Advertisement

ವಾಹನ ಚಾಲನೆಯಲ್ಲಿ ಇರಲಿ ಕಾಳಜಿ

11:47 AM Jun 26, 2018 | Team Udayavani |

ಚಿಕ್ಕಮಗಳೂರು: ಜನತೆಗೆ ಕಾನೂನಿನ ಭಯ ಇಲ್ಲದಿರುವುದೇ ದೇಶದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟರು.

Advertisement

ಸಂಚಾರಿ ಪೊಲೀಸ್‌ ಠಾಣಾ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕರಿಗೆ ಚಾಲನಾ ಪರವಾನಗಿ ವಿತರಣೆ ಹಾಗೂ ಸಂಚಾರಿ ನಿಯಮ ಕುರಿತು ತಿಳುವಳಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಅಪಘಾತ ಪ್ರಕರಣಗಳಿಗೆ ಗಂಭೀರವಾದ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅಪಘಾತ ಮಾಡಿದವನಿಗೆ ಕೂಡಲೆ ಜಾಮೀನು ನೀಡಲಾಗುತ್ತದೆ.ಇದರಿಂದಾಗಿ ಜನತೆಗೆ ಕಾನೂನಿನ ಬಗ್ಗೆ ಭಯವಿಲ್ಲದಂತಾಗಿದೆ. ಇತ್ತೀಚೆಗೆ ಭಾರತೀಯ ಮೋಟಾರು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದು ಲೋಕಸಭೆಯಲ್ಲಿ ಮಂಜೂರಾತಿ ಪಡೆದು ಈಗ ರಾಜ್ಯಸಭೆಯಲ್ಲಿ ಬಾಕಿ ಉಳಿದಿದೆ. ಈ ಕಾನೂನು ಜಾರಿಗೆ ಬಂದಲ್ಲಿ ಆಗ ಹೆಚ್ಚಿನ ಶಿಕ್ಷೆ ನೀಡಲು ಅವಕಾಶವಾಗುತ್ತದೆ. ಆಗ ಜನತೆಗೆ ಕಾನೂನಿನ ಬಗ್ಗೆ ಭಯ ಮೂಡಬಹುದು ಎಂದರು.

ನಮ್ಮ ದೇಶದಲ್ಲಿ ಪ್ರತಿ ವರ್ಷ 1.64 ಲಕ್ಷ ಜನರು ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಶೇ.50 ರಷ್ಟು ಅಪಘಾತಗಳು ಚಾಲಕರ ನಿರ್ಲಕ್ಷ್ಯದಿಂದ ನಡೆಯುತ್ತವೆ.20 ರಷ್ಟು ಅಪಘಾತಗಳು ರಸ್ತೆ ಸರಿಯಿಲ್ಲದ ಕಾರಣದಿಂದ ಸಂಭವಿಸುತ್ತದೆ. ಶೇ.15 ರಷ್ಟು ಯಾರ ತಪ್ಪೂ ಇಲ್ಲದೆ ನಡೆಯುತ್ತವೆ. ಉಳಿದ ಶೇ.15 ರಷ್ಟು ಅಪಘಾತಗಳು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ನಡೆಯುತ್ತವೆ. ಇದು ಅತ್ಯಂತ ಅಪಾಯಕಾರಿ.

ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಈ ಬಗ್ಗೆ ಎಲ್ಲರೂ ಗಮನಹರಿಸಬೇಕಿದೆ ಎಂದು ಹೇಳಿದರು. ವಾಹನ ಚಾಲನೆ ಮಾಡುವಾಗ ಅತೀ ಎಚ್ಚರಿಕೆ ವಹಿಸಬೇಕು. ಸ್ಪೀಡ್‌ ಕಿಲ್ಸ್‌ ಯು ಎಂದು ನಾವು ಹೇಳಿದರೆ, ಯುವಕರು ಸ್ಪೀಡ್‌ ಥ್ರಿಲ್ಸ್‌ ಮಿ ಎಂದು ಹೇಳುತ್ತಾರೆ. ಇದು ಸರಿಯಲ್ಲ.ನಮ್ಮ ತಪ್ಪಿನಿಂದ ಬೇರೆಯವರಿಗೆ ತೊಂದರೆಯಾಗುತ್ತದೆ ಎಂಬ ಬಗ್ಗೆ ಜಾಗೃತರಾಗಬೇಕು ಎಂದರು.

Advertisement

ನಾವು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ ಅಪ್‌ಗೆ ಸಾಕಷ್ಟು ಸಮಯ ವ್ಯಯ ಮಾಡುತ್ತೇವೆ. ಚಲನಚಿತ್ರಗಳನ್ನು ನೋಡುತ್ತೇವೆ. ಆದರೆ ಯಾವುದೇ ವ್ಯಕ್ತಿ ಅಪಘಾತಕ್ಕೆ ಸಿಲುಕಿ ಅಥವಾ ಇನ್ನಿತರೆ ಕಾರಣಗಳಿಂದ ತೊಂದರೆಗೆ ಸಿಲುಕಿದ್ದರೆ ಅವರಿಗೆ ಸಹಾಯ ಮಾಡಲು ಸಮಯವಿಲ್ಲ ಎನ್ನುತ್ತೇವೆ. ಇಂದು ಬೇರೆಯವರಿಗೆ ಆಗಿರುವುದು ನಾಳೆ ನಮಗೂ ಆಗಬಹುದು ಎಂಬ ಬಗ್ಗೆ ಯೋಚಿಸಬೇಕು. 

ಅಪಘಾತದಲ್ಲಿ ಸಿಲುಕಿ ಸಮಸ್ಯೆಯಲ್ಲಿರುವ ವ್ಯಕ್ತಿಗೆ ಸಹಾಯ ಮಾಡಬೇಕು. ಕನಿಷ್ಠ ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ ತಿಳಿಸುವ ಕೆಲಸವನ್ನಾದರೂ ಮಾಡಬೇಕು ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಗೀತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ಅಪಘಾತಗಳೂ ಹೆಚ್ಚಾಗುತ್ತಿವೆ. ಸ್ವಂತ ವಾಹನಗಳನ್ನು ಅಗತ್ಯವಿದ್ದಾಗ ಮಾತ್ರ ಬಳಸಬೇಕು. ಉಳಿದಂತೆ ಆದಷ್ಟೂ ಸಾರ್ವಜನಿಕ ವಾಹನಗಳನ್ನು ಬಳಸುವುದು ಅತ್ಯಂತ ಉಪಯುಕ್ತ ಹಾಗೂ ಸುರಕ್ಷಿತ ಕ್ರಮವೂ ಹೌದು ಎಂದರು.

ಈ ಹಿಂದೆ ಅಪಘಾತಗಳು ಸಂಭವಿಸಿದಾಗ ರಸ್ತೆ ಗುಣಮಟ್ಟದಿಂದಿಲ್ಲ. ಗುಂಡಿ ಬಿದ್ದಿವೆ ಎಂದು ಹೇಳುತ್ತಿದ್ದರು. ಈಗ ಗ್ರಾಮೀಣ ಪ್ರದೇಶಗಳ ರಸ್ತೆಗಳೂ ಸೇರಿದಂತೆ ಎಲ್ಲ ರಸ್ತೆಗಳೂ ಅತ್ಯಂತ ಗುಣಮಟ್ಟದಿಂದ ಕೂಡಿದೆ. ಹಾಗಾಗಿ ಎಲ್ಲರೂ ಅತೀ ವೇಗದಿಂದ ವಾಹನ ಚಾಲನೆ ಮಾಡಿ ಅಪಘಾತಗಳು ಹೆಚ್ಚಾಗಲು ಕಾರಣವಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ 50 ಜನರಿಗೆ ವಾಹನ ಚಾಲನಾ ಪರವಾನಗಿಯನ್ನು ವಿತರಿಸಲಾಯಿತು. ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಜಗದೀಶ್‌, ಸಂಚಾರಿ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ರಮ್ಯಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next