Advertisement

ವೃತ್ತಿ ರಂಗಭೂಮಿಗೆ ಕಾಯಕಲ್ಪ ಅಗತ್ಯ

06:22 PM Mar 18, 2022 | Team Udayavani |

ಹಾವೇರಿ: ಮುಖದಲ್ಲಿ ಗೆರೆ ಮೂಡಿ, ತಲೆ ತುಂಬ ಬಿಳಿ ಕೂದಲು ಬಂದಾಗ ಎಂತಹ ದೊಡ್ಡ ಕಲಾವಿದನೇ ಇರಲಿ ಆತನ ಪ್ರದರ್ಶನ ವ್ಯಕ್ತಿತ್ವಕ್ಕೆ ಕೊನೆಗೊಳ್ಳುತ್ತದೆ. ವೃತ್ತಿ ರಂಗಭೂಮಿ ಇಂದು ಸೋತು ಸುಣ್ಣವಾಗಿದೆ. ಅದಕ್ಕೆ ಕಾಯಕಲ್ಪ ಕೊಡುವುದು ಹೇಗೆಂದು ಚಿಂತಿಸಬೇಕಾಗಿದೆ ಎಂದು ನಾಟಕ ಅಕಾಡೆಮಿಯ 2021ನೇ ಸಾಲಿನ ಜೀವಮಾನ ರಂಗ ಸಾಧನೆ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ದತ್ತಾತ್ರೇಯ ಕುರಹಟ್ಟಿ ಹೇಳಿದರು.

Advertisement

ನಗರದಲ್ಲಿ ಕಲಾವಿದರು, ಸ್ನೇಹಿತರ ಕೂಟದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ತಮ್ಮ ಕುಟುಂಬದ ಸಹಾಯಾರ್ಥ ಪ್ರದರ್ಶನಕ್ಕಾಗಿ ನಾಟಕ ಕಂಪನಿಯ ಮಾಲೀಕರೆದುರು ಅಂಗಲಾಚುವ ವೃದ್ಧ ಕಲಾವಿದರನ್ನು ನೋಡಿ, ರಾತ್ರೋರಾತ್ರಿ ಆರೋಗ್ಯ ಇಲಾಖೆಯ ಸರ್ಕಾರಿ ನೌಕರಿಗಾಗಿ ಹಾವೇರಿಯಿಂದ ಮೂಡಬಿದರಿಗೆ ಓಡಿ ಹೋದೆ. ಅದರಿಂದಾಗಿಯೇ ಎರಡು ಹೊತ್ತಿನ ಊಟ, ನೆಮ್ಮದಿಯ ಜೀವನ ಕಂಡುಕೊಂಡೆ.

1982ರಿಂದ 2006ರವರೆಗೆ 24ವರ್ಷಗಳ ಕಾಲ ಜಿಲ್ಲಾಸ್ಪತ್ರೆ ಮತ್ತು ಹಾನಗಲ್ಲ ತಾಲೂಕು ಆಡೂರು ಗ್ರಾಮದಲ್ಲಿ ಆರೋಗ್ಯ ಸಹಾಯಕನಾಗಿ ಸೇವೆ ಸಲ್ಲಿಸಿದೆ ಎಂದು ತಿಳಿಸಿದರು. ನಾನು ನೂರಾರು ಧಾರಾವಾಹಿಗಳಲ್ಲಿ ನಟಿಸಿರಬಹುದು. ಪ್ರಸಿದ್ಧಿ, ಅವಕಾಶ, ಅನ್ನ ಕೂಡ ಸಿಕ್ಕಿರಬಹುದು. ಆದರೆ ಅದೊಂದು ಯಂತ್ರಭೂಮಿ. ರಂಗಭೂಮಿಯ ತಾಯಿ ಪ್ರೀತಿಯನ್ನು ಅದು ಕೊಟ್ಟಿಲ್ಲ ಎಂದರು.

ಜಾನಪದ ಗಾಯಕ ಗುರುರಾಜ ಹೊಸಕೋಟೆ ಮಾತನಾಡಿ, ಹುಮ್ಮಸ್ಸು ಮತ್ತು ವಯಸ್ಸು ಇದ್ದಾಗ ಪ್ರಶಸ್ತಿಗಳು ಬರಬೇಕು. ಕುರಹಟ್ಟಿ ಅವರಿಗೆ ತಡವಾಗಿ ಬಂದಿದೆ. ಅಂತೂ ಲಭಿಸಿತಲ್ಲ ಎಂದು ಸಮಾಧಾನ ಪಡಬೇಕಿದೆ. ಕಲೆಗಿಂತ ದುಡ್ಡೇ ಇಂದಿನ ಓಟದಲ್ಲಿ ಮುಂದಿದೆ. ಪ್ರತಿಭೆ, ಪುರಸ್ಕಾರಗಳು ಸಾಂಕೇತಿಕವಾಗಿವೆ ಎಂದರು.

ಜ್ಯೂನಿಯರ್‌ ರಾಜಕುಮಾರ್‌ ಖ್ಯಾತಿಯ ಅಶೋಕ ಬಸ್ತಿ ಮಾತನಾಡಿ, ಕುರಹಟ್ಟಿ ಅದ್ಭುತ ಕಂಠಸಿರಿಯ ಸಹಜ ಕಲಾವಿದ. ಹಾವೇರಿ ನೆಲದ ಹೆಮ್ಮೆಯ ಪ್ರತಿಭೆ. ನಾಟಕ ಅಕಾಡೆಮಿಯ ಈ ಪ್ರಶಸ್ತಿಯಿಂದಾಗಿ ಅಕಾಡೆಮಿಗೇ ದೊಡ್ಡ ಗೌರವ ಬಂದಿದೆ ಎಂದರು. ರಾಘವೇಂದ್ರ ಕಬಾಡಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸತೀಶ ಕುಲಕರ್ಣಿ, ಪ್ರಾಚಾರ್ಯ ಕಷ್ಣಪ್ಪ ಕೆ., ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ಶಂಕರ ಸುತಾರ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ವಿರೂಪಾಕ್ಷ ಹಾವನೂರ, ನಿವೃತ್ತ ಪ್ರಾಚಾರ್ಯ ಪಿ.ಸಿ. ಹಿರೇಮಠ, ಪ್ರೊ.ಶೇಖರ ಭಜಂತ್ರಿ, ವಾಗೀಶ ಹೂಗಾರ, ಶಿವಣ್ಣ ಬಣಕಾರ, ಲತಾ ಪಾಟೀಲ, ಸಿ.ಎಸ್‌. ಮರಳಿಹಳ್ಳಿ, ಆರ್‌.ಎಫ್‌. ಕಾಳೆ, ವಿರೂಪಾಕ್ಷ ಲಮಾಣಿ, ಸಿ.ಎಫ್‌. ಹೆಡಿಯಾಲ, ವಸಂತ ಕಡತಿ, ಕರಿಯಪ್ಪ ಹಂಚಿನಮನಿ ಇತರರು ಇದ್ದರು.ಧನಶ್ರೀ ಲಮಾಣಿ ಪ್ರಾರ್ಥಿಸಿ, ಆರ್‌.ಸಿ.ನಂದಿಹಳ್ಳಿ
ಸ್ವಾಗತಿಸಿ, ಎಸ್‌.ಆರ್‌. ಹಿರೇಮಠ ನಿರೂಪಿಸಿ, ಪೃಥ್ವಿರಾಜ ಬೆಟಗೇರಿ ವಂದಿಸಿದರು.

Advertisement

ನಾನು ನೂರಾರು ಧಾರಾವಾಹಿಗಳಲ್ಲಿ ನಟಿಸಿರಬಹುದು. ಪ್ರಸಿದ್ಧಿ, ಅವಕಾಶ, ಅನ್ನ ಕೂಡ ಸಿಕ್ಕಿರಬಹುದು. ಆದರೆ, ಅದೊಂದು ಯಂತ್ರಭೂಮಿ. ರಂಗಭೂಮಿಯ ತಾಯಿ ಪ್ರೀತಿಯನ್ನು ಅದು ಕೊಟ್ಟಿಲ್ಲ.
ದತ್ತಾತ್ರೇಯ ಕುರಹಟ್ಟಿ,
ಜೀವಮಾನ ರಂಗ ಸಾಧನೆ ಪ್ರಶಸ್ತಿ ಪುರಸ್ಕೃತ ಕಲಾವಿದರು

Advertisement

Udayavani is now on Telegram. Click here to join our channel and stay updated with the latest news.

Next