Advertisement

ಕದಿಯುವಾಗ ಕೊಲೆ ಮಾಡಿದ್ದವನ ಸೆರೆ

11:14 AM Jun 25, 2017 | Team Udayavani |

ಬೆಂಗಳೂರು: ಇತ್ತೀಚೆಗೆ ಯಲಹಂಕದ ಉಪನಗರದಲ್ಲಿ ಸರಣಿ ಕಳವು ಮಾಡಲು ಯತ್ನಿಸಿ ಮನೆ ಮಾಲೀಕರೊಬ್ಬರನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಹಾಸನದಲ್ಲಿ ಬಂಧಿಸಿ ಕರೆ ತಂದಿದ್ದಾರೆ.

Advertisement

ಹಾಸನದ ದೊಡ್ಡಗೇಣಿಗೆರೆ ತಾಲೂಕಿನ ನವೀನ್‌ ಕುಮಾರ್‌ (29) ಬಂಧಿತ. ಐಷಾರಾಮಿ ಜೀವನ, ಕುಟುಂಬ ನಿರ್ವಹಣೆಗಾಗಿ ಆರೋಪಿ ಆಗಾಗ್ಗ ನಗರಕ್ಕೆ ಬಂದು ದರೋಡೆ ಮಾಡುತ್ತಿದ್ದ. ಆರೋಪಿ ವಿವಾಹವಾಗಿದ್ದು, ಐದು ಮತ್ತು 6ನೇ ತರಗತಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಮಕ್ಕಳಿದ್ದಾರೆ. 

ಯಾವುದೇ ಕೆಲಸಕ್ಕೆ ಹೋಗದ ಈತ, ಕಳವು ಮಾಡುವುದನ್ನೆ ವೃತ್ತಿಯನ್ನಾಗಿಸಿಕೊಂಡಿದ್ದ. ಪಿಯುಸಿ ವ್ಯಾಸಂಗ ವೇಳೆಯೇ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ. ಬಸ್‌ ಮೂಲಕ ನಗರಕ್ಕೆ ಬರುತ್ತಿದ್ದ ಆರೋಪಿ ಸಂಜೆ ವೇಳೆ ಪಾರ್ಕ್‌ನಲ್ಲಿ ಮಲಗುತ್ತಿದ್ದ. ರಾತ್ರಿಯಾಗುತ್ತಿದ್ದಂತೆ ಮನೆಗಳ ಹಿಂಬದಿ ಬಾಗಿಲು ಮೂಲಕ ಪ್ರವೇಶಿಸಿ, ಕೈಗೆ ಸಿಕ್ಕ ವಸ್ತುಗಳನ್ನು ದೋಚಿ ಪುನಃ ಬಸ್‌ನಲ್ಲೇ ಹಾಸನಕ್ಕೆ ಹೋಗುತ್ತಿದ್ದ.

ಹಣ ಖಾಲಿಯಾಗುತ್ತಿದ್ದಂತೆ ಬಳಿಕ  ನಗರಕ್ಕೆ ಬಂದು ದರೋಡೆ ಮಾಡುತ್ತಿದ್ದ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇಷ್ಟೇ ಅಲ್ಲದೇ, ಈ ಹಿಂದೆ 20ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪ್ರಕರಣವೊಂದರಲ್ಲಿ ಮೈಸೂರಿನ ಜೈಲು ಸೇರಿದ್ದ. ಕಳೆದ ನವೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ್ದ ಆರೋಪಿ, ಮತ್ತೆ ದರೋಡೆ ಕೃತ್ಯಗಳಲ್ಲಿ ತೊಡಗುತ್ತಿದ್ದ.

ಸಿಕ್ಕಿದ್ದು ಹೀಗೆ?
ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಆರೋಪಿಗಳ ಬೆರಳಚ್ಚು ಹಾಗೂ ಕೃತ್ಯ ನಡೆದ ಸ್ಥಳದಲ್ಲಿನ ಆರೋಪಿಯ ಬೆರಳಚ್ಚನ್ನು ಪರಿಶೀಲನೆ ನಡೆಸಲಾಯಿತು. ಈ ವೇಳೆ ಕೃತ್ಯ ಎಸಗಿದ ಸ್ಥಳದಲ್ಲಿನ ಬೆರಳಚ್ಚು, ಈ ಹಿಂದೆ ದರೋಡೆಗೆ ಯತ್ನಿಸಿದ ಬೆರಳಚ್ಚು ಹೊಂದಾಣಿಕೆಯಾಗುತ್ತಿತ್ತು. ಅಲ್ಲದೆ, 2008 ಮತ್ತು 2011ರಲ್ಲಿ ಯಲಹಂಕ ಉಪನಗರ ಪೊಲೀಸರಿಗೆ ಕಳವು ಪ್ರಕರಣವೊಂದರಲ್ಲಿ ಸಿಕ್ಕಿ ಬಿದಿದ್ದ. ಈ ಆಧಾರದ ಮೇಲೆ ಆರೋಪಿಯನ್ನು ಹಾಸನದಲ್ಲಿ ಬಂಧಿಸಿ ನಗರಕ್ಕೆ ಕರೆ ತರಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next