Advertisement

ಸಾಕಾನೆಗಳ ಸಹಾಯದಿಂದ ಹುಲಿ ಸೆರೆ

06:21 AM May 20, 2020 | Lakshmi GovindaRaj |

ಗುಂಡ್ಲುಪೇಟೆ: ಒಂದು ತಿಂಗಳಿನಿಂದ ಸತತವಾಗಿ ಜಾನುವಾರುಗಳನ್ನು ಕೊಲ್ಲುತ್ತಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಕುಂದಕೆರೆ ಕಾಡಂಚಿನಲ್ಲಿ ಪ್ರತಿ ನಿತ್ಯ ಜಾನುವಾರುಗಳನ್ನು ಕೊಲ್ಲುತ್ತಿದ್ದ ಹುಲಿಯನ್ನು ಸಾಕಾನೆಗಳ ಸಹಾಯದಲ್ಲಿ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿದಿದ್ದು ಜನತೆ ನಿಟ್ಟುಸಿರು ಬಿಡುವಂತಾಗಿದೆ.

Advertisement

ಕಳೆದ ಒಂದು ತಿಂಗಳಿಂದ ಕಾಡಂಚಿನ ಗ್ರಾಮಗಳಾದ ಕಡಬೂರು, ಚಿರಕನಹಳ್ಳಿ, ಕುಂದಕೆರೆ ಹಾಗೂ ಉಪಕಾರ ಕಾಲೋನಿಗಳಲ್ಲಿ 17ಕ್ಕೂ ಹೆಚ್ಚಿನ ಹಸುಗಳು ಹಾಗೂ ಲೆಕ್ಕವಿಲ್ಲದಷ್ಟು ಕುರಿಗಳನ್ನು ಕೊಂದು ಹಾಕಿದ್ದ ಹುಲಿಯನ್ನು  ಕೆಲವೇ ಗಂಟೆಗಳ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿದಿದೆ. ನಾಗರಹೊಳೆಯಿಂದ ಕರೆತಂದ ದಸರಾ ಆನೆ ಅಭಿಮನ್ಯು ಸೇರಿದಂತೆ ಐದು ಸಾಕಾನೆಗಳ ತಂಡ ಪೊದೆಯಲ್ಲಿ ಅಡಗಿದ್ದ ಹುಲಿಯನ್ನು ಪತ್ತೆಹಚ್ಚಿತು. ಅಭಿಮನ್ಯುವನ್ನು  ಕಂಡ ಹುಲಿ ಬಾಳೆ ತೋಟಕ್ಕೆ ಓಡಿಹೋಗಿತ್ತು.

ಹುಲಿಯನ್ನು ಹಿಂಬಾಲಿಸಿದ ಅರಣ್ಯ ಇಲಾಖೆ ತಂಡ ಸಾಕಾನೆಗಳಿಂದ ಸುತ್ತುವರೆದು ಸಂಜೆ ವೇಳೆಗೆ ಅರವಳಿಕೆ ಮದ್ದು ನೀಡಿದ್ದರೂ ಹುಲಿ ಕಣ್ಮರೆಯಾಗಿತ್ತು. ಬಾಳೆ ತೋಟದಲ್ಲಿ ಅಡಗಿರುವ  ಹುಲಿ ಪತ್ತೆಗೆ ತೀವ್ರ ಹುಡುಕಾಟ ನಡೆಸಿದರೂ ಉಪಯೋಗದೆ  ಮಂಗಳವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಲಾಯಿತು. ಹುಲಿಯ ಹೆಜ್ಜೆ ಗುರುತನ್ನು ಪತ್ತೆ ಮಾಡಿಕೊಂಡು ಪರಮೇಶ್ವರಪ್ಪ ಜಮೀನಿನಲ್ಲಿ ಅಡಗಿದ್ದ ಹುಲಿಯನ್ನು ಪತ್ತೆ  ಹಚ್ಚಲಾಯಿತು.

ಎಸಿಎಫ್ಗಳಾದ ರವಿಕುಮಾರ್‌ ಹಾಗೂ ಪರಮೇಶ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಸೆರೆಯಾದ ಹುಲಿಯ ಕಾಲಿನಲ್ಲಿ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿ  ಅರಣ್ಯಕ್ಕೆ ಬಿಡಲಾಗುವುದು ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next