಯ ಮೂಲವಾಗಿ ಆರಂಭಿಸಿರುವ ಸಾರಿಗೆ ಸಂಸ್ಥೆಯ “ನಮ್ಮ ಕಾರ್ಗೋ’ ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಟ್ರ್ರ್ಯಾಕಿಂಗ್ ವ್ಯವಸ್ಥೆ ಇರುವುದರಿಂದ ವಿಶ್ವಾಸಾರ್ಹತೆ ಮೂಡಿಸಿದೆ. ಪ್ರತಿ ತಿಂಗಳು ಆದಾಯದ ಪ್ರಮಾಣ ಹೆಚ್ಚುತ್ತಿದ್ದರೂ ಸದ್ಯ ಪ್ರಮುಖ ಸ್ಥಳಗಳಿಗೆ ಮಾತ್ರ ಈ ಸೌಲಭ್ಯವಿದೆ.
ನಾಲ್ಕು ಸಂಸ್ಥೆಗಳ ಅತೀ ದೊಡ್ಡ ಸಾರಿಗೆ ಜಾಲಕ್ಕೆ ಹೋಲಿಸಿದರೆ ನಿರೀಕ್ಷಿತ ಆದಾಯವೇನಲ್ಲ. ಕೋವಿಡ್ ಲಾಕ್‌ಡೌನ್, ನೌಕರರ ಮುಷ್ಕರ, ಡೀಸೆಲ್ ದರ, ಬಿಡಿ ಭಾಗಗಳ ಏರಿಕೆ, ಸರ್ಕಾರಗಳಿಂದ ಬಾರದ ಬಾಕಿ ಹೀಗೆ ಹಲವು ಕಾರಣಗಳಿಂದ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ಹೊರತರಲು ಹಲವು ಪ್ರಯತ್ನಗಳು ನಡೆದಿವೆ. ಇದರ ಭಾಗವೇ “ನಮ್ಮ ಕಾರ್ಗೋ’ ಸೇವೆ. ಈ ಹಿಂದೆ ಸಾರಿಗೆ ಸಂಸ್ಥೆಗಳು ಲಘು ಸರಕು ಸಾಗಾಣಿಕೆ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡುತ್ತಿದ್ದವು. ಇದರಿಂದ ಸಂಸ್ಥೆಗಳಿಗೆ ಅಷ್ಟೊಂದು ಆದಾಯ ಬರುತ್ತಿರಲಿಲ್ಲ. ಹೀಗಾಗಿ ಕಾರ್ಗೋ ಸೇವೆಯನ್ನು ಸಂಸ್ಥೆಯೇ ನಿರ್ವಹಿಸಲು ಮುಂದಾಗಿದ್ದು, ಉತ್ತಮ ಆದಾಯದ ಮೂಲವಾಗಿ ಪರಿವರ್ತನೆಯಾಗುತ್ತಿದೆ.
ಸುಧಾರಣೆಯತ್ತ ಕಾರ್ಗೋ: ಇದೀಗ ಮಹಾರಾಷ್ಟ್ರ ಹಾಗೂ ಗೋವಾ ಹೊರತುಪಡಿಸಿ ಪೂರ್ಣ ಪ್ರಮಾಣದಲ್ಲಿ ಎಲ್ಲಾ ಮಾರ್ಗಗಳಲ್ಲಿ ಬಸ್ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಗೋ ಸೇವೆಯಿಂದ ಆದಾಯ ಕೂಡ ಹೆಚ್ಚಾಗಿದೆ. ಸೇವೆ ಆರಂಭವಾದ ಕಳೆದ ಮಾರ್ಚ್ ತಿಂಗಳೊಂದರಲ್ಲೇ 6881 ಇನ್‌ವೈಸ್ ಮೂಲಕ 10,73,991 ರೂ. ಆದಾಯ ಬಂದಿತ್ತು. ನಂತರ ಲಾಕ್‌ಡೌನ್ ಪರಿಣಾಮ 68 ಸಾವಿರ ರೂ. ತಲುಪಿತ್ತು. ಬಸ್ ಗಳ ಕಾರ್ಯಾಚರಣೆ ಹೆಚ್ಚಾದಂತೆ ಆದಾಯ ಕೂಡ ಹೆಚ್ಚಲಾರಂಭಿಸಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 11,621 ಇನ್‌ವೈಸ್‌ಗಳು ದಾಖಲಾಗಿದ್ದು, 13,03,266 ರೂ. ಆದಾಯ ಬಂದಿದೆ. ಕೆಎಸ್ ಆರ್‌ಟಿಸಿ-35,18,765, ಕಲ್ಯಾಣ ಕರ್ನಾಟಕ ಸಾರಿಗೆ-11,24,670 ರೂ. ಸೇರಿ ಮೂರು ಸಂಸ್ಥೆಗಳು ಒಟ್ಟು 59,46,701 ರೂ. ಆದಾಯ ಗಳಿಸಿವೆ.