Advertisement

ಜಯದೇವದಲ್ಲಿ ಕಾರ್ಡಿಯಾಕ್‌ ಎಂಆರ್‌ಐ ವಿಭಾಗ

12:09 PM Jul 26, 2018 | Team Udayavani |

ಬೆಂಗಳೂರು: ಬಡ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಾರ್ಡಿಯಾಕ್‌ ಎಂಆರ್‌ಐ ವಿಭಾಗ ತೆರೆಯಲಾಗಿದೆ.

Advertisement

ಬುಧವಾರ ಈ ಸೇವೆಗೆ ಚಾಲನೆ ದೊರೆತ್ತಿದ್ದು, ಇನ್ನೂ ಮುಂದೆ ಹೃದ್ರೋಗ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಲು ಜಯದೇವ ಆಸ್ಪತ್ರೆಗೆ ಆಗಮಿಸಿದವರು ಬೇರೆ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ಗೆ ತೆರಳುವ ಅಗತ್ಯವಿರುವುದಿಲ್ಲ.

ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ತೆರೆಯಲಾಗಿರುವ ಕಾರ್ಡಿಯಾಕ್‌ ಎಂಆರ್‌ಐ ವಿಭಾಗದ ನಿರ್ವಹಣೆ ಹಾಗೂ ಅದರ ಜವಾಬ್ದಾರಿಯನ್ನು ಮ್ಯಾಕ್ಸ್‌ಕೇರ್‌ ಸಂಸ್ಥೆ ಹೊತ್ತಿದೆ. ಇದಕ್ಕೆ ಆಸ್ಪತ್ರೆ ಯಾವುದೇ ಬಂಡವಾಳ ಹೂಡಿಲ್ಲ.

ಎಂಆರ್‌ಐ ವಿಭಾಗದಲ್ಲಿ ಒಟ್ಟು ಎರಡರಿಂದ ಎರಡೂವರೆ ಸಾವಿರ ರೂ.ಗಳಲ್ಲಿ ಮೆದುಳು ಹಾಗೂ ಹೃದಯ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳಬಹುದು. ಈ ಹಣವನ್ನು ನೀಡಲು ಕಷ್ಟವಾಗುವ ಬಡ ರೋಗಿಗಳಿಗೆ ವೈಯಬಿಲಿಟಿ ಗ್ಯಾಪ್‌ ಫ‌ಂಡಿಂಗ್‌ ಮೂಲಕ ಸ್ಕ್ಯಾನಿಂಗ್‌ ಉಚಿತ ಸೇವೆ ನೀಡಲಾಗುವುದು.

ಖಾಸಗಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗೆ 8 ರಿಂದ 10 ಸಾವಿರ ರೂ.ಗಳ ವರೆಗೆ ಶುಲ್ಕ ವಿಧಿಸಲಾಗುತ್ತದೆ. ಈ ಎಂಆರ್‌ಐ ವಿಭಾಗ ಕೇವಲ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಮಾತ್ರ ಸೀಮಿತವಲ್ಲ. ಇತರೆ ಆಸ್ಪತ್ರೆಗಳಲ್ಲಿರುವ ರೋಗಿಗಳು ಕೂಡ ಈ ಎಂಆರ್‌ಐ ಸ್ಕ್ಯಾನಿಂಗ್‌ ಸೇವೆ ಪಡೆದುಕೊಳ್ಳಬಹುದಾಗಿದೆ.

Advertisement

ಮೆದುಳು ಹಾಗೂ ಹೃದಯ ಮಾತ್ರವಲ್ಲದೆ ಇತರೆ ಅಂಗಗಳ ಸ್ಕ್ಯಾನಿಂಗ್‌ ಕೂಡ ಈ ಯಂತ್ರ ಮಾಡಲಿದೆ. ಹೃದಯ ಶಸ್ತ್ರಚಿಕಿತ್ಸೆಯಾದ ನಂತರ ಅವರಿಗೆ ಸೂಕ್ತ ರೀತಿಯಲ್ಲಿ ಮುಂದಿನ ಚಿಕಿತ್ಸೆಗಳ ಬಗ್ಗೆ ವಿವರಿಸಲು ಜಯದೇವ ಆಸ್ಪತ್ರೆ ಪಕ್ಕದಲ್ಲಿ ಹೃದ್ರೋಗಗಳ ಪುನವರ್ಸತಿ ಕೇಂದ್ರ ಶೀಘ್ರದಲ್ಲೇ ತೆರೆಯಲಾಗುವುದು.

ಹೃದ್ರೋಗಗಳ ಪುನವರ್ಸತಿ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ನಂತರ ರೋಗಿಗಳು ಯಾವ ಔಷಧಿಗಳನ್ನು ತೆಗೆದುಕೊಳ್ಳಬೇಕು. ಆಹಾರ ಪದ್ಧತಿ ಹಾಗೂ ಜೀವನಶೈಲಿ ಹೇಗಿರಬೇಕು ಎಂದು ತಿಳಿಸಲಾಗುವುದು.

ವಾಯು ಮಾಲಿನ್ಯದಿಂದ ಹೃದ್ರೋಗ?: ಹೃದ್ರೋಗ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆ ಹೆಚ್ಚಾಗಲು ವಾಯು ಮಾಲಿನ್ಯ ಕೂಡ ಒಂದು ಕಾರಣವಾಗಿದೆ. ಹೀಗಾಗಿ ಹೃದ್ರೋಗ ಸಮಸ್ಯೆಗೆ ವಾಯು ಮಾಲಿನ್ಯ ಯಾವ ರೀತಿ ಕಾರಣವಾಗಿದೆ.

ಹೇಗೆ ವಾಯು ಮಾಲಿನ್ಯ ಹೃದಯದ ಮೇಲೆ ಪರಿಣಾಮ ಬಿರುತ್ತಿದೆ ಎಂದು ಅಧ್ಯಯನ ನಡೆಸಲು ಕಳೆದ ತಿಂಗಳು 500 ಜನ ಸಂಚಾರ (ಟ್ರ್ಯಾಫಿಕ್‌) ಪೋಲಿಸರಿಗೆ ಶ್ವಾಸಕೋಶ, ಹೃದಯ ಹಾಗೂ ಮಧುಮೇಹದ ತಪಾಸಣೆ ಮಾಡಲಾಗಿದೆ. ಇದನ್ನು ಅಧ್ಯಯನಕ್ಕೆ ಕಳುಹಿಸಲಾಗಿದೆ.

ಅಲ್ಲದೆ ಮುಂದಿನ ತಿಂಗಳು 500 ಜನ ಅಟೋರಿಕ್ಷಾ ಚಾಲಕರಿಗೂ ಇದೇ ತಪಾಸಣೆ ನಡೆಸಿ ಅಧ್ಯಯನಕ್ಕೆ ಕಳುಹಿಸಲಾಗುವುದು. ಅಧ್ಯಯನದ ವರದಿ ಬಂದ ನಂತರ ಬೆಂಗಳೂರಿನಲ್ಲಿ ಯಾವ ರೀತಿ ವಾಯು ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಲಾಗುವುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next