ಬೆಂಗಳೂರು: ಅಪಹರಣ, ಕೊಲೆ ಬೆದರಿಕೆ ಆರೋಪ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮಾಜಿ ಕಾರ್ಪೋರೇಟರ್ ನಾಗರಾಜುವಿನ ಸಹಚರರಾದ ಮೂವರು ಆರೋಪಿಗಳು ಕಡೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವಿಲ್ಸನ್ ಗಾರ್ಡ್‌ನ್ ನಿವಾಸಿ ಶರವಣ, ತಲಘಟ್ಟಪುರದ ಶ್ರೀನಿವಾಸ್, ಬೌನ್ಸರ್ ಕೆಲಸ ಮಾಡಿಕೊಂಡಿದ್ದ ಜಯ್ ಬಂಧಿತರು. ಪ್ರಕರಣದ ತನಿಖೆ ಜವಾಬ್ದಾರಿ ವಹಿಸಿಕೊಂಡಿರುವ ಕೆ.ಆರ್. ಪುರಂ ವಿಭಾಗದ ಎಸಿಪಿ ರವಿಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ.
ವಿಚಾರಣೆ ವೇಳೆ ನಾಗನ ಜತೆ ಸೇರಿಕೊಂಡು ನಡೆಸಿದ ಅಕ್ರಮಗಳು ಹಾಗೂ ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಸಂಬಂಧದ ದಾಖಲೆಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಪ್ರಕರಣದ ಐದನೇ ಆರೋಪಿ ಯಾಗಿರುವ ವಿ. ನಾಗರಾಜು ಹಾಗೂ ಇನ್ನಿತರ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಪ್ರಕರಣದ ಮೊದಲ ಆರೋಪಿಯಾಗಿರುವ ಶರವಣ ಟಾಟಾ ಏಸ್ ಗಾಡಿ ಓಡಿಸಿಕೊಂಡಿದ್ದ. ನಾಗನ ಪರಿಚಯವಾದ ಬಳಿಕ ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಹಳೇ ನೋಟುಗಳನ್ನು ಹೊಂದಿದ್ದ ಗಿರಾಕಿಗಳನ್ನು ಕರೆದುಕೊಂಡು ಬರುತ್ತಿದ್ದ ಶರವಣ ನಾಗನಿಗೆ ಪರಿಚಯ ಮಾಡಿಸಿಕೊಟ್ಟು ದಂಧೆಗೆ ನೆರವಾಗುತ್ತಿದ್ದ. ಈ ಕೆಲಸಕ್ಕೆ 20ರಿಂದ ಮೂವತ್ತು ಪರ್ಸೆಂಟ್ ಕಮಿಷನ್ ಪಡೆದುಕೊಳ್ಳುತ್ತಿದ್ದ. ಅದೇ ರೀತಿ ಮತ್ತೋರ್ವ ಆರೋಪಿ ಶ್ರೀನಿವಾಸ್ ಹಾಗೂ ಬೌನ್ಸರ್ ಜಯ್ ಕೂಡ ನಾಗನ ಅಕ್ರಮ ದಂಧೆಗಳಿಗೆ ಸಾಥ್ ನೀಡುತ್ತಿದ್ದರೆಂದು ಅಧಿಕಾರಿ ಯೊಬ್ಬರು ತಿಳಿಸಿದರು.
ಚುನಾವಣೆಯಲ್ಲಿ ಸೋತಿದ್ದ: ತಲಘಟ್ಟಪುರದ ಶ್ರೀನಿವಾಸ್ ಸ್ವಂತ ವ್ಯವಹಾರ ನಡೆಸಿಕೊಂಡು ಪ್ರಭಾವಿ ರಾಜಕೀಯ ವ್ಯಕ್ತಿಗಳ ಸಂಪರ್ಕ ಇಟ್ಟುಕೊಂಡಿದ್ದಾನೆ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಸುಧಾಮನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಹಾಲಿ ಕಾಂಗ್ರೆಸ್ ಶಾಸಕ ರೊಬ್ಬರ ಮಗನ ವಿರುದ್ಧ ಸ್ಪರ್ಧಿಸಿದ್ದ ಶ್ರೀನಿವಾಸ್, 300 ಮತಗಳ ಅಂತರದಿಂದ ಪರಾಭವಗೊಂಡಿದ್ದ. ನಾಗರಾಜುವಿನ ಜತೆ ಹಳೇ ಸ್ನೇಹ ಹೊಂದಿರುವ ಶ್ರೀನಿವಾಸ್, ಬೆದರಿಕೆ, ಸುಲಿಗೆ, ಅಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿಯಿದ್ದು ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಜಾಮೀನು ಅರ್ಜಿ ವಿಚಾರಣೆ ಪೂರ್ಣ
ಮತ್ತೂಂದೆಡೆ ನಾಗ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಪೂರ್ಣ ಗೊಳಿಸಿರುವ ಸೆಷನ್ಸ್ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ವಿಚಾರಣೆ ವೇಳೆ ಸರ್ಕಾರಿ ಪರ ವಕೀಲರು ನಾಗನಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಕೋರಿದರು. ಕಳೆದ 30 ದಿನಗ ಳಿಂದ ನಾಗರಾಜು ತಲೆಮರೆಸಿಕೊಂಡಿದ್ದಾನೆ. 1981ರಿಂದಲೂ ಆತನ ವಿರುದ್ಧ ದೂರುಗಳು ಬರುತ್ತಿವೆ. ಸಮಾಜ ಸೇವೆಯ ಬೋರ್ಡ್ ಹಾಕಿಕೊಂಡು ಅಕ್ರಮಗಳಲ್ಲಿ ಭಾಗಿಯಾಗಿದ್ದಾನೆ.
ಪೊಲೀಸರ ದಾಳಿ ವೇಳೆ ಆತನ ಮನೆಯಲ್ಲಿ ಸಿಕ್ಕಿದ ಭಾರೀ ಪ್ರಮಾಣದ ಹಣ ಎಲ್ಲಿಂದ ಬಂದಿತ್ತು. ವಿಡಿಯೋದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಆರೋಪ ಮಾಡಿದ್ದಾನೆ. ಹೀಗಾಗಿ ಆತನನ್ನು ಬಂಧಿಸಿ ಸಮಗ್ರ ತನಿಖೆ ನಡೆಸಬೇಕಿದೆ, ಯಾವುದೇ ಕಾರಣಕ್ಕೂ ಜಾಮೀನು ನೀಡ ಬಾರದು ಎಂದು ಬಲವಾಗಿ ಪ್ರತಿಪಾದಿಸಿದರು. ಸರ್ಕಾರಿ ಪರ ವಕೀಲರು ಹಾಗೂ ನಾಗನ ವಕೀ ಲರ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ವಿಚಾರಣೆ ಪೂರ್ಣಗೊಳಿಸಿ ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿ ವಿಚಾರಣೆ ಮುಂದೂಡಿತು.