ಬೆಂಗಳೂರು: ಹಿಂದಿ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಕ್ಯಾಬ್ ಚಾಲಕನ ಮೇಲೆ ಉತ್ತರ ಭಾರತ ಮೂಲದ ಕೆಲ ಪುಂಡರು ಹಲ್ಲೆ ನಡೆಸಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಮಾರಪಾರ್ಕ್ ನಿವಾಸಿ ಹಿಮಾಚಲ ಪ್ರದೇಶ ಮೂಲದ ಪರಮ್ ಮತ್ತು ದೆಹಲಿ ಮೂಲದ ಠಾಕೂರ್ ಬಂಧಿತರು. ಶನಿವಾರ ತಡರಾತ್ರಿ ಕ್ಯಾಬ್‌ನಲ್ಲಿ ಪ್ರಯಾಣಿಸಿದ ಆರೋಪಿಗಳು ಚಾಲಕ ತಮ್ಮೊಂದಿಗೆ ಹಿಂದಿ ಭಾಷೆಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಉಬರ್ ಕಂಪನಿಯ ಕ್ಯಾಬ್ ಚಾಲಕ, ಜೆ.ಪಿ.ನಗರದ ನಿವಾಸಿ ಜಗದೀಶ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ 10 ಗಂಟೆಗೆ ಹೆಬ್ಟಾಳದಿಂದ ಕುಮಾರಪಾರ್ಕ್‌ನಲ್ಲಿರುವ ನಿವಾಸಕ್ಕೆ ಆರೋಪಿ ಪರಮ್ ಉಬರ್ ಕ್ಯಾಬ್ ಬುಕ್ ಮಾಡಿದ್ದಾನೆ. ಅದರಂತೆ ಸ್ಥಳಕ್ಕೆ ಬಂದ ಕ್ಯಾಬ್ ಅನ್ನು ಪರಮ್ ಹತ್ತಿಕೊಂಡಿದ್ದ. ನಿಗದಿತ ಸ್ಥಳ ಬಂದಾಗ ಕಾರು ನಿಲ್ಲಿಸಿದ ಚಾಲಕ ಜಗದೀಶ್, ಇಳಿಯುವಂತೆ ಪರಮ್‌ಗೆ ಹೇಳಿದ್ದರು. ಇದರಿಂದ ಅಸಮಾಧಾನಗೊಂಡ ಪರಮ್, ಮನೆಯವರೆಗೂ ಡ್ರಾಪ್ ವಂತೆ ಹಿಂದಿಯಲ್ಲಿ ಕೇಳಿಕೊಂಡಿದ್ದ.
ಆದರೆ, ಹಿಂದಿ ಅರ್ಥವಾಗದ ಚಾಲಕ ಜಗದೀಶ್, ನಿಗದಿತ ಸ್ಥಳದಲ್ಲೇ ನಿಲ್ಲಿಸಿದ್ದೇನೆ. ಮನೆಯವರೆಗೆ ಡ್ರಾಪ್ ನೀಡಲು ಸಾಧ್ಯವಿಲ್ಲ ಎಂದು ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಕ್ಯಾಬ್ ಚಾಲಕ ಜಗದೀಶ್ ಆತನನ್ನು ಮನೆಗೆ ಬಿಡಲು ಒಪ್ಪಿಕೊಂಡಿದ್ದ.
ಅಷ್ಟರಲ್ಲಿ ಪರಮ್ ತನ್ನ ಸ್ನೇಹಿತರಿಗೆ ಸಂದೇಶ ಕಳುಹಿಸಿ ಎಲ್ಲರನ್ನೂ ಮನೆಗೆ ಬರುವಂತೆ ಸೂಚಿಸಿದ್ದ. ಕ್ಯಾಬ್ ಮನೆ ಬಳಿ ಬಂದು ನಿಲ್ಲುತ್ತಿದ್ದಂತೆ ಕೆಳಗಿಳಿದ ಪರಮ್, “ಹಿಂದಿ ಬಾರದ ಮೇಲೆ ಕ್ಯಾಬ್ ಏಕೆ ಓಡಿಸುತ್ತಿಯಾ?’ ಎನ್ನುತ್ತಾ ಚಾಲಕ ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾನೆ. ಜತೆಗೆ “ಹಿಂದಿಯಲ್ಲಿ ಮಾತನಾಡು’ ಎಂದು ತಾಕೀತು ಮಾಡಿದ್ದಾನೆ. ಅದೂ ಅಲ್ಲದೆ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ.
“ಇದೇ ವೇಳೆ ಸ್ಥಳಕ್ಕೆ ಬಂದ ಆತನ ಸ್ನೇಹಿತರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ,’ ಎಂದು ಜಗದೀಶ್ ಶನಿವಾರ ರಾತ್ರಿ ಶೇಷಾದ್ರಿಪುರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪರಮ್ ಎಂಬಾತನನ್ನು ಶನಿವಾರ ರಾತ್ರಿಯೇ ಬಂಧಿಸಿದ್ದು, ಮತ್ತೂಬ್ಬ ಆರೋಪಿ ಠಾಕೂರ್‌ನನ್ನು ಭಾನುವಾರ ಬಂಧಿಸಲಾಗಿದೆ. ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.