ಬೆಂಗಳೂರು: ಕ್ಯಾಬ್‌ನಲ್ಲಿ ಮನೆಗೆ ಹೋಗುತ್ತಿದ್ದ ಗಗನಸಖಿ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದ ರೌಡಿಶೀಟರ್‌ನನ್ನು ಯಶವಂತಪುರ ಮತ್ತು ಕೊಡಿಗೇಹಳ್ಳಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶುಕ್ರವಾರ ಬಂಧಿಸಿದ್ದಾರೆ.
ಜಾಲಹಳ್ಳಿ ನಿವಾಸಿ ರೌಡಿಶೀಟರ್ ಅಜಯ್ ಕುಮಾರ್ ಅಲಿಯಾಸ್ ಜಾಕಿ (34) ಬಂಧಿತ. ಆರೋಪಿ ಜಾಲಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಆತನ ವಿರುದ್ಧ ಎರಡು ಕೊಲೆ ಹಾಗೂ ದರೋಡೆ ಪ್ರಕರಣಗಳಿವೆ. ಈ ನಡುವೆ ಮೇ 13ರಂದು ಜಾಲಹಳ್ಳಿ ನಿವಾಸಿ, 27 ವರ್ಷದ ಗಗನಸಖಿ ಮೇಲೆ ಚಾಕುವಿನಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದ.
ಪಿಯುಸಿ ಅನುತ್ತೀರ್ಣನಾಗಿರುವ ಆರೋಪಿ, ಈ ಮೊದಲು ಆನ್‌ಲೈನ್ ಮಾರಾಟ ಸಂಸ್ಥೆಯಲ್ಲಿ ಕೆಲಸಕ್ಕಿದ್ದ. ಈ ವೇಳೆ ಆರೋಪಿಗೆ ಗಗನಸಖಿಯ ಸಹೋದರಿ ಪ್ರಿಯಾಳ (ಹೆಸರು ಬದಲಿಸಲಾಗಿದೆ) ಪರಿಚಯವಾಗಿತ್ತು. ಈ ನಡುವೆ ಹುಸೇನ್ ಎಂಬಾತ ಪ್ರಿಯಾಗೆ ನಿತ್ಯ ಕಿರುಕುಳ ನೀಡುತ್ತಿದ್ದ ಇದನ್ನು ಆಕೆ ಜಾಕಿ ಬಳಿ ಹೇಳಿಕೊಂಡಿದ್ದಳು.
ಬಳಿಕ ಇಬ್ಬರೂ ಸಂಚು ರೂಪಿಸಿ, 2012ರಲ್ಲಿ ಹುಸೇನ್‌ನನ್ನು ಕೊಲೆಗೈದಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಜಾಕಿ, ಕೆಲ ವರ್ಷಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಂದವನೇ ಗಗನಸಖಿಕೆ ಕಿರುಕುಳ ನೀಡಲು ಆರಂಭಿಸಿದ್ದ. ಈ ಸಂಬಂಧ ಗಗನಸಖಿ ಪೊಲೀಸರಿಗೆ ದೂರು ನೀಡಿದ್ದರು.
ಅದಕ್ಕೆ ಆಕ್ರೋಶಗೊಂಡಿದ್ದ ಆರೋಪಿ, ಮೇ 12ರಂದು ಸಂಜೆ 4.30ರ ಸುಮಾರಿಗೆ, ಹೆಬ್ಟಾಳ ಮೇಲ್ಸೇತುವೆ ಸಿಗ್ನಲ್‌ನಲ್ಲಿ ಗಗನಸಖಿ ಪ್ರಯಾಣಿಸುತ್ತಿದ್ದ ಕ್ಯಾಬ್‌ನೊಳಗೆ ನುಗ್ಗಿ ಚಾಕುವಿನಿಂದ ಆಕೆಯ ಮುಖ ಹಾಗೂ ಹೊಟ್ಟೆಗೆ ಚುಚ್ಚಿದ್ದ.
ನಂತರ ತನ್ನ ವಿರುದ್ಧ ದಾಖಲಿಸಿರುವ ಹಳೇ ಪ್ರಕರಣಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಹಲ್ಲೆ ತಡೆಯಲು ಮುಂದಾದ ಕ್ಯಾಬ್ ಚಾಲಕನ ಮೇಲೂ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದರು.