Advertisement

ಹೃದಯಾಘಾತಕ್ಕೆ ಮಿಡಿದ ಹೃದ್ರೋಗ ವೈದ್ಯ

08:57 AM Aug 05, 2018 | Team Udayavani |

ಮಂಗಳೂರು: “ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರಿನ ಬಣಕಲ್‌ನ 29 ವರ್ಷದ ಆಟೋ ಚಾಲಕ ಹೃದಯಾಘಾತಕ್ಕೆ ಈಡಾಗಿ ಸಕಾಲಕ್ಕೆ ಚಿಕಿತ್ಸೆಗೆ ಕರೆತರುವುದಕ್ಕೆ ಸಾಧ್ಯವಾಗದೆ ಕಣ್ಣೆದುರೇ ಪ್ರಾಣ ಬಿಟ್ಟಿದ್ದರು. ಆತನ ಇಬ್ಬರು ಪುಟ್ಟ ಮಕ್ಕಳು ದೇಹದ ಎದುರು ಗೋಳಾಡುತ್ತಿದ್ದರೆ, ನಾನೂ ಅತ್ತುಬಿಟ್ಟಿದ್ದೆ!’

Advertisement

ಇದು ರೋಗಿಗಳ ಕಷ್ಟಕ್ಕೆ ಮಿಡಿವ ಮಂಗಳೂರು ಕೆಎಂಸಿಯ ಹೃದ್ರೋಗತಜ್ಞ ಡಾ| ಪದ್ಮನಾಭ ಕಾಮತ್‌ ಅವರ ಮಾತು. ಈ ಕಾರಣಕ್ಕೇ ಅವರು ಹೃದಯಾಘಾತಕ್ಕೀಡಾ ದವರಿಗೆ ತತ್‌ಕ್ಷಣ ಚಿಕಿತ್ಸೆ ಲಭಿಸಿ ಪ್ರಾಣಾಪಾಯದಿಂದ ಪಾರು ಮಾಡುವ ವಿನೂತನ ಆರೋಗ್ಯ ಸೇವೆ ಪ್ರಾರಂಭಿಸುತ್ತಿದ್ದಾರೆ. ಇವರೊಂದಿಗೆ ವೈದ್ಯರ ತಂಡವೇ ಇದೆ. 

ಉಚಿತ ಇಸಿಜಿ ಯೋಜನೆ 
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಹೃದಯ ಸ್ತಂಭನವಾದಾಗ ಇಸಿಜಿ ಮಾಡಿಸಿ, ಹೃದ್ರೋಗ ವೈದ್ಯರಿರುವ ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬವಾಗುತ್ತದೆ. ಇದರಿಂದ ಪ್ರಾಣ ಹಾನಿಯಾಗುತ್ತಿದೆ. ಇದನ್ನು ತಪ್ಪಿಸಲು ಉಚಿತ ಇಸಿಜಿ ಸೇವೆಯನ್ನು ದಾನಿಗಳ ನೆರವಿನೊಂದಿಗೆ ಪ್ರಾರಂಭಿಸುತ್ತಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆಯ 14 ಕಡೆಗಳಲ್ಲಿ ಈ ಕೇಂದ್ರಗಳು ಶುರುವಾಗಲಿವೆ. 

ನೆರವಿಗೆ ಕೈಜೋಡಿಸಿದರು
ಡಾ| ಕಾಮತ್‌ 6 ತಿಂಗಳ ಹಿಂದೆ ಕೆಲವು ವೈದ್ಯರು, ತಂತ್ರಜ್ಞರು, ಆ್ಯಂಬುಲೆನ್ಸ್‌ ಚಾಲಕರನ್ನು ಒಳಗೊಂಡ ವಾಟ್ಸಪ್‌ ಗ್ರೂಪ್‌ ಮಾಡಿದ್ದರು. ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಕೂಡಲೇ ಇಸಿಜಿ ಮಾಡಿ ತುರ್ತು ಚಿಕಿತ್ಸೆ ಕೊಡಿಸಲು ಈ ಗ್ರೂಪ್‌ ಕೆಲಸ ಮಾಡುತ್ತಿದೆ. ಈಗ ಗ್ರೂಪ್‌ನ 256 ಮಂದಿಯಿಂದ ಹಣ ಸಂಗ್ರಹಿಸಿ ತಲಾ 25 ಸಾವಿರ ರೂ. ಬೆಲೆಯ 6 ಇಸಿಜಿ ಕಿಟ್‌ ಖರೀದಿಸಲಾಗಿದೆ. 

Advertisement

ಮೊದಲ ಯಶೋಗಾಥೆ
ಗುರುವಾರ ಮಧ್ಯಾಹ್ನ ವೇಣೂರಿನ 70 ವರ್ಷದ ಮಹಿಳೆಯೊಬ್ಬರಿಗೆ ಎದೆಯುರಿ, ಭೇದಿ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸಮೀಪದ ಕ್ಲಿನಿಕ್‌ಗೆ ಕರೆತಂದು ಇಸಿಜಿ ಮಾಡಿದಾಗ ಹೃದಯಾಘಾತವಾಗಿದ್ದು ಗೊತ್ತಾಯಿತು. 

ಬಳಿಕ ಕೇವಲ ಒಂದೂವರೆ ತಾಸಿನಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆತಂದು ಆಂಜಿಯೋಪ್ಲಾಸ್ಟಿ ಮಾಡಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ಇಸಿಜಿ ಉಚಿತ ಸೇವೆಗೆ ಸಿಕ್ಕಿದ ಮೊದಲ ಯಶಸ್ಸು. 

– ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next