Advertisement

ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ..?

08:58 AM Jul 03, 2021 | ಕೀರ್ತನ್ ಶೆಟ್ಟಿ ಬೋಳ |

ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ನಾಯಕ ಯಾರು ಎಂದು ಕೇಳಿದರೆ ಹೆಚ್ಚಿನವರ ಉತ್ತರ ಮಹೇಂದ್ರ ಸಿಂಗ್ ಧೋನಿ. ಕಾರಣ ಧೋನಿ ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದಿದ್ದಾರೆ. ಅದಕ್ಕೆ ಅವರು ಶ್ರೇಷ್ಠ ಎನ್ನುತ್ತಾರೆ ಹಲವರು. ಹಾಗಾದರೆ ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ? ಐಸಿಸಿ ಟ್ರೋಫಿ ಗೆಲ್ಲಲಾಗದವರು ಯಶಸ್ವಿ ನಾಯಕರಲ್ಲವೇ?

Advertisement

ಕಳೆದ ಐದಾರು ವರ್ಷಗಳಿಂದ ವಿಶ್ವ ಕ್ರಿಕೆಟ್ ನಲ್ಲಿ ವಿಜೃಂಭಿಸುತ್ತಿರುವ ಭಾರತ ತಂಡ ಹಲವಾರು ಸರಣಿಗಳನ್ನು ಜಯಿಸಿದೆ. ಅಸಾಧ್ಯವೆನಿಸುವ ವಿದೇಶಿ ಸರಣಿಗಳಲ್ಲಿ ಜಯಭೇರಿಯಾಗಿದೆ. ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಅತ್ಯಂತ ಬಲಿಷ್ಠ ತಂಡ ಯಾವುದಾದರೂ ಇದ್ದರೆ ಅದು ಟೀಂ ಇಂಡಿಯಾ. ಆದರೆ ಕಳೆದ ಹತ್ತು ವರ್ಷಗಳಿಂದ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಸೆಮಿ ಫೈನಲ್ , ಫೈನಲ್ ಹಂತ ತಲುಪಿದರೂ ಟ್ರೋಫಿ  ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ.

ವಿಶ್ವ  ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸೋಲನುಭವಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಕಾವು ಪಡೆದಿದೆ. ವಿರಾಟ್ ಕೊಹ್ಲಿಗೆ ಟ್ರೋಫಿ ಗೆದ್ದು ಗೊತ್ತಿಲ್ಲ. ಆತನನ್ನು ಕೆಳಗಿಳಿಸಿ ಒಂದು ಮಾದರಿಗೆ ರೋಹಿತ್ ಶರ್ಮಾಗೆ ನಾಯಕತ್ವ ಕೊಡಿಸಬೇಕು ಎಂಬ ಕೂಗುಗಳು ಕೇಳಿ ಬರುತ್ತಿದೆ. ಹಾಗಾದರೆ ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ?

ಕೆಲ ದಿನಗಳ ಹಿಂದೆ ಪಾಕಿಸ್ಥಾನದ ಮಾಜಿ ನಾಯಕ ಸಲ್ಮಾನ್ ಭಟ್ ನಾಯಕತ್ವದ ಬಗ್ಗೆ ಒಂದು ಮಾತು ಹೇಳಿದ್ದರು. “ನೀವು ಎಷ್ಟೇ ಉತ್ತಮ ನಾಯಕನಾಗಿದ್ದರೂ, ಎಷ್ಟೇ ಉತ್ತಮವಾಗಿ ತಂಡವನ್ನು ಕಟ್ಟಿದ್ದರೂ, ನೀವು ಟ್ರೋಫಿ ಗೆಲ್ಲದೇ ಹೋದರೆ ಜನರು ನಿಮ್ಮನ್ನು ನೆನಪಿನಲ್ಲಿ ಇಟ್ಟು ಕೊಳ್ಳುವುದಿಲ್ಲ” ಸಲ್ಮಾನ್ ಭಟ್ ಹೀಗಂದಿದ್ದು ವಿರಾಟ್ ಕೊಹ್ಲಿಯ ಬಗ್ಗೆ. ಇದು ಸತ್ಯ ಕೂಡಾ. ಯಾಕೆಂದರೆ ಭಾರತ ಕಂಡ ಉತ್ತಮ ನಾಯಕ ಯಾರು ಎಂದು ಕೇಳಿದರೆ ಬಹುತೇಕರು ಹೇಳುವುದು ಧೋನಿಯ ಬಗ್ಗೆ ಮಾತ್ರ. ಆದರೆ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ನೆನಪಾಗುವುದೇ ಇಲ್ಲ. ಯಾಕೆಂದರೆ ಅವರು ಐಸಿಸಿ ಟ್ರೋಫಿ ಗೆದ್ದಿಲ್ಲ!

Advertisement

ಸೌರವ್ ಗಂಗೂಲಿ ಮತ್ತು ಗ್ರೇಗ್ ಚಾಪೆಲ್ ನಡುವಿನ ಕಿತ್ತಾಟದ ಕಾರಣದಿಂದ ರಾಹುಲ್ ದ್ರಾವಿಡ್ ತಂಡವನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಎದುರಾಗಿತ್ತು. ತಂಡದ ಪರಿಸ್ಥಿತಿ ಹದಗೆಟ್ಟಿತ್ತು. ಇಂತಹ ಸಮಯದಲ್ಲಿ ತಂಡವನ್ನು ಮುನ್ನಡೆಸಿದವರು ದ್ರಾವಿಡ್. ದೊಡ್ಡ ಟ್ರೋಫಿ ಗೆಲ್ಲದೇ ಇರಬಹುದು, ಆದರೆ ವಿದೇಶಿ ಸರಣಿಯಲ್ಲಿ ಭಾರತದ ಸಾಧನೆ ದ್ರಾವಿಡ್ ನಾಯತ್ವದ ಸಮಯದಲ್ಲೇ ಉತ್ತಮವಾಗಿದ್ದು. ದ್ರಾವಿಡ್ ನಾಯಕತ್ವದಲ್ಲೇ ಭಾರತ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಗೆದ್ದಿದ್ದು ( ಅದೇ ಕೊನೆ).  ಏಕದಿನ ಪಂದ್ಯಗಳಲ್ಲಿ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದು ಇದೇ ದ್ರಾವಿಡ್. ಹಲವರಿಗೆ ದ್ರಾವಿಡ್ ಉತ್ತಮ ನಾಯಕನಲ್ಲ. ಯಾಕೆಂದರೆ ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ 2007ರ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ, ಟ್ರೋಫಿ ಗೆದ್ದಿಲ್ಲ!

ದಕ್ಷಿಣ ಆಫ್ರಿಕಾ ತಂಡ ಕಂಡ ಶ್ರೇಷ್ಠ ನಾಯಕ ಗ್ರೇಮ್ ಸ್ಮಿತ್. ಈ ಆಜಾನುಬಾಹು ಎಡಗೈ ಆಟಗಾರ ಹರಿಣಗಳ ತಂಡವನ್ನು 150 ಏಕದಿನ ಮತ್ತು 92 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇವರ ನಾಯಕತ್ವದಲ್ಲಿ ದ.ಆಫ್ರಿಕಾ ತಂಡ ಸೋಲನುಭವಿಸಿದ್ದು ಕೇವಲ 51 ಏಕದಿನ ಪಂದ್ಯಗಳಲ್ಲಿ ಮಾತ್ರ. ಇವರ ನಾಯಕತ್ವದಲ್ಲೇ ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್ ನ ಅಗ್ರ ಸ್ಥಾನಿಯಾಗಿದ್ದು. ಆದರೂ ಗ್ರೇಮ್ ಸ್ಮಿತ್ ಗೆ ಯಾವುದೇ ಐಸಿಸಿ ಕೂಟ ಜಯಿಸಲಾಗಲಿಲ್ಲ!

ಶ್ರೀಲಂಕಾ ಕ್ರಿಕೆಟ್ ನ ದಿಗ್ಗಜ, ಬುದ್ದಿವಂತ ನಾಯಕ ಎಂಬ ಖ್ಯಾತಿಯ ಮಹೇಲಾ ಜಯವರ್ಧನೆಗೆ ಕೂಡಾ ಒಂದೇ ಒಂದೇ ಐಸಿಸಿ ಟ್ರೋಫಿ ಗೆಲ್ಲಲಾಗಲಿಲ್ಲ. ಏಕದಿನ ಕ್ರಿಕೆಟ್ ನಲ್ಲಿ 59.9 ಜಯ ಪ್ರತಿಶತ ಹೊಂದಿದ್ದ ಜಯವರ್ಧನೆಗೆ, 2007ರಲ್ಲಿ ತನ್ನ ನಾಯಕತ್ವದಲ್ಲಿ ವಿಶ್ವ ಕಪ್ ಫೈನಲ್ ಗೇರಿದರೂ ಕಪ್ ಮಾತ್ರ  ಮರೀಚಿಕೆಯಾಗಿತ್ತು.

ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಪಾಕಿಸ್ಥಾನದ ಇಂಝಮಾಮ್ ಉಲ್ ಹಕ್, ವಾಸೀಂ ಅಕ್ರಮ್.. ಹೀಗೆ ಹಲವು ನಾಯಕರು ಐಸಿಸಿ ಕಪ್ ಗೆಲ್ಲಲು ವಿಫಲರಾಗಿದ್ದರು. ಆದರೆ ಇವರು ಉತ್ತಮ ನಾಯಕರಲ್ಲವೇ? ಯಶಸ್ವಿ ನಾಯಕತ್ವವೆಂದರೆ ಟ್ರೋಫಿ ಗೆಲ್ಲುವುದು ಮಾತ್ರವೇ..?

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next