Advertisement

ಎಚ್ಚರಿಕೆಯಿಂದ ನಿಭಾಯಿಸಿ: ಶಾ ಸೂಚನೆ

06:00 AM Sep 18, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಆಪರೇಷನ್‌ ಕಮಲ ನಡೆಸಲು ಕಿಂಗ್‌ಪಿನ್‌ಗಳು, ಜೂಜುಕೋರರ ನೆರವು ಪಡೆಯಲಾಗುತ್ತಿದೆ ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರ ಜತೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ.

Advertisement

ಕುಮಾರಸ್ವಾಮಿಯವರ ಆರೋಪ ರಾಷ್ಟ್ರಮಟ್ಟದ ಸುದ್ದಿಯಾಗಿದೆ. ಬಿಜೆಪಿ ಜತೆ ಕಿಂಗ್‌ಪಿನ್‌ ಹಾಗೂ ಜೂಜುಕೋರರು ಇದ್ದಾರೆ ಎಂದರೆ ಪಕ್ಷದ ಇಮೇಜ್‌ಗೆ ಧಕ್ಕೆಯಾಗುತ್ತದೆ. ಹೀಗಾಗಿ, ಸೂಕ್ಷ್ಮವಾಗಿ ನಿಭಾಯಿಸಿ ಎಂದು ಅಮಿತ್‌ ಶಾ ತಾಕೀತು ಮಾಡಿದರು ಎಂದು ಹೇಳಲಾಗಿದೆ.

ಕುಮಾರಸ್ವಾಮಿಯವರ ಆರೋಪದಿಂದ ಬಿಜೆಪಿಗೆ ಕೆಟ್ಟ ಹೆಸರು ಬರಬಹುದು. ಜತೆಗೆ ಕಿಂಗ್‌ಪಿನ್‌ಗಳು ಎಂಬ ಆರೋಪ ಹೊತ್ತವರು ಯಡಿಯೂರಪ್ಪ ಅವರ ಜತೆ ಸಮಾರಂಭದಲ್ಲಿ ಉಪಸ್ಥಿತರಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಹೀಗಾಗಿ, ಇದು ಪಕ್ಷಕ್ಕೆ ಧಕ್ಕೆಯಾಗಬಹುದು ಎಂದು ರಾಜ್ಯದ ಕೆಲವು ಬಿಜೆಪಿ ನಾಯಕರೇ ಅಮಿತ್‌ ಶಾ ಅವರಿಗೆ ಮಾಹಿತಿ ನೀಡಿದ್ದರು. ಹೀಗಾಗಿ, ಶಾ ಅವರು ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು ಎಂದು ಹೇಳಲಾಗಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಆಂತರಿಕ ಕಚ್ಚಾಟದಿಂದ ಸರ್ಕಾರ ಪತನಗೊಂಡರೆ ಪರ್ಯಾಯ ಬಗ್ಗೆ ಯೋಚಿಸೋಣ. ಆದರೆ, ನಮ್ಮಿಂದಲೇ ಸರ್ಕಾರ ಪತನವಾಯಿತು ಎಂಬ ಕಳಂಕ ಹೊತ್ತುಕೊಳ್ಳುವುದು ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಶಾಸಕಾಂಗ ಪಕ್ಷದ ಸಭೆ
ಈ ಮಧ್ಯೆ, ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಇತ್ತೀಚೆಗೆ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೈಗೊಂಡ ತೀರ್ಮಾನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗುರಿ ಕುರಿತು ಶಾಸಕರಿಗೆ ತಿಳಿಸಲಾಗುವುದು. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಚರ್ಚಿಸಿ ಸಮ್ಮಿಶ್ರ ಸರ್ಕಾರ ಪತನವಾದರೆ ಬಿಜೆಪಿ ಪರ್ಯಾಯ ಸರ್ಕಾರ ರಚನೆ ಮಾಡಲಿದೆ ಎಂದು ಧೈರ್ಯ ತುಂಬಲಿದ್ದಾರೆ ಎನ್ನಲಾಗಿದೆ.

Advertisement

ಜತೆಗೆ ಬಿಜೆಪಿ  ಆರು ಶಾಸಕರು ಕುಮಾರಸ್ವಾಮಿಯವರ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಜೆಡಿಎಸ್‌ ಅಥವಾ ಕಾಂಗ್ರೆಸ್‌ಗೆ ಹೋಗಬಹುದು ಎಂದು ಹೇಳಲಾಗುತ್ತಿರುವ ಶಾಸಕರ ಜತೆಯೂ ಯಡಿಯೂರಪ್ಪ ಪ್ರತ್ಯೇಕವಾಗಿ ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next