ಯಾದಗಿರಿ: ತಾಯಂದಿರ ಮರಣ ತಡೆಗಟ್ಟಲು ಇಲಾಖೆಯ ಎಲ್ಲಾ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತಾಯಿ ಮರಣ ಪರಿಶೀಲನೆ ಮತ್ತು ಪರಿಶೋಧನೆ ಹಾಗೂ ತಂಬಾಕು ನಿಯಂತ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಿರ್ಲಕ್ಷ್ಯದಿಂದ ಯಾವುದೇ ತಾಯಿ ಮರಣ ಹೊಂದಬಾರದು. ಗ್ರಾಮೀಣ ಪ್ರದೇಶದಲ್ಲಿರುವ ಸಾರ್ವಜನಿಕರಿಗೆ ತಜ್ಞ ವೈದ್ಯರ ಮೂಲಕವೇ ಚಿಕಿತ್ಸೆ ಪಡೆಯಲು ಅಗತ್ಯ ಮಾರ್ಗದರ್ಶನ ನೀಡಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳಲ್ಲಿ ತಂಬಾಕು ಸೇವನೆಯು ಒಂದಾಗಿದೆ. ತಂಬಾಕು ಸೇವನೆ ಜನರನ್ನು ಕೊಲ್ಲುತ್ತಿದೆ ಹಾಗೂ ಪ್ರತ್ಯಕ್ಷ ಧೂಮಪಾನ ಮಾಡುವುದರಿಂದ ಸುಮಾರು ಜನರು ಸಾವಿಗೀಡಾದರೆ ಧೂಮಪಾನ ಮಾಡದವರು ಪರೋಕ್ಷ ಧೂಮಪಾನಕ್ಕೆ ಬಲಿಯಾಗಿ ಸಾವಿಗೀಡಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಜನರಿಗೆ ಅರಿವು ಮೂಡಿಸಿ ತಂಬಾಕು ಮುಕ್ತ ಮಾಡಲು ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಪಾತ್ರ ಬಹುಮುಖ್ಯವಾಗಿದ್ದು, ತಂಬಾಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ಇಂದುಮತಿ ಪಾಟೀಲ್, ಆರ್‌ಸಿಎಚ್‌ಒ ಲಕ್ಷ್ಮೀಕಾಂತ ಒಂಟಿಪೀರ, ಎಬಿಆರ್ಕೆ ಜಿಲ್ಲಾ ನೋಡಲ್ ಅಧಿಕಾರಿ ಡಾ| ಭಗವಂತ ಅನ್ವರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಸಂಜೀವಕುಮಾರ ರಾಯಚೂರಕರ್, ಕುಟುಂಬ ಕಲ್ಯಾಣ ಅಧಿಕಾರಿ ಡಾ| ನಾಗರಾಜ, ಸುರಪುರ ತಾಲೂಕು ವೈದ್ಯಾಧಿಕಾರಿ ವಿ ನಾಯಕ, ಯಾದಗಿರಿ ತಾಲೂಕು ವೈದ್ಯಾಧಿಕಾರಿ ಹಣಮಂತರೆಡ್ಡಿ ಇದ್ದರು.