ಕೊಪ್ಪಳ: ತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶವಿದ್ದು, ಲಾಕ್ ಡೌನ್‌ನಿಂದ ಉದ್ಯೋಗ ಕಳೆದುಕೊಂಡ ವಿದ್ಯಾವಂತ ಯುವಕ-ಯುವತಿಯರು ತೋಟಗಾರಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಅವಕಾಶ ಮತ್ತು ಆದಾಯ ಪಡೆಯಬಹುದು ಕಲಬುರಗಿ ವಿಭಾಗೀಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ ಹೇಳಿದರು.
ನಗರದ ತೋಟಗಾರಿಕೆ ಇಲಾಖೆ ಸಭಾಂಗಣದಲ್ಲಿ ದಿ. ಡಾ| ಎಂ.ಎಚ್. ಮರಿಗೌಡರ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ತೋಟಗಾರಿಕೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಈ ಮೊದಲು ತೋಟಗಾರಿಕೆ ಎಂದರೆ ಕೇವಲ ತೆಂಗು-ಮಾವಿನ ಬೆಳೆಗೆ ಮಾತ್ರ ಸೀಮಿತವಾಗಿತ್ತು. ಡಾ| ಎಂ.ಎಚ್. ಮರಿಗೌಡ ಅವರು ತೋಟಗಾರಿಕೆವೈವಿಧ್ಯಮಯ ಬೆಳೆಗಳ ಬಗ್ಗೆ ಬೆಳಕು ಹರಿಸಿ, ರೈತರಿಗೆ ಲಾಭದಾಯಕ ಕೃಷಿಯಲ್ಲಿ ತೋಟಗಾರಿಕೆ ಪ್ರಮುಖ ಪಾತ್ರದ ಬಗ್ಗೆ ತಿಳಿಸಿಕೊಟ್ಟರು. 1965ರಲ್ಲಿ ಕೃಷಿ ಇಲಾಖೆಯಿಂದ ತೋಟಗಾರಿಕೆ ಇಲಾಖೆ ಬೇರ್ಪಡಿಸಿ ಪ್ರತ್ಯೇಕ ಇಲಾಖೆಯನ್ನಾಗಿ ರೂಪಿಸುವಲ್ಲಿ ಡಾ| ಮರಿಗೌಡರ ಪಾತ್ರ ಪ್ರಮುಖವಾಗಿದೆ ಎಂದರು.
ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ತೋಟಗಾರಿಕೆ ಎಂದರೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತ ಎಂಬ ಭಾವನೆಯಿತ್ತು. ಆದರೆ ಸಾಮಾನ್ಯ ರೈತರಿಂದಲೂ ತೋಟಗಾರಿಕೆ ಮಾಡಬಹುದೆಂದು ಡಾ| ಮರಿಗೌಡ ತೋರಿಸಿಕೊಟ್ಟರು. ಆ ಕಾರಣಕ್ಕೆ ಇವರನ್ನು ತೋಟಗಾರಿಕೆ ಪಿತಾಮಹ ಎಂದು ಕರೆಯುತ್ತೇವೆ. ತೋಟಗಾರಿಕೆ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದೆಂಬ ಕಾರಣಕ್ಕೆ ತೋಟಗಾರಿಕೆ ಸಪ್ತಾಹವಾಗಿ ಆಚರಣೆ ಮಾಡಲಾಗುತ್ತಿದೆ. ಇಂದಿನಿಂದ ಆ. 30ರವರೆಗೆ ವಿವಿಧ ತೋಟಗಾರಿಕೆ ವಿಷಯಗಳ ಬಗ್ಗೆ ಪ್ರತಿ ತಾಲೂಕಿನಲ್ಲಿ ಎರಡೆರಡು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ| ಕವಿತಾ ಉಳ್ಳಿಕಾಶಿ ಅಣಬೆ ಕೃಷಿ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಜೀರ್ ಅಹ್ಮದ್ ಸೋಂಪೂರು, ಕೇಂದ್ರ ಸ್ಥಾನಿಕ ಸಹಾಯಕ ಮಂಜುನಾಥ ಲಿಂಗಣ್ಣನವರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.
ತೋಟಗಾರಿಕೆ ವಿಷಯ ತಜ್ಞ ವಾಮನಮೂರ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.