ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನವೇ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ (ಸೆಪ್ಟೆಂಬರ್18) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರನ್ನು ಭೇಟಿಯಾಗಿ ಕ್ಯಾಪ್ಟನ್ ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಿಂಚಣಿ ಖಾತೆಗೆ 52 ಕೋಟಿ ರೂ.ಜಮಾ | ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ ರೈತ
ಶನಿವಾರ ಸಂಜೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿರುವುದಾಗಿ ಈ ಮೊದಲು ವರದಿಯಾಗಿತ್ತು.
ಪಂಜಾಬ್ ಕಾಂಗ್ರೆಸ್ ನಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ನಡೆಸಲು ಎಐಸಿಸಿ ನಿರ್ಧರಿಸಿತ್ತು. ಅಲ್ಲದೇ ಶಾಸಕಾಂಗ ಸಭೆಯಲ್ಲಿ ನೂತನ ನಾಯಕನ ಆಯ್ಕೆ ಮಾಡುವ ಬಗ್ಗೆ ಪಂಜಾಬ್ ನ ಹಲವು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವರದಿಯಾಗಿತ್ತು.
ಸೋನಿಯಾ ಗಾಂಧಿ ಮತ್ತು ಅಮರಿಂದರ್ ಸಿಂಗ್ ನಡುವೆ ನಡೆದ ದೂರವಾಣಿ ಸಂಭಾಷಣೆಯಲ್ಲಿ, ಹೈಕಮಾಂಡ್ ನಿರ್ದೇಶನದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೋನಿಯಾ ಸೂಚಿಸಿರುವುದಾಗಿ ಮೂಲಗಳು ತಿಳಿಸಿದ್ದವು. ಈ ಹಿನ್ನೆಲೆಯಲ್ಲಿ ಕ್ಯಾ.ಅಮರಿಂದರ್ ಸಿಂಗ್ ಇಂದು ಸಂಜೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿತ್ತು.
ಅಮರಿಂದರ್ ಸಿಂಗ್ ಪತ್ರಿಕಾಗೋಷ್ಠಿ:
ಪಂಜಾಬ್ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರಿಗೆ ಕ್ಯಾಪ್ಟರ್ ಅಮರಿಂದರ್ ಸಿಂಗ್ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ತಮ್ಮ ರಾಜೀನಾಮೆ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದರು.
ತನಗೆ ಪಕ್ಷದಲ್ಲಿ ಅವಮಾನ ಮಾಡಲಾಗಿದೆ. ಈ ವಿಚಾರದ ಬಗ್ಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಬಳಿಯೂ ಚರ್ಚಿಸಿದ್ದೆ. ಸತತ ಮೂರು ಬಾರಿ ಅವಮಾನ ಮಾಡಲಾಗಿದ್ದು, ನಾನು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಕ್ಯಾಪ್ಟರ್ ಸೋನಿಯಾ ಗಾಂಧಿ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದ ವೇಳೆ ತಿಳಿಸಿರುವುದಾಗಿ ಆಪ್ತಮೂಲಗಳು ಹೇಳಿರುವುದಾಗಿ ಐಎಎನ್ ಎಸ್ ವರದಿ ಮಾಡಿತ್ತು.