ಉತ್ತರ ಕರ್ನಾಟಕದ ರೈತರೆಲ್ಲ ಬರದ ಏಟಿನಿಂದ ತತ್ತರಿಸಿ ಹೋಗಿದ್ದಾರೆ. ಮಳೆರಾಯ ನಮ್ಮ ಬದುಕಿನೊಂದಿಗೆ ಹೀಗೇ ಆಟವಾಡಿದರೆ ಗತಿಯೇನು ಎಂದು ಯೋಚಿಸಿ ಕಂಗಾಲಾಗಿದ್ದಾರೆ. ಆದರೆ ಬಾಗಲಕೋಟೆ ಜಿಲ್ಲೆ ಬಸವನ ಬಾಗೇವಾಡಿಯ ಹೂನಪ್ಪರಗಿ ಗ್ರಾಮದ ವಿಠ್ಠಪ್ಪ ಪರಸಪ್ಪ ನಾಯ್ಕೊಡಿಗೆ ತಟ್ಟಿಲ್ಲ. ಒಂದು ಎಕರೆ ಜಮೀನಿನಲ್ಲಿ ಕ್ಯಾಪ್ಸಿಕಾಮ್ ಬೆಳೆಯುತ್ತಾ, 6 ತಿಂಗಳಿಗೇ 13 ಲಕ್ಷ ಲಾಭ ಮಾಡಿ ನೆಮ್ಮದಿಯಾಗಿದ್ದಾರೆ. ಬರ ಇವರನ್ನು ನೋಡಿ ಹೆದರಿದೆಯೇ ಅನ್ನೋ ಅನುಮಾನ ರೈತರಿಗೆ ಶುರುವಾಗಿದೆ.
ರೈತ ವಿಠ್ಠಪ್ಪ ಪರಸಪ್ಪ ನಾಯ್ಕೊಡಿ ಅವರಿಗೆ 8 ಎಕರೆ ಜಮೀನಿದೆ. 4 ಎಕರೆಯಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. 1 ಎಕರೆ ಜಮೀನಿನಲ್ಲಿ ಹಸಿರು ಮನೆ ಘಟಕ ನಿರ್ಮಿಸಿ ವಿವಿಧ ತರಕಾರಿ, ಹೂ, ಹಣ್ಣುಗಳನ್ನು ಬೆಳೆಯುತ್ತಾರೆ. ಇನ್ನುಳಿದ 3 ಎಕರೆ ಜಮೀನಿನಲ್ಲಿ ಬಿಳಿ ಜೋಳ, ಮೆಕ್ಕೆಜೋಳ, ಸಜ್ಜೆ, ತೊಗರಿ ಇದೆ. ಈ 8 ಎಕರೆ ಜಮೀನಿಗೆ ತಿಪ್ಪೆ ಗೊಬ್ಬರಕ್ಕಾಗಿ 4 ರಿಂದ 5 ಎಮ್ಮೆಗಳು ಮತ್ತು ಆಕಳು ಹಾಗೂ ಮೇಕೆಗಳನ್ನು ಸಾಕಿದ್ದಾರೆ. ಕೃಷಿ ಕೆಲಸದಲ್ಲಿ ಮನೆಯವರೇ 3 ರಿಂದ 4 ಜನ ಕೈ ಜೋಡಿಸುವುದರಿಂದ ಆಳುಗಳು ಜಾಸ್ತಿ ಬೇಕಿಲ್ಲ.
ವಿಠ್ಠಪ್ಪ ಪರಸಪ್ಪ ನಾಯ್ಕೊಡಿ ರಾಸಾಯನಿಕ ಗೊಬ್ಬರವನ್ನು ಉಪಯೋಗಿಸುವುದಿಲ್ಲ. ಗೋ ಮೂತ್ರ, ಸಗಣಿ, ಕೆರೆ ಮಣ್ಣು ಬಳಕೆ ಮಾಡುತ್ತಾರೆ. ದ್ರಾಕ್ಷಿ ಬೆಳೆಗೂ ಇದನ್ನೇ ಉಪಯೋಗಿಸುತ್ತಾರೆ. ಒಂದು ಎಕರೆಯಲ್ಲಿ ದೊಡ್ಡ ಪ್ರಮಾಣದ ಉದ್ದದ ಮಡಿ ಮಾಡಿ, ಅದರ ಮೇಲೆ ಕೆಂಪು ಮಣ್ಣು, ತಿಪ್ಪೆಗೊಬ್ಬರ ಹಾಗೂ ಜೀವಾಮೃತ ಸಿಂಪಡಿಸುತ್ತಾರೆ. 1/2 ಪುಟ್‌ಗೆ ಬಣ್ಣ ಬಣ್ಣದ ದೊಣ್ಣ ಮೆಣಸಿನಕಾಯನ್ನು ನಾಟಿ ಮಾಡಿದ್ದಾರೆ. ದೊಣ್ಣ ಮೆಣಸಿನ ಕಾಯಿ ಬೆಳೆಯುವುದಕ್ಕೆಂದೇ ಹಸಿರು ಮನೆ ನಿರ್ಮಿಸಿದ್ದಾರೆ.
ಏಪ್ರಿಲ್ ಮತ್ತು ಮೇ ತಿಂಗಳು ಕ್ಯಾಪ್ಸಿಕಾಮ್‌ಗೆ ಒಳ್ಳೆ ಮಾರುಕಟ್ಟೆ. ಆಗ ಕೆ.ಜಿ.ಗೆ 50 ರಿಂದ 60 ರೂಪಾಯಿ ವರೆಗೆ ಲಾಭ ಸಿಗುತ್ತದೆ. ಜೂನ್, ಜುಲೈನಲ್ಲಿ 35 ರಿಂದ 40 ರೂಪಾಯಿ ಲಾಭ ಸಿಗುತ್ತದೆ. ಅದಕ್ಕೂ ಮೊದಲು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಿಂಗಳಿಗೆ 8 ರಿಂದ 10 ಟನ್ ವರೆಗೆ ಬಂಪರ್ ಬೆಳೆ ಸಿಗುತ್ತದೆ. ಕ್ಯಾಪ್ಸಿಕಾಮ್ ಬೆಳೆಗೆ ಜೀವಾಮೃತ ಸಿಂಪಡನೆ ಮಾಡುವುದರಿಂದ ಪ್ರತಿವಾರ 2000 ರಿಂದ 2,500 ಕೆ.ಜಿ ಫಸಲು ಬರುತ್ತದೆ.
ಪ್ರತಿವಾರ 2000 ರಿಂದ 2500 ಕೆ.ಜಿ. ಬಣ್ಣ ಬಣ್ಣದ ಕ್ಯಾಪ್ಸಿಕಾಮ್ ಸಿಗುತ್ತಿದೆ. ಬೆಂಗಳೂರು, ಮುಂಬಯಿ, ಗೋವಾ, ಚೆನೈ, ಹೈದರಾಬಾದ್ ಇವರ ಮಾರುಕಟ್ಟೆ. ಪ್ರತಿವಾರ 80 ರಿಂದ 90 ಸಾವಿರ ಆದಾಯ ಬರುತ್ತದೆ ಎನ್ನುತ್ತಾರೆ ವಿಠ್ಠಪ್ಪ.
ಪ್ರಕಾಶ.ಜಿ. ಬೆಣ್ಣೂರ