Advertisement

ವಸ್ತ್ರ ಸಂಹಿತೆ ಬಟ್ಟೆ ಖರೀದಿಗೂ ಮುನ್ನ…

10:19 AM Jan 02, 2020 | mahesh |

ವಿಂಟರ್‌ ಫ್ಯಾಷನ್‌ ಸೇಲ್‌, ಇಯರ್‌ ಎಂಡ್‌ ಸೇಲ್‌, ನ್ಯೂ ಇಯರ್‌ ಧಮಾಕ…ಆಹಾ, ಶಾಪಿಂಗ್‌ ಮಾಡೋಕೆ ಇದಕ್ಕಿಂತ ಒಳ್ಳೆ ಸಮಯ ಬೇಕೇ? ಹೇಗೂ ಆಕರ್ಷಕ ಡಿಸ್ಕೌಂಟ್‌ ಬೇರೆ ಕೊಡುತ್ತಿದ್ದಾರೆ. ಚಂದ ಕಾಣಿಸಿದ ಡ್ರೆಸ್‌ಗಳನ್ನೆಲ್ಲ ಖರೀದಿಸಿಯೇ ಬಿಡೋಣ… ಹೀಗಂತ ನೀವೂ ಯೋಚಿಸುತ್ತಿದ್ದೀರಾ? ಹಾಗಾದ್ರೆ, ನಿಮ್ಮ ಯೋಚನೆಗೊಂದು ಬ್ರೇಕ್‌ ಹಾಕಿ. ನೀವು ಫ್ಯಾಷನ್‌ ಹೆಸರಿನಲ್ಲಿ ಧರಿಸಿ, ಬಿಸಾಡುವ ಒಂದು ಬಟ್ಟೆಯಿಂದ ಏನೇನೆಲ್ಲಾ ಆಗಬಹುದು ಗೊತ್ತಾ…

Advertisement

ಚಳಿಗಾಲ ಶುರುವಾಗುತ್ತಿದ್ದಂತೆ, ವಿಂಟರ್‌ ಫ್ಯಾಷನ್‌ ಸೇಲ…, ಹಾಟ್‌ ಅಂಡ್‌ ಟ್ರೆಂಡಿ ಫ್ಯಾಷನ್‌ನಂಥ ಜಾಹೀರಾತುಗಳು ನಮ್ಮನ್ನು ಸೆಳೆಯುತ್ತವೆ. ಹತ್ತು ಹಲವು ಆಕರ್ಷಕ ವಾಕ್ಯ, ಚಿತ್ರಗಳನ್ನು ಬಳಸಿ ಎಂಥವರನ್ನೂ ಶಾಪಿಂಗ್‌ಗೆ ಪ್ರೇರೇಪಿಸುವ ಶಕ್ತಿ ಈ ಜಾಹೀರಾತುಗಳಿದೆ. ಅದರಲ್ಲೂ, ಮಹಿಳೆಯರು ಶಾಪಿಂಗ್‌ ಮೋಡಿಗೆ ಮರುಳಾಗದೇ ಇರಲಾರರು.

ಆದರೆ, ನಿಜವಾಗಿಯೂ ನಮಗೆ ಋತುಗಳಿಗೆ ತಕ್ಕಂತೆ ಬಟ್ಟೆ ಖರೀದಿಸುವ ಅನಿವಾರ್ಯ ಇದೆಯೇ? ಒಂದು ವೇಳೆ ಇದ್ದರೂ, ಪ್ರತಿ ವರ್ಷವೂ ಖರೀದಿಸಬೇಕೆ? ಕಳೆದ ಚಳಿಗಾಲದಲ್ಲಿ ಧರಿಸಿದ ಸ್ವೆಟರ್‌ ಅನ್ನು ಈ ಬಾರಿ ಧರಿಸುವುದರಲ್ಲಿ ಏನಾದರೂ ತಪ್ಪಿದೆಯೇ? ನಮ್ಮ ಫ್ಯಾಷನ್‌ ಹುಚ್ಚಿನಿಂದ ಪರಿಸರಕ್ಕೆ ಹಾನಿ ಆಗುತ್ತಿರುವುದರ ಅರಿವು ನಮಗೇಕಿಲ್ಲ?

ಬಟ್ಟೆ, ಬಟ್ಟೆಯಷ್ಟೇ ಅಲ್ಲ
ನಾವು ಬಳಸುವ ಪಾಲಿಸ್ಟರ್‌ ಮತ್ತು ನೈಲಾನ್‌ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ನಲ್ಲಿ ತೊಳೆದಾಗ, ಅಸಂಖ್ಯಾತ ಸೂಕ್ಷ್ಮ ಮೈಕ್ರೋ ಫೈಬರ್‌ಗಳು ಬಿಡುಗಡೆಯಾಗುತ್ತವೆ. ಈ ಮೈಕ್ರೋ ಫೈಬರ್‌ಗಳು ಕಡಲ ಜೀವಿಗಳಾದ ಏಡಿ, ಮೀನು, ಕಡಲ ಆಮೆಗಳ ದೇಹಕ್ಕೆ ಸೇರಿಕೊಳ್ಳುತ್ತವೆ. ಇದು ಈ ಜೀವಿಗಳ ಜೀರ್ಣನಾಳವನ್ನು ನಾಶಪಡಿಸುತ್ತವೆ.

ನಾವು ಬಳಸುವ ವಿಸ್ಕೋಸ್ಸ್ ಹಾಗೂ ರೇಯಾನ್‌ ಉಡುಪುಗಳು ಕೂಡಾ ಪರಿಸರಕ್ಕೆ ವಿಪತ್ತು ತರುತ್ತವೆ. ಕರಗುವ ಪಲ್ಪ… ಅಥವಾ ಬ್ಲೀಚ್‌ ಮಾಡಲಾದ ಕಟ್ಟಿಗೆಯ ಪಲ್ಪ… ಎಂಬುದು ವಿಸ್ಕೋಸ್ಸ್ ಮತ್ತು ರೇಯಾನ್‌ ಬಟ್ಟೆ ತಯಾರಿಸಲು ಉಪಯೋಗಿಸುವ ಬಹು ಮುಖ್ಯ ಕಚ್ಚಾವಸ್ತು. ಈ ಕಚ್ಚಾವಸ್ತುವು ಮರಗಿಡಗಳಿಂದ ತಯಾರಾಗುವುದರಿಂದ, ಇದು ನೇರವಾಗಿ ಅರಣ್ಯ ನಾಶಕ್ಕೆ ಸಂಬಂಧಿಸಿದೆ.

Advertisement

ಇನ್ನು ಉಳಿದಿರುವ ಕಾಟನ್‌ ಬಟ್ಟೆಯೇ ಶ್ರೇಷ್ಠ ಅಂದುಕೊಳ್ಳುವುದೂ ತಪ್ಪೇ. ಏಕೆಂದರೆ, ಕಾಟನ್‌ ಬಟ್ಟೆ ತಯಾರಿಸಲು ಬೇಕಾಗುವ ಹತ್ತಿ ಬೆಳೆಯಲು ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ.

ಫ್ಯಾಷನ್‌ ಮೋಹ ಬೇಡ
ಹಾಗಂತ ಬಟ್ಟೆ ಧರಿಸದೇ ಇರಲು ಸಾಧ್ಯವಿಲ್ಲ, ನಿಜ. ಆದರೆ, “ಫಾಸ್ಟ್ ಫ್ಯಾಷನ್‌’ನ ಮೋಹಕ್ಕೆ ಬಿದ್ದು, ರಾಶಿ ರಾಶಿ ಬಟ್ಟೆ ಖರೀದಿಸುವುದನ್ನು, ಬಳಸಿ ಬಿಸಾಡುವುದನ್ನು ನಿಲ್ಲಿಸಬಹುದಲ್ಲ? ನಮ್ಮ ಹಿರಿಯರು ಒಂದು ಬಟ್ಟೆಯನ್ನು ಮೊದಲು ಉಡುಗೆಯಾಗಿ, ನಂತರ ಕೈ ಒರೆಸುವ ಬಟ್ಟೆಯಾಗಿ, ಆಮೇಲೆ ಅಡುಗೆ ಮನೆಯನ್ನು ಸ್ವತ್ಛವಿಡಲು ಒರೆಸುವ ಬಟ್ಟೆಯಾಗಿ ಉಪಯೋಗಿಸುತ್ತಿದ್ದರು. ಯಾವುದನ್ನೂ ಬಳಸಿ ಬಿಸಾಡುವ ಸಂಸ್ಕೃತಿ ಅವರಲ್ಲಿ ಇರಲಿಲ್ಲ. ಇದನ್ನೇ ಈಗ “ಗ್ರೀನ್‌ ಫ್ಯಾಷನ್‌ ‘ ಅಥವಾ ‘ಸಸ್ಟೇನೇಬಲ್‌ ಫ್ಯಾಷನ್‌’ ಎಂಬೆಲ್ಲಾ ಹೆಸರುಗಳಿಂದ ಕರೆಯುತ್ತಿದ್ದಾರೆ. ನಮ್ಮ ಪೂರ್ವಿಕರು ಸಹಜವಾಗಿ ರೂಢಿಸಿಕೊಂಡು ಬಂದ ಆಚರಣೆಗಳು ಪ್ರಕೃತಿಗೆ ಪೂರಕವಾಗಿಯೇ ಇರುತ್ತಿದ್ದವು. ಇದನ್ನು ನಾವೂ ಮುಂದುವರಿಸಬಹುದಲ್ಲವೇ?

ನಾವೇನು ಮಾಡಬಹುದು?
-ಹರಿದು ಹೋದ ಬಟ್ಟೆಗಳನ್ನು ಎಸೆಯುವುದರ ಬದಲು, ದುರಸ್ತಿಗೊಳಿಸಿ ಮತ್ತಷ್ಟು ದಿನ ಉಪಯೋಗಿಸಿ.
– ಖರೀದಿಸುವಾಗ ಹೆಚ್ಚು ಬಾಳಿಕೆ ಬರುವ, ಉತ್ತಮ ಗುಣಮಟ್ಟದ ಬಟ್ಟೆಗಳನ್ನೇ ಕೊಂಡುಕೊಳ್ಳಿ.
-ಸಸ್ಟೇನೇಬಲ್‌ ಬ್ರ್ಯಾಂಡ್‌ (ಪರಿಸರಕ್ಕೆ ಹಾನಿ ಮಾಡಲಾರದೆ ತಯಾರಿಸಲಾದ ಬಟ್ಟೆ )ಗಳಿಗೆ ಆದ್ಯತೆ ನೀಡಿ.
-ತಾವು ಎಷ್ಟು ಶ್ರೀಮಂತರು ಎಂಬುದನ್ನು ಬಟ್ಟೆಯ ಮೂಲಕ ಪ್ರದರ್ಶಿಸುವ ಅಗತ್ಯವಿಲ್ಲವೆಂದು ಮನಗಾಣಿ.

-ಅನುಪಮಾ ಕೆ. ಬೆಣಚಿನಮರ್ಡಿ

Advertisement

Udayavani is now on Telegram. Click here to join our channel and stay updated with the latest news.

Next