Advertisement

ವಾಯು ಮಾಲಿನ್ಯದಿಂದ ಹೃದಯ ಸಂಬಂಧಿ ರೋಗ

12:11 AM Sep 28, 2019 | Lakshmi GovindaRaju |

ಬೆಂಗಳೂರು: ಹೃದಯಕ್ಕೆ ಸಂಬಂಧಿಸಿದ ರೋಗಗಳಿಗೆ ವಾಯುಮಾಲಿನ್ಯವೂ ಪ್ರಮುಖ ಕಾರಣ ಎಂಬ ಅಂಶ ಜಯದೇವ ಹೃದ್ರೋಗ ಸಂಸ್ಥೆಯ ಅಧ್ಯಯನದಲ್ಲಿ ತಿಳಿದುಬಂದಿದ್ದು, ಮಾಲಿನ್ಯ ನಿಯಂತ್ರಣಕ್ಕಾಗಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದರು.

Advertisement

ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಜಯದೇವ ಹೃದ್ರೋಗ ಸಂಸ್ಥೆ ಸಿದ್ಧಪಡಿಸಿದ್ದ “ಭಾರತದ ಯುವಜನರಲ್ಲಿ ಹೃದಯಾಘಾತದ ವ್ಯಾಪಕತೆ’ (ಎಪಿಡೆಮಿಕ್‌ ಆಫ್ ಹಾರ್ಟ್‌ ಅಟ್ಯಾಕ್‌ ಇನ್‌ ಯಂಗ್‌ ಇಂಡಿಯನ್ಸ್‌) ಅಧ್ಯಯನ ವರದಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಾಹನ ಹಾಗೂ ಕಟ್ಟಡ ಕಾಮಗಾರಿಯಿಂದ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಕಟ್ಟಡ ಕಾಮಗಾರಿಯಲ್ಲಿ ಮಾಲಿನ್ಯ ಕಡಿಮೆ ಮಾಡಲು ತಂತ್ರಜ್ಞಾನ ಬಳಸಬೇಕಿದೆ. ಪರಿಸರಕ್ಕೆ ಆದ್ಯತೆ ನೀಡಿದರೆ ಮಾತ್ರ ಮತ ಹಾಕುವುದಾಗಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರೆ, ಸುಧಾರಣೆ ಸಾಧ್ಯ ಎಂದು ಹೇಳಿದರು.

ಪ್ರಸ್ತುತ ಯುವಕರ ಆರೋಗ್ಯದ ಗುಣಮಟ್ಟ ಕುಸಿಯುತ್ತಿದ್ದು, ಜೀವನ ಶೈಲಿ ಬದಲಿಸಿಕೊಳ್ಳಬೇಕಿದೆ. ಯೋಗ, ವ್ಯಾಯಾಮ ಸೇರಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಈಗಾಗಲೇ ನವದೆಹಲಿಯಲ್ಲಿ ವಾಯುಮಾಲಿನ್ಯದಿಂದ ಉಸಿರಾಡಲು ತೊಂದರೆಯಾಗಿದೆ. ಇಂಥ ಪರಿಸ್ಥಿತಿ ಬೆಂಗಳೂರಿಗೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಮಾತನಾಡಿ, ವಿಶ್ವಾದ್ಯಂತ ವಾಯು ಮಾಲಿನ್ಯದಿಂದ ಹೃದಯಕ್ಕೆ ಸಂಬಂಧಿಸಿದ ರೋಗಗಳು ಬರುತ್ತಿದ್ದು, ಟ್ರಕ್‌, ಲಾರಿ, ಕಾರು ಚಾಲಕರು ಹೆಚ್ಚಾಗಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಶೇ.40ರಷ್ಟು ಯುವಕರಿಗೆ ರಕ್ತದೊತ್ತಡ, ಧೂಮಪಾನ, ಮದ್ಯಪಾನ, ಬಿಪಿ, ಮಧುಮೇಹ ಇಲ್ಲ. ಆದರೆ, ವಾಯು ಮಾಲಿನ್ಯದಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬಂದಿವೆ.

ಪ್ರಸ್ತುತ ಮಾಲಿನ್ಯ ನಿಯಂತ್ರಣ ಅಗತ್ಯ ಮತ್ತು ಅನಿವಾರ್ಯವಾಗಿದೆ. ಸಂಚಾರ ದಟ್ಟಣೆಯಲ್ಲಿ 5 ನಿಮಿಷ ನಿಂತು ಗಾಳಿ ಸೇವಿಸಿದರೆ, ಒಂದೇ ಬಾರಿಗೆ 5 ಸಿಗರೇಟ್‌ ಸೇವಿಸಿದಂತೆ. ಆದ್ದರಿಂದ ವಾಯುಮಾಲಿನ್ಯ ಇರುವ ಕಡೆ ಮಾಸ್ಕ್ ಬಳಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯ ರೆಡ್ಡಿ, ಸ್ಟೆಪ್‌ ಸೆಂಟರ್‌ ಫಾರ್‌ ಏರ್‌ ಪಲ್ಯೂಶನ್‌ ಸ್ಟಡೀಸ್‌ನ ಡಾ.ಪ್ರತಿಮಾ ಸಿಂಗ್‌, ಪಾಲಿಕೆ ಸದಸ್ಯ ಗೋವಿಂದ ನಾಯ್ಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

ಮೊದಲು ಶ್ವಾಸಕೋಶ ಬಳಿಕ ಹೃದಯ: ಅಧ್ಯಯನಕ್ಕೊಳಗಾದ 2,400 ಹೃದ್ರೋಗಿಗಳಲ್ಲಿ ಶೇ.26ರಷ್ಟು ಖಾಸಗಿ ವಲಯದ ಉದ್ಯೋಗಿಗಳು ಹಾಗೂ ಶೇ.24ರಷ್ಟು ಚಾಲಕರಾಗಿದ್ದಾರೆ. ಶೇ.15 ಕೃಷಿ, ಶೇ.15 ಕೂಲಿ ಕಾರ್ಮಿಕರು, ಶೇ.12 ತಂತ್ರಜ್ಞರು, ಶೇ.6.50 ಗೃಹಿಣಿಯರು ಹಾಗೂ ಶೇ.2 ಸರ್ಕಾರಿ ಉದ್ಯೋಗಿಗಳಾಗಿದ್ದಾರೆ.

ಚಾಲಕರು ಪ್ರತಿ ದಿನ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುತ್ತಿರುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗಿ ನಂತರ ಹೃದಯ ರೋಗ ಉಂಟಾಗುತ್ತಿದೆ. ತಂಬಾಕು, ಸಿಗರೇಟ್‌ ನಿಷೇಧಿಸಿದರೆ ಮಾತ್ರ ಶೇ.50ರಷ್ಟು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಡಿಮೆಯಾಗಲಿವೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹ ಪ್ರಾಧ್ಯಾಪಕ ರಾಹುಲ್‌ ಪಾಟೀಲ್‌ ತಿಳಿಸಿದರು.

ಮಧುಮೇಹ, ವ್ಯಾಯಾಮ ಇಲ್ಲದ ಜೀವನ ಹೃದಯಾಘಾತಕ್ಕೆ ಸಾಮಾನ್ಯ ಕಾರಣ. ಆದರೆ, ವಾಯು ಮಾಲಿನ್ಯದಿಂದಲೂ ಹೃದಯ ಸಂಬಂಧ ರೋಗಗಳು ಬರುತ್ತಿದ್ದು, ಸಿಗರೇಟ್‌ ಗಾಳಿ ಸೇವಿನೆಯಿಂದಲೂ ಹೃದ್ರೋಗಕ್ಕೆ ಒಳಗಾಗಬೇಕಾಗುತ್ತದೆ ಎಂಬ ಅಂಶ ಸಂಶೋಧನೆಯಿಂದ ಬಯಲಾಗಿದೆ.
-ಡಾ.ಸಿ.ಎನ್‌.ಮಂಜುನಾಥ್‌, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next