Advertisement
“ಸಾವಯವ ಕೃಷಿಯಲ್ಲಿ ಯಾಕೆ ಆದಾಯ ಇಲ್ಲ ಮೇಡಮ್ಮೊರೇ….ನಾವು ರೈತರು, ತಿನ್ನೋ ಆಹಾರದಲ್ಲಿ ವಿಷ ಹಾಕಕ್ಕಾಯ್ತದಾ… ಈ ಮಣ್ಣ ಹಾಳು ಮಾಡ್ಕಂಡ್ರೆ ನಮ್ಮ ಮಕ್ಕಳು ಏನು ತಿಂತವೆ ಹೇಳಿ?’ ಎಂದು ಒಬ್ಬ ಪರಿಸರವಾದಿಗಿಂತಲೂ ತೀವ್ರವಾಗಿ ಪ್ರಶ್ನಿಸುತ್ತ ತಮ್ಮ 10 ಎಕರೆ ಜಮೀನಿನಲ್ಲಿ ಅಡ್ಡಾಡುತ್ತ ನಮ್ಮನ್ನೂ ಓಡಾಡಿಸಿದರು ಕಮಲಮ್ಮ. ಇವು ನಮ್ಮ ಮಾವ ನೆಟ್ಟ ಮಾವಿನ ಮರಗಳು. ಇದು ನಾನೇ ಬೆಳೆಸಿದ ರೇಷ್ಮೆ ಗಿಡಗಳು…ಎಂದು ಪಟಪಟಾಂತ ಮಾತನಾಡುತ್ತ, ಅಷ್ಟೇ ಚಟುವಟಿಕೆಯಿಂದ ಇಡೀ ಜಮೀನನ್ನು ಸುತ್ತಾಡಿಸಿದರು ಕಮಲಮ್ಮ.
Related Articles
ನಮ್ಮದು ಪಿತ್ರಾರ್ಜಿತ ಆಸ್ತಿ. ಹತ್ತು ಎಕರೆ ಜಮೀನು ಐತೆ. ಮೊದಲು ರಾಗಿ, ಭತ್ತ, ಮಾವು, ಸೀತಾಫಲಗಳೆಲ್ಲ ಇದ್ದವು. ಆಗಲೇ ಸಾವಯವ ಕೃಷಿ ಬಗ್ಗೆ ಪತ್ರಿಕೆಗಳಲ್ಲಿ ಲೇಖನಗಳು ಬರತೊಡಗಿದವು. ಅಲ್ಲಲ್ಲಿ ಸಾವಯವ ಕೃಷಿ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರಗಳೂ ನಡೆಯುತ್ತಿದ್ದವು. ಅಂಥದ್ದೇ ಒಂದು ಕಾರ್ಯಾಗಾರಕ್ಕೆ ಹೋಗಿ ಸಾವಯವ ಕೃಷಿಯ ಮಹತ್ವವನ್ನು ಮನಗಂಡೆ. ಪಾಲಿ ಹೌಸ್ ಮಾಡ್ಕಳಿ. ಇದರಿಂದ ಬೆಳೆ ಬೆಳೆದ್ರೆ ಒಳ್ಳೆ ಲಾಭ ಬರ್ತದೆ ಎಂದು ಹಾರ್ಟಿಕಲ್ಚರ್ ಡಿಪಾರ್ಟ್‌ಮೆಂಟ್‌ನವರು ಹೇಳಿದ್ರು. ನೋಡೋಣ ಎಂದು ಸಣ್ಣ ಪ್ರಮಾಣದಲ್ಲಿ ಶುರುಮಾಡಿದ್ವಿ. ಅರ್ಧ ಎಕರೆಯಲ್ಲಿ ಕ್ಯಾಪ್ಸಿಕಂ ಹಾಕಿದೀವಿ. ಕೃಷಿ ಭಾಗ್ಯ ಯೋಜನೆಯಲ್ಲಿ ಸಹಾಯಧನ ಅಂತ ಪಾಲಿಹೌಸ್‌ಗೆ ಹತ್ತೂವರೆ ಲಕ್ಷ ರು. ಕೊಟ್ಟರು. ಒಟ್ಟು 18 ಲಕ್ಷ ರೂ. ಸಾಲ ತಗೊಂಡೆ. ಪಾಲಿಹೌಸ್‌ಗೆ ಮತ್ತು ಇತರ ಖರ್ಚು ಎಂದು 15 ಲಕ್ಷ ರೂ. ಖರ್ಚು ಬಂತು. ಮೊದಲ ಬಾರಿಗೆ 3 ಲಕ್ಷ ರು. ಬೆಳೆ ತೆಗೆಯೋಕೆ ಆಯ್ತು. ಈಗ ಎಂಟೂವರೆ ಟನ್ ಬೆಳೆಯೋದಿಕ್ಕೆ ಸಾಧ್ಯವಾಗಿದೆ ಎನ್ನುವ ಕಮಲಮ್ಮ, ಕ್ಯಾಪ್ಸಿಕಂ ಅನ್ನು ವಿದೇಶಕ್ಕೆ ರಫ್ತು ಮಾಡುತ್ತಾರೆ.
Advertisement
ಈಗ ನಾವು ಹಾಕಿರೋ ಬೆಳೆ ಶೇ. 100ರಷ್ಟು ಸಕ್ಸೆಸ್ ಆಗತ್ತೆ. ರೇಟು ಚೆನ್ನಾಗಿ ಕೊಡ್ತಾರೆ. 3 ಜಿ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಅವರೇ ಬೀಜವನ್ನೂ ಕೊಡುತ್ತಾರೆ. ನಾನೇ ಬೀಜ ತಂದು ಸಸಿ ಮಾಡುತ್ತೇನೆ. ಅವರೇ ಬಂದು ಪ್ಯಾಕ್ ಮಾಡಿಕೊಂಡು ಹೋಗುತ್ತಾರೆ. ಹಾಗಾಗಿ ನಮಗೆ ಮಾರುಕಟ್ಟೆಯ ಸಮಸ್ಯೆ ಇಲ್ಲ. ನಾವು ಕ್ಯಾಪ್ಸಿಕಂನಲ್ಲಿ ರುಜುವಾನ್ ತಳಿಯನ್ನು ಹಾಕಿದ್ದೇವೆ. ಕೆಂಪು,ಹಸಿರು, ಹಳದಿ ಹೀಗೆ 3 ಬಣ್ಣಗಳಿವೆ. ಈ ಬಣ್ಣದ ಕ್ಯಾಪ್ಸಿಕಂಗೆ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಅದು ತುಂಬ ಪೌಷ್ಟಿಕವಂತೆ. ಆರೋಗ್ಯಕ್ಕೆ ಒಳ್ಳೆಯದೂಂತ ಅಲ್ಲಿನವರು ಇವನ್ನು ಹೆಚ್ಚು ಬಳಸುತ್ತಾರೆ. ನಮ್ಮ ದೇಶದಲ್ಲಿ ಬಣ್ಣದ ಕ್ಯಾಪ್ಸಿಕಂಗೆ ಹೆಚ್ಚಿನ ಬೇಡಿಕೆ ಇಲ್ಲ. ಇಲ್ಲೇನಿದ್ದರೂ ಹಸಿರು ಬಣ್ಣದ ಕ್ಯಾಪ್ಸಿಕಂ ಮಾತ್ರ ಕೊಳ್ಳುತ್ತಾರೆ.
ಒಂದು ಬೀಜಕ್ಕೆ 7 ರೂ. ನಂತೆ ಹೊಸೂರಿಗೆ ಹೋಗಿ ತರುತ್ತೇವೆ. ಒಟ್ಟು 7 ಸಾವಿರ ಬೀಜವನ್ನು 70 ಸಾವಿರ ರು. ಕೊಟ್ಟು ತಂದಿದ್ದೇನೆ. ತಂದ ಬೀಜಗಳೆಲ್ಲವೂ ಸಸಿಯಾಗಿವೆ. ಯಾವುದೂ ನಷ್ಟ ಆಗಿಲ್ಲ. 25 ಟ್ರಾಕ್ಟರ್ – ಹಸುವಿನ ಗೊಬ್ಬರ, ಜಿಂಕು, ಸ್ವಲ್ಪ ಜಿಪ್ಸಮ್, ಹೊಂಗೆ ಹಿಂಡಿ, ಬೇವಿನ ಹಿಂಡಿ, ಎಳ್ಳು ಹಿಂಡಿ, ಹರಳು ಹಿಂಡಿ …ಇವೆಲ್ಲವನ್ನೂ ಬೆಡ್‌ಗೆ ಬೆರೆಸಿ ಉಳುಮೆ ಮಾಡಿಸ್ತೀವಿ. ನಂತರ ಬೆಡ್ ಕಟ್ಟಿ ಸಸಿ ಕೂರಿಸ್ತೀವಿ. ಅಂದರೆ ಮಣ್ಣಿನ ಬದು. ಸಸಿ ಹಾಕಿದ ಮೇಲೆ ಪ್ರತಿಯೊಂದು ಸಸಿಗೂ ಒಂದೊಂದು ಕೋಲು ಕಟ್ಟುತ್ತೇವೆ. ಅದಕ್ಕೆ ಎತ್ತರಕ್ಕೆ ಬೆಳೆಯುವಂತೆ ದಾರ ಕಟ್ಟುತ್ತ ಹೋಗುತ್ತೇವೆ. ಅದು ಎತ್ತರಕ್ಕೆ ಬೆಳೆಯುತ್ತ ಹೋಗುತ್ತದೆ.
ಮುಖ್ಯವಾಗಿ ಪಾಲಿಹೌಸ್‌ನೊಳಗೆ ಬೆಳೆಯುವ ಗಿಡಗಳು ತುಂಬ ಸೂಕ್ಷ್ಮ. ಹಾಗಾಗಿ ಅವುಗಳಿಗೆ ಇನ್‌ಫೆಕ್ಷನ್ ಆಗದ ಹಾಗೆ ನೋಡ್ಕೊàಬೇಕು. ಬಾಗಿಲ ಬಳಿ ನೀರು ಇಟ್ಟು ಅದರಲ್ಲಿ ಔಷಧ ಇಡುತ್ತೇವೆ. ಅಲ್ಲಿ ಕಾಲು ತೊಳೆದು ಒಳಕ್ಕೆ ಬರಬೇಕು. ಇದಲ್ಲದೆ ಬೇವಿನೆಣ್ಣೆ, ನೀಮ್ ಸೋಪ್‌ನ ರಸವನ್ನೂ ಗಿಡಗಳಿಗೆ ಸಿಂಪಡಿಸುತ್ತೇವೆ. ಇದರಿಂದ ಹುಳಗಳು ಬರುವುದಿಲ್ಲ. ಇಷ್ಟರ ಜತೆಗೆ ಸ್ವಲ್ಪ ರಾಸಾಯನಿಕ ಗೊಬ್ಬರವನ್ನೂ ಬೆರೆಸುತ್ತೇವೆ. ಇಲ್ಲದಿದ್ದಲ್ಲಿ ಬೆಳೆ ಚೆನ್ನಾಗಿ ಬರುವುದಿಲ್ಲ ಎಂದು ಪಾಲಿಹೌಸ್ ಕತೆಯನ್ನು ಬಿಚ್ಚಿಡುತ್ತಾರೆ ಕಮಲಮ್ಮ.
ಒಂದು ಎಕರೆಯಲ್ಲಿ ರೇಷ್ಮೆ ಬೆಳೆದು, ಅದರಲ್ಲೂ ಭರ್ಜರಿ ಯಶಸ್ಸು ಕಂಡಿದ್ದಾರೆ. ಮಾವಿನ ಹಣ್ಣಿಗಾಗಿ ಪ್ಯಾಕ್‌ಹೌಸ್ ಮಾಡಿಸಿದ್ದಾರೆ. ಹಣ್ಣು ಶೇಖರಣೆ ಮಾಡಿ ಮಾಡಿ ಕಳುಹಿಸುತ್ತಾರೆ. ಯಾವುದೇ ಕೆಮಿಕಲ್ ಬಳಕೆಯಾಗದ ಕಮಲಮ್ಮನವರ ತೋಟದ ಮಾವಿನ ಹಣ್ಣುಗಳಿಗೆ ತುಂಬ ಬೇಡಿಕೆ ಇದೆ.
ಸರ್ಕಾರದಿಂದ ಇಷ್ಟೊಂದು ಸಹಾಯ ಧನವನ್ನು ಹಾಗೂ ಕೃಷಿಯಲ್ಲಿನ ಪ್ರತಿ ಯೋಜನೆಯನ್ನೂ ಇಷ್ಟು ಅದ್ಭುತವಾಗಿ ಬಳಸಿಕೊಂಡಿರಲು ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ, ತೋಟಗಾರಿಕೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆಗಳಿಗೆಲ್ಲ ಹೋಗ್ತಾ ಇತೇìನೆ. ಪತ್ರಿಕೆಗಳಲ್ಲಿ ಈ ಕುರಿತು ಓದುತ್ತಿರುತ್ತೇನೆ. ರೇಡಿಯೋ, ಟಿವಿಗಳಲ್ಲಿ ಬರುವ ಕೃಷಿ ಕಾರ್ಯಕ್ರಮಗಳನ್ನು ನೋಡುತ್ತಿರುತ್ತೇನೆ. ಹಾಗಾಗಿ ನನಗೆ ಎಲ್ಲ ಮಾಹಿತಿಗಳೂ ಸಿಗುತ್ತವೆ. ನಾವು ಮನೆಯಲ್ಲೇ ಕುಂತಿದ್ದರೆ ಏನೂ ಗೊತ್ತಾಗುವುದೇ ಇಲ್ಲ. ನಾವೇ ಹೋಗಿ ತಿಳಿದುಕೊಳ್ಳಬೇಕು ಎನ್ನುತ್ತಾರೆ. ಈ ಗಟ್ಟಿಗಿತ್ತಿಯ ಯಶೋಗಾಥೆ ರೈತಾಪಿ ಜನರಿಗೆ ಹಾಗೂ ಸಾಧನೆ ಮಾಡಬೇಕು ಅನ್ನುವವರಿಗೆ ಮಾದರಿಯಾಗಲಿ.
“ಸಮಗ್ರ ಕೃಷಿಯ ಮಹತ್ವವೇ ಅದು. ಒಂದು ಹೋದರೆ ಇನ್ನೊಂದರಲ್ಲಿ ಚೇತರಿಸ್ಕೋಬಹುದು ರೈತ. ಹಾಗಾಗಿ ನಾನು ಎಲ್ಲ ರೈತರನ್ನೂ ಕೇಳಿಕೊಳ್ಳುವುದಿಷ್ಟೇ. ಯಾವತ್ತೂ ಒಂದೇ ಬೆಳೆಯನ್ನು ನೆಚ್ಚಿಕೊಳ್ಳದಿರಿ. ಒಂದು ನಷ್ಟವಾದರೆ ಇನ್ನೊಂದರಲ್ಲಿ ಲಾಭ ಖಂಡಿತ ಸಿಗುತ್ತದೆ’-ಕಮಲಮ್ಮ. ಜೀವಾಮೃತವೇ ಭೂಮಿಗೆ ಆಧಾರ
ಇನ್ನು ಭೂಮಿಗೆ ಜೀವಾಮೃತ ಬಳಸ್ತೀವಿ. 200 ಲೀ. ನೀರು, 10 ಕೆಜಿ ಸಗಣಿ, 2 ಕೆಜಿ ಬೆಲ್ಲ, 10 ಲೀ ಬೆಲ್ಲ. 1 ಕೆಜಿ ಕಡ್ಲೆ ಹಿಟ್ಟು. ಇಷ್ಟನ್ನೂ 7 ದಿನ ಕೊಳೆ ಹಾಕಿ ಗೋಣಿ ಚೀಲದಲ್ಲಿ ಬಾಯಿ ಕಟ್ಟುತೀನಿ. ದಿನಕ್ಕೆ ಸುತ್ತ ಸುತ್ತುಬಿಟ್ಟು ಇಡ್ತೀವಿ. 7 ದಿನದ ಮೇಲೆ ಡ್ರಂಚಿಂಗ್ ಮಾಡುತ್ತೇವೆ. ಆಗ ಕಾಯಿ ಗಾತ್ರ ದಪ್ಪ ಚೆನ್ನಾಗಿ ಬರತ್ತೆ. ಯಾವ ಕಾಯಿಲೆನೂ ಬರಲ್ಲ. ಬತ್ತ ರಾಗಿ, ತೊಗರಿ, ಎಲ್ಲ ಬೆಳೀತಿದ್ದೆ. ಆದರೆ ಅವೆಲ್ಲಕ್ಕಿಂತ ಪಾಲಿಹೌಸ್ ನಿಂದ ಒಳ್ಳೆ ಲಾಭ ಇದೆ. ಇನ್ನೂ ಅರ್ಧ ಎಕರೆ ತಗೋಬೇಕು ಅಂದುಕೊಂಡಿದ್ದೇನೆ ಎನ್ನುವ ಕಮಲಮ್ಮ ಇಡೀ ರಾಮನಗರ ಜಿಲ್ಲೆಯಲ್ಲಿ ಕ್ಯಾಪ್ಸಿಕಮ್ ಹಾಕಿದವರಲ್ಲಿ ಮೊದಲಿಗರು. ಪ್ರಶಸ್ತಿಗಳು
2009ರಲ್ಲಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿ ಮಹಿಳೆ. ಕೆನರಾಬ್ಯಾಂಕ್‌ನ ರಾಜ್ಯ ಮಟ್ಟದ ಶ್ರೇಷ್ಠ ಕೃಷಿ ಮಳೆ, ಕಾರ್ಪೊರೇಷನ್ ಬ್ಯಾಂಕ್‌ನ ಪ್ರಶಸ್ತಿ, ನವದೆಹಲಿಯಲ್ಲಿ ಸಮಗ್ರ ಕೃಷಿಗಾಗಿ ಅತ್ಯುತ್ತಮ ಕೃಷಿ ಮಳೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ 15ಕ್ಕೂ ಅಧಿಕ ಪ್ರಶಸ್ತಿಗಳು ಬಂದಿವೆ. ಭಾರತಿ ಹೆಗಡೆ